(ARTICAL):ಮನಸ್ಫೂರ್ತಿ ಮಕ್ಕಳ ಬೇಸಿಗೆ ಶಿಬಿರ ಇದನ್ನು ಮಾನಸಧಾರಾ ಟ್ರಸ್ಟ್ ಮತ್ತು ನಮ್ಮ ಹಳ್ಳಿ ಥಿಯೇಟರ್ ನ ಸಹಯೋಗದಲ್ಲಿ ಹಲವು ವರ್ಷಗಳಿಂದ ಉಚಿತವಾಗಿ ನಡೆಸಿಕೊಂಡು ಬರುತ್ತಿದೆ. ಮಕ್ಕಳಿಗೆ ಶಿಬಿರದಲ್ಲಿ ಬೇಕಾದ ಸಾಮಗ್ರಿಗಳನ್ನು, ಮಧ್ಯಾಹ್ನದ ಊಟವನ್ನು ನೀಡಿ, ಜೊತೆಗೆ ಹಾಡು, ನೃತ್ಯ, ನಾಟಕ, ಮೂಕಾಭಿನಯ, ರೂಪಕಗಳನ್ನು ಕಲಿಸಿಕೊಟ್ಟು ದೊಡ್ಡ ಸಭಾಂಗಣದಲ್ಲಿ ಕಾರ್ಯಕ್ರಮ ಏರ್ಪಡಿಸಿ ಎಲ್ಲಾ ಪೋಷಕರ ಎದುರು ಮಕ್ಕಳು ಕಾರ್ಯಕ್ರಮ ನೀಡಿ, ಎಲ್ಲರಿಂದಲೂ ಮೆಚ್ಚುಗೆಯ ಮಾತುಗಳನ್ನು ಮಕ್ಕಳಿಗೆ ತಿಳಿಸಿದಾಗ ಏನೋ ಸಾರ್ಥಕತೆ ನಮ್ಮಲ್ಲಿ. ಮೊದಲಬಾರಿಗೆ ಈ ಶಿಬಿರವನ್ನು ಆಯೋಜಿಸಿದ್ದಾಗ ನಮ್ಮ ನಿರೀಕ್ಷೆಗಿಂತ ಹೆಚ್ಚಾಗಿ ಮಕ್ಕಳು ಬಂದಿದ್ದರು. ನಮ್ಮಲ್ಲಿ ಎಷ್ಟು ಸಾಧ್ಯವೋ ಅಷ್ಟು ಮಕ್ಕಳನ್ನು ತೆಗೆದುಕೊಂಡೆವು. ದಿನವೂ ಅವರಿಗೆ ವಿಶೇಷ ತರಗತಿಗಳು. ಮಧ್ಯಾಹ್ನದ ನಂತರ ತರಬೇತಿ ಇರುತ್ತಿತ್ತು. ಕ್ರಾಫ್ಟ್, ಮಣ್ಣಿನಗೊಂಬೆಗಳನ್ನು ಮಾಡುವುದು, ಚಿತ್ರಕಲೆ, ಕಸದಿಂದ ರಸ ಎಂಬಂತೆ ತೆಂಗಿನಚಿಪ್ಪಿನ ಮೇಲೆ ಬಣ್ಣದ ರಚನೆ, ಮುಖವಾಡ, ಸೀಡ್ ಬಾಲ್, ಬೊಂಬೆಆಟ ಇವುಗಳ ಜೊತೆಗೆ ಆಪ್ತಸಮಾಲೋಚಕರು, ವೈದ್ಯರಿಂದ ಆಹಾರ-ಆರೋಗ್ಯ, ವರ್ತನೆಗಳು, ನಡವಳಿಕೆಗಳು, ಮೌಲ್ಯಗಳ ಒಂದಿಷ್ಟು ಮಾಹಿತಿ, ಸಿಗುತ್ತಿತ್ತು. ಮಕ್ಕಳ ಬಳಿ ಏನನ್ನೂ ಪಡೆಯದೇ ಇರುವ ಕಾರಣ ಅನೇಕ ಸಂಪನ್ಮೂಲ ವ್ಯಕ್ತಿಗಳು ಅವರಿಗೆ ನೀಡುವ ಗೌರವಧನವನ್ನೂ ಹಿಂದಿರುಗಿಸಿ, ‘ಇದನ್ನು ಈ ಶಿಬಿರಕ್ಕೆ ಬಳಸಿಕೊಳ್ಳಿ’ ಎಂದು ಹೇಳುತ್ತಿದ್ದರು. ಅಂತಿಮವಾಗಿ ಕಾರ್ಯಕ್ರಮ ನಡೆಸಲು ಸ್ಥಳ ನಿಗಧಿ ಮಾಡಿದ್ದಾಯಿತು. ಕಾರ್ಯಕ್ರಮದಲ್ಲಿ ಪ್ರಾರ್ಥನೆಗಿಂತಲೂ ಭರತನಾಟ್ಯದ ಮೂಲಕ ಆರಂಭಿಸಿದರೆ ಹೇಗೆ? ಎಂದು ಮಂಜುನಾಥಸ್ವಾಮಿ ಹೇಳಿದಾಗ ಆ ಶಿಬಿರದಲ್ಲಿದ್ದ ರಕ್ಷಿತ.ಸಿ.ಡಿ ಭರತನಾಟ್ಯ ತರಗತಿಗೆ ಹೋಗುತ್ತಿರುವ ಸಂಗತಿ ತಿಳಿದು ಅವಳ ಬಳಿ ಕೇಳಿದಾಗ, ‘ಆಗಬಹುದು ಅಣ್ಣ, ಚೆನಾಗಿ ಮಾಡ್ತಿನಿ. ನಿಮ್ಮಗಳಿಗೆ ಖುಷಿ ಆಗುವ ಹಾಗೆ ಮಾಡಿ ತೋರಿಸುವೆ’ ಎಂದು ಉತ್ಸಾಹದಿಂದಲೇ ಒಪ್ಪಿಕೊಂಡಳು. ದಿನವೂ ಅಭ್ಯಾಸ ಮಾಡುತ್ತಿದ್ದಳು. ಎಲ್ಲರಿಗೂ ಒಂದು ರೀತಿಯಲ್ಲಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದೇವೆ. ಹೇಗೆ ಬರುತ್ತದೋ? ಏನೋ? ಎಂಬ ಸಣ್ಣ ಅಂಜಿಕೆಯಿತ್ತು. ಆದರೆ ಅವೆಲ್ಲವನ್ನೂ ಮೀರಿದ ಕಾರ್ಯಕ್ರಮ ಶಿಬಿರದ ಮಕ್ಕಳಿಂದ ನಡೆಯಿತು. ರಕ್ಷಿತಳ ಭರತನಾಟ್ಯ ಹೊರತುಪಡಿಸಿ ಉಳಿದೆಲ್ಲವುಗಳು ಗುಂಪುಚಟುವಟಿಕೆಗಳಾಗಿದ್ದವು. ಎಲ್ಲರನ್ನೂ ಪ್ರೇಕ್ಷಕರು ಮೆಚ್ಚಿಕೊಂಡಿದ್ದಂತು ಸುಳ್ಳಲ್ಲ. ಅಲ್ಲಿಗೇ ಮೊದಲ ಬಾರಿಗೆ ಬೇಸಿಗೆ ಶಿಬಿರ ಮುಕ್ತಾಯವಾಗಿತ್ತು. ಯಶಸ್ವಿಯೂ ಆಗಿತ್ತು. ಮಕ್ಕಳಂತೂ, ‘ಈ ಶಿಬಿರವನ್ನು ಇನ್ನೂ ಒಂದುವಾರಕ್ಕೆ ಮುಂದುವರೆಸಿ’ ಎಂಬ ಬೇಡಿಕೆಗಳನ್ನಿಟ್ಟರು. ನಮಗೂ ಅದೇ ಆಸೆ ಇತ್ತು. ಆದರೆ ಆಗಬೇಕಲ್ಲವೇ? ಮುಂದಿನ ವರ್ಷ ಮತ್ತೆ ಸಿಗೋಣ ಆ ಸಮಯಕ್ಕೆ ಬಿಡುವು ಮಾಡಿಕೊಳ್ಳಿರಿ. ಎಂದು ಹೇಳಿ ಎಲ್ಲಾ ಮಕ್ಕಳನ್ನು ಕಳಿಸಿಕೊಟ್ಟಿದ್ದಾಯಿತು. ಅನೇಕ ಮಕ್ಕಳನ್ನು ಎಲ್ಲರನ್ನು ಪ್ರೀತಿಯಿಂದ ಮಾತನಾಡಿಸಿ ಒಲ್ಲದ ಮನಸ್ಸಿನಿಂದ ಹೋದರು. ರಕ್ಷಿತ ಮುಂದಿನ ದಿನಗಳಲ್ಲಿ ನಮ್ಮ ಸಾಂದೀಪನಿ ಶಾಲೆಗೆ ಸೇರಿದಳು. ಶಾಲೆಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದು ಕಡಿಮೆ. ಹಾಗೆ ನೋಡಿದರೆ ಶಾಲಾ ಅವಧಿಯಲ್ಲಿ ಭರತನಾಟ್ಯವನ್ನು ಮಾಡಲೇ ಇಲ್ಲ. ಶಾಲಾವಾರ್ಷಿಕೋತ್ಸವದಲ್ಲಿ ಕಿರುನಾಟಕವನ್ನು ಮಾಡಿದ್ದಳು. ಪ್ರತಿಭಾಕಾರಂಜಿಯ ಭಾಷಣ, ಜನಪದಗೀತೆ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಳು. ಪಿಯುಸಿಯನ್ನು ಪೇಸ್ ಕಾಲೇಜ್ ನಲ್ಲಿ ಮುಗಿಸಿ ಡಿಗ್ರಿಗೆ ನಮ್ಮ ಮಾನಸ ಸಂಸ್ಥೆಯ ಕಟೀಲು ಅಶೋಕ್ ಪೈ ಸ್ಮಾರಕ ಕಾಲೇಜ್ ಗೆ ಸೇರಿಕೊಂಡಳು. ಆ ಸಮಯದಲ್ಲೂ ನಮ್ಮ ಶಿಬಿರಕ್ಕೆ ಬಂದು ‘ಅಣ್ಣ ನಾನು ಅದನ್ನು ಹೇಳಿಕೊಡ್ತಿನಿ, ಇದನ್ನು ಹೇಳಿ ಕೊಡ್ತಿನಿ’ ಎಂದು ಖುಷಿಯಿಂದಲೇ ಬರುತ್ತಿದ್ದಳು. ನಮಗೂ ಸಣ್ಣ ಬಿಡುವು ಸಿಗುತ್ತಿದ್ದುದರಿಂದ ನಾವುಗಳು ಸಹ ಬೇಡವೆನ್ನದೇ ‘ಆಗಲಿ ಅದೇನು ಹೇಳಿಕೊಡ್ತಿಯೋ ಹೇಳಿ ಕೊಡು’ ಎಂದು ಅವಳಿಗೆ ಬಿಟ್ಟು ಸುಮ್ಮನಾಗುತ್ತಿದ್ದೆವು. ಹೀಗೆ ಶಿಬಿರಕ್ಕೆ ಬಂದಿದ್ದ ವಿದ್ಯಾರ್ಥಿನಿಯೊಬ್ಬಳು ಈಗ ಕಲಿಸುವ ಹಂತಕ್ಕೆ ಬಂದಿದ್ದಾಳೆ. ಹಿಂದಿನ ಶಿಬಿರದಲ್ಲಿ ಭಾಗವಹಿಸಿದ್ದ ಕೆಲವು ಮಕ್ಕಳು ಮಾತ್ರ ಈ ಶಿಬಿರದಲ್ಲೂ ಇದ್ದರು. ಅವರಂತೂ ಉಳಿದವರಿಗೆ ‘ಸೀನಿಯರ್’ ಎನ್ನುವ ರೀತಿಯಲ್ಲಿದ್ದರು. ಎಲ್ಲರೊಂದಿಗೆ ನಿರ್ಭೀತಿಯಿಂದಿದ್ದರು. ಎಲ್ಲಾ ಚಟುವಟಿಕೆಗಳಲ್ಲಿ ಎಲ್ಲರನ್ನೂ ಪಾಲ್ಗೊಳ್ಳುವಂತೆ ಮಾಡುವ ಮೂಲಕ ಲವಲವಿಕೆಯಿಂದ ಓಡಾಡುತ್ತಿದ್ದರು. ಹಲವು ವರ್ಷಗಳು ಹಿಗೆಯೇ ಶಿಬಿರ ಸಾಗಿ ಬಂದಿದೆ. ಬರುತ್ತಲೇ ಇದೆ. ಈ ವರ್ಷವೂ ಶಿಬಿರವನ್ನು ಆಯೋಜಿಸುವ ಸಮಯದಲ್ಲಿ ಅನೇಕ ಎನ್.ಜಿ.ಓ ಗಳು ಕೈ ಜೋಡಿಸಿದರು. ಡೂ ಮೈಂಡ್ಸ್ ಸಂಸ್ಥೆಯ ವತಿಯಿಂದ ಮಕ್ಕಳಿಗೆ ಗಣಿತದ ತ್ರಿಭುಜ, ಚೌಕ, ಗೋಪುರ ಹೀಗೆ ಹಲವು ಮಾದರಿಗಳನ್ನು ಮಕ್ಕಳಿಂದ ಕ್ರಿಯಾಶೀಲವಾಗಿ ಮಾಡಿಸಿದರು. ಕಲಿಕಾನ್ಯೂನ್ಯತೆ ಇರುವ ಮಕ್ಕಳು ಹೆಚ್ಚಿದ್ದರಿಂದ ಅವರಿಗೆ ನಿಧಾನವಾಗಿ ಹೇಳಿಕೊಡಬೇಕಿತ್ತು. ಮನಸ್ಪೂರ್ತಿ ಕಲಿಕಾ ಕೇಂದ್ರದಲ್ಲಿ ಓದಿದ್ದ, ಹಿಂದಿನ ಶಿಬಿರಗಳಲ್ಲಿ ಭಾಗವಹಿಸಿ ಈಗ ಕಾಲೇಜ್ ಓದುತ್ತಿದ್ದ ಒಂದಿಷ್ಟು ಮಕ್ಕಳು ಸ್ವಯಂಸೇವಕರಂತೆ ಈ ಶಿಬಿರದಲ್ಲಿದ್ದು ವಿವಿಧ ಮಕ್ಕಳ ಗುಂಪುಗಳನ್ನು ಮಾಡಿದ್ದಾಗ ಅವರುಗಳ ಜೊತೆ ಸೇರಿ ಹೇಳಿಕೊಡುತ್ತಿದ್ದರು. ಅಗಸ್ತ್ಯ ಫೌಂಡೇಶನ್ ವತಿಯಿಂದ ಮಕ್ಕಳಿಗೆ ಓರೆಗಾಮಿ ಕಲೆಗಳ ಬಗ್ಗೆ ಹೇಳಿಕೊಟ್ಟರು. ಜೊತೆಗೆ ಎಲ್ಲಾ ಮಕ್ಕಳಿಗೂ ಉಚಿತವಾಗಿ ಓರೆಗಾಮಿ ಕಲೆಯ ಮಾದರಿಗಳನ್ನು ಮಾಡುವ ಪುಸ್ತಕವನ್ನು ನೀಡಿದರು. ಕಿಡ್ಸ್ (ಪರಿಸರ ಅಧ್ಯಯನ ಕೇಂದ್ರ)ದ ವತಿಯಿಂದ ಮಕ್ಕಳಿಗೆ ಪರಿಸರದ ಉಪಯೋಗ, ಸಂರಕ್ಷಣೆ, ಪ್ರಾಣಿ-ಪಕ್ಷಿಗಳ ಬಗೆಗೆ ಉತ್ತಮವಾಗಿ ತಿಳಿಸಿಕೊಟ್ಟರು. ಇಂಡಿಯನ್ ಅಮೇರಿಕನ್ ಸಂಸ್ಥೆಯ ವತಿಯಿಂದ ಮಕ್ಕಳಿಗೆ ಸುಲಭವಾಗಿ ಗಣಿತ, ವಿಜ್ಞಾನ, ಕ್ರಾಫ್ಟ್ ಬಗ್ಗೆ ತಿಳಿಸಿಕೊಟ್ಟರು. ಹಲವು ಸಂಸ್ಥೆಗಳಿಂದ ಮಕ್ಕಳಿಗೆ ಹೊಸಹೊಸ ವಿಷಯಗಳನ್ನು ಕಲಿಯಲು ಅನುಕೂಲವಾಯಿತು. ಹಲವು ವರ್ಷಗಳ ನಂತರ ಈಗ ಬೆಂಗಳೂರಿನಲ್ಲಿ ಹೆಚ್ಚಿನ ವಿಧ್ಯಾಭ್ಯಾಸ ಮಾಡುತ್ತಿರುವ ರಕ್ಷಿತ ರಜೆಯ ನಿಮಿತ್ತ ಊರಿಗೆ ಬಂದಿದ್ದಳು. ಶಿಬಿರದ ಫೋಟೋಗಳನ್ನು ನೋಡಿ ‘ಅಣ್ಣ ನಾನು ಈಗ ಊರಿಗೆ ಬಂದಿದ್ದೀನಿ, ಶಿಬಿರದಲ್ಲಿ ಮಕ್ಕಳಿಗೆ ನೃತ್ಯ ಏನಾದರು ಹೇಳಿ ಕೊಡಲಾ?’ ಎಂದಳು. ‘ಧಾರಾಳವಾಗಿ ಬಾ ನಮಗೂ ಸ್ವಲ್ಪ ಭಾರ ಕಡಿಮೆ ಆದ ಹಾಗೆ ಆಗುತ್ತದೆ ಎಂದೆ’. ಖುಷಿಯಿಂದ ಶಿಬಿರಕ್ಕೆ ಬಂದಳು. ಆಗ ತಾನು ಭಾಗವಹಿಸಿದ್ದ ಸಂಗತಿಗಳನ್ನು ಹಂಚಿಕೊಂಡಳು. ಆಗ ಶಿಬಿರದಲ್ಲಿ ಶಿಬಿರಾರ್ಥಿಯಾಗಿ ಭಾಗವಹಿಸಿದ್ದವಳು ಈಗ ಅದೇ ಶಿಬಿರದಲ್ಲಿ ಮಕ್ಕಳಿಗೆ ಕಲಿಸಿಕೊಡಲು ಬಂದಿರುವುದು ಹೆಮ್ಮೆಯ ವಿಷಯವಾಗಿತ್ತು. ಶಿಬಿರದಲ್ಲಿ ಬೆಳಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಇತರ ತರಗತಿಗಳು ನಡೆಯುತ್ತಿದ್ದವು. ಮಧ್ಯಾಹ್ನ ನಾಟಕ, ನೃತ್ಯಗಳ ಅಭ್ಯಾಸ ಇದ್ದುದರಿಂದ ಆ ಸಮಯಕ್ಕೆ ಬರುತ್ತಿದ್ದಳು. ಕೆಲವೊಮ್ಮೆ ಬೆಳಗ್ಗೆಯಿಂದ ಸಂಜೆಯವರೆಗೂ ಶಿಬಿರದಲ್ಲಿರುತ್ತಿದ್ದಳು. ಕೇಳಿದರೆ ‘ಹೇಗಿದ್ದರೂ ರಜೆ ಇದೆಯಲ್ಲ ಅಣ್ಣ. ಸುಮ್ಮನೆ ಮನೇಲಿ ಕೂರೋದಕ್ಕಿಂತ ಇಲ್ಲಿ ಬಂದರೆ ಸಮಯ ಹೋಗೋದೇ ಗೊತ್ತಾಗಲ್ಲ’ ಎನ್ನುತ್ತಿದ್ದಳು. ಕಲಿಯುತ್ತಿದ್ದವಳು ಕಲಿಸುವ ಹಂತಕ್ಕೆ ಬೆಳೆದಿದ್ದು ಸಂತೋಷದ ಸಂಗತಿಯಾಗಿತ್ತು. ಈ ಬಾರಿ ಅಂಬೇಡ್ಕರ್ ಭವನದಲ್ಲಿ ಸಮಾರೋಪ ಕಾರ್ಯಕ್ರಮ ಎಂದು ನಿರ್ಧರಿಸಲಾಯಿತು. ಇನ್ನೇನು ಶಿಬಿರ ಮುಕ್ತಾಯಗೊಳ್ಳಲು ಎರಡು ದಿನ ಇರುವಾಗ ಸಮಾರೋಪದಲ್ಲಿ ಸ್ವಾಗತನೃತ್ಯವನ್ನು ಮಾಡಿಸುವ ಬಗ್ಗೆ ಮಾತನಾಡಿಕೊಂಡಾಗ ಬೇರೆಯವರು ಸಿಗುವುದು ಕಷ್ಟ ಎನಿಸಿತು. ಶಿಬಿರದಲ್ಲಿದ್ದ ಮಕ್ಕಳಲ್ಲಿ ಪೂಜಾ.ಡಿ.ಜಿ ತಾನು ಭರತನಾಟ್ಯ ತರಗತಿಗೆ ಹೋಗುತ್ತಿದ್ದ ಸಂಗತಿಯನ್ನು ತಿಳಿಸಿದಳು. ಅವಳಿಗೆ ಹೇಳಿದೆವು. ಉತ್ಸಾಹದಿಂದ ಒಪ್ಪಿಕೊಂಡು ಅಂತೂಇಂತೂ ಸಿದ್ಧಳಾದಳು. ಅವಳಿಗೆ ಬೇಕಾದ ವಸ್ತ್ರಗಳನ್ನು ಕೊಡಿಸಿದ್ದಾಯಿತು. ಸಮಾರೋಪದ ಕೆಲಸಗಳಲ್ಲಿ ಎಲ್ಲರೂ ತೊಡಗಿಸಿಕೊಂಡಿದ್ದೆವು. ಪೂಜಾಳಿಗೆ ಮೇಕಪ್ ಮಾಡುವ ಬಗ್ಗೆ ಯೋಚಿಸಿದಾಗ ರಕ್ಷಿತಳಿಗೆ ತಿಳಿಸಿದಾಗ, ಫೌಂಡೇಶನ್ ಕ್ರೀಮ್, ಕಾಜಲ್… ಹೀಗೇ ಕೆಲವು ಸಾಮಗ್ರಿಗಳು ಬೇಕೆಂದು ತಿಳಿಸಿದಳು. ‘ತಂದುಕೊಡುವೆವು. ಬೇಗ ಬಾ’ ಎಂದು ಹೇಳಿದೆವು. ನಮಗೋ ಭರತನಾಟ್ಯ ನೋಡಿ ಗೊತ್ತಿತ್ತೇ ಹೊರತು ಅದರ ಮೇಕಪ್ ಬಗ್ಗೆ ತಿಳಿದದ್ದು ಕಡಿಮೆ. ಆದರೂ ಅದಕ್ಕೆ ವ್ಯವಸ್ಥೆ ಮಾಡಿದೆವು. ವೇದಿಕೆ ಕಾರ್ಯಕ್ರಮಕ್ಕೆ ಸಿದ್ಧತೆ ಆಗುತ್ತಿತ್ತು. ಇತ್ತ ಮೇಕಪ ಕೊಠಡಿಯಲ್ಲಿ ಮಕ್ಕಳು ಸಿದ್ಧರಾಗುತ್ತಿದ್ದರು. ಪೂಜಾಳಿಗೆ ವಸ್ತ್ರವನ್ನು ಹಾಕಿ, ಮೇಕಪ್ ಮಾಡತೊಡಗಿದಳು. ಪೂಜಾ, ‘ಅಕ್ಕ ಅದು ಹಾಗಲ್ಲ, ಹೀಗೆ’ ಎಂದು ಏನೇನೋ ಹೇಳುವಾಗ ಪಕ್ಕದಲ್ಲಿದ್ದ ನಾಗಶಯನ, ‘ನೀನು ಸುಮ್ಮನೆ ಇರಮ್ಮ ಅವಳಿಗೆ ತುಂಬಾ ಚೆನಾಗಿ ಗೊತ್ತಿದೆ. ಈ ತರದ ಸಾವಿರಾರು ಕಾರ್ಯಕ್ರಮ ಮಾಡಿದ್ದಾಳೆ. ಅವಳಿಗೆ ಗೊತ್ತಿದೆ’ ಎಂದನು. ಕೆಲವೊಂದು ವಸ್ತುಗಳು ಇಲ್ಲದಿದ್ದಾಗ, ‘ಅಣ್ಣಾ ಅದು ಬೇಕು, ಇದು ಬೇಕು’ ಎನ್ನುತ್ತಿದ್ದಳು. ತಕ್ಷಣಕ್ಕೆ ಸಿಕ್ಕಿದ್ದನ್ನು ಕೊಟ್ಟೆವು. ಸಿಗದೇ ಇದ್ದಾಗ ಏನಾದರೂ ಮಾಡ್ತಿನಿ ಬಿಡಿ ಎಂದು ಅಂತೂ ಇಂತು ಪೂಜಾಳನ್ನು ಸಿದ್ಧಗೊಳಿಸಿದ್ದಳು. ‘ಹೂವು ಒಂದು ಬಾಕಿ ಉಳಿತು ನೋಡಿ’ ಎಂದಳು. ಅದರ ಬಗ್ಗೆ ಆಮೇಲೆ ನೋಡೋಣ ಬಾ ಎಂದು ಕೊಠಡಿಯಿಂದ ಹೊರ ಬಂದಾಗ ಅಲ್ಲಿ ಮತ್ತೊಂದು ನೃತ್ಯಕ್ಕೆ ಸಿದ್ಧರಾಗಿದ್ದ ಮಕ್ಕಳು ಹೂವು ಮುಡಿದು ನಿಂತಿದ್ದರು. ನಾವಿಬ್ಬರೂ ಒಬ್ಬರಿಗೊಬ್ಬರು ನೋಡಿಕೊಂಡು ಆ ಹುಡುಗಿಯ ಬಳಿ ಮಾತನಾಡಿ ಹೂವನ್ನು ಪಡೆದುಕೊಂಡು ಪೂಜಾಳಿಗೆ ನೀಡಿದೆವು. ವೇದಿಕೆ ಕಾರ್ಯಕ್ರಮ ಆರಂಭವಾಯಿತು. ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿ ಸ್ವಾಗತ ನೃತ್ಯ ಆರಂಭವಾಯಿತು. ರಜನಿಪೈ ಮೇಡಂ ಬಳಿ ‘ಎರಡು ದಿನಗಳಲ್ಲಿ ಕಲಿತು ಪ್ರದರ್ಶನ ನೀಡುತ್ತಿದ್ದಾಳೆ’ ಎಂದಾಗ ಸಂತೋಷಪಟ್ಟರು. ‘ಮೊದಲಬಾರಿಗೆ ರಕ್ಷಿತ ಈ ರೀತಿಯ ನೃತ್ಯ ಮಾಡಿದ್ದಳು ಅಲ್ಲವಾ?’ ಎಂದರು. ‘ಹೌದು ಮೇಡಂ. ಈ ನೃತ್ಯಕ್ಕೆ ಆ ಮಗುವಿಗೆ ವಸ್ತ್ರವನ್ನು ತೊಡಿಸಿ, ಮೇಕಪ್ ಕೂಡ ಅವಳೇ ಮಾಡಿದ್ದಾಳೆ. ಜೊತೆಗೆ ಶಿಬಿರದಲ್ಲಿ ಎರಡು ನೃತ್ಯವನ್ನು ಸಹ ಹೇಳಿಕೊಟ್ಟಿದ್ದಾಳೆ’ ಎಂಬ ಸಂಗತಿಯನ್ನು ತಿಳಿಸಿದೆ. ನೃತ್ಯವು ಚೆನ್ನಾಗಿ ಮೂಡಿಬಂದಿತು. ಕೇವಲ ಎರಡು ದಿನಗಳಲ್ಲಿ ಕಲಿತು ಈ ನೃತ್ಯವನ್ನು ಪ್ರದರ್ಶನ ಮಾಡಿ ಎಲ್ಲರ ಮೆಚ್ಚುಗೆಗೆ ಪೂಜಾ ಪಾತ್ರಳಾದಳು. ಶಿಬಿರದಲ್ಲಿ ಸಹಕರಿಸಿದ ಎಲ್ಲರಿಗೂ ಪ್ರಮಾಣಪತ್ರವನ್ನು ನೀಡಲಾಯಿತು. ನಂತರ ಕಾರ್ಯಕ್ರಮಗಳನ್ನು ಮಕ್ಕಳು ಪ್ರಸ್ತುತ ಪಡಿಸಿದರು. ಅನೇಕ ಪೋಷಕರು ಮಕ್ಕಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ವರ್ಷವೂ ತಪ್ಪದೇ ಮಕ್ಕಳನ್ನು ಕಳಿಸುತ್ತೇವೆ ಎಂದರು. ಒಟ್ಟಾರೆಯಾಗಿ ಕಾರ್ಯಕ್ರಮ ಚೆಂದವಾಗಿ ಮೂಡಿಬಂದಿತು. ಸರ್ಕಾರಿ, ಅನುದಾನಿತ ಶಾಲೆಯ ಮಕ್ಕಳು ಜೊತೆಗೆ ಕಲಿಕಾನ್ಯೂನ್ಯತೆ ಇರುವ ವಿಶೇಷ ಚೇತನ ಮಕ್ಕಳು ಈ ಬಾರಿಯ ಶಿಬಿರದಲ್ಲಿದ್ದರು. ಒಂದೆರಡು ಖಾಸಗಿ ಶಾಲೆಯ ಮಕ್ಕಳೂ ಸಹ ಇದ್ದರು. ಎಲ್ಲರೂ ಎಲ್ಲರೊಂದಿಗೆ ಬೆರೆತು. ಹಾಡಿ, ಕುಣಿದು ಕಲಿತು, ಕಾರ್ಯಕ್ರಮ ನೀಡಿದ ಪರಿ ಮಾತ್ರ ಸಂತೋಷ ನೀಡಿತ್ತು. ಎಲ್ಲಾ ಮಕ್ಕಳನ್ನು ಕಳಿಸಿಕೊಟ್ಟು ನಾವುಗಳು ಕೆಲವರೇ ಉಳಿದೆವು. ಅಂಬೇಡ್ಕರ್ ಭವನದ ಮೆಟ್ಟುಲ ಮೇಲೆ ಕುಳಿತು ಎಲ್ಲಾ ಪರಿಕರಗಳನ್ನು ತೆಗೆದುಕೊಂಡು ಹೋಗಲು ಗಾಡಿಗಾಗಿ ಕಾಯುತ್ತ ಕುಳಿತಾಗ ಮೊದಲಬಾರಿಗೆ ಶಿಬಿರಾರ್ಥಿಯಾಗಿ ಬಂದಿದ್ದ ರಕ್ಷಿತ ಈ ಬಾರಿ ಸಂಪನ್ಮೂಲವ್ಯಕ್ತಿಯ ರೂಪದಲ್ಲಿ ಬಂದು ಕಲಿಸಿದ್ದು, ಮಕ್ಕಳೊಂದಿಗೆ ಬೆರೆತಿದ್ದು, ಮಕ್ಕಳಿಗೆ ವಸ್ತ್ರವನ್ನು ತೊಡಿಸಿ, ಮೇಕಪ್ ಮಾಡಿ ಕೈ ಜೋಡಿಸಿದ್ದು ಎಲ್ಲರಿಗೂ ಖುಷಿ ತಂದಿತ್ತು. ‘ಮುಂದಿನ ವರ್ಷವೂ ಸಾಧ್ಯವಾದರೆ ಮತ್ತೊಂದಿಷ್ಟು ಚಟುವಟಿಕೆ ಮಾಡಿಸುತ್ತೇವೆ ಅವಕಾಶ ಕೊಡಿ ಅಣ್ಣ’ ಎಂದು ಕೇಳಿದಾಗ.
Read more