ಇತರೆಶಿವಮೊಗ್ಗ

2000 ಅಡಿಯ ರಾಷ್ಟ್ರಧವಜವನ್ನು ಹಿಡಿದು ‘ಸೌಹಾರ್ದವೆ ಹಬ್ಬ’ ಆಚರಿಸೋಣ.

2000 ಅಡಿಯ ರಾಷ್ಟ್ರಧವಜವನ್ನು ಹಿಡಿದು ‘ಸೌಹಾರ್ದವೆ ಹಬ್ಬ’ ಆಚರಿಸೋಣ.

ಸೌಹಾರ್ದವೇ ಹಬ್ಬ

ದಿನಾಂಕ: 15/09/2023 ಸಮಯ: ಸಂಜೆ 4 ರಿಂದ 6 ಗಂಟೆಯವರೆಗೆ

ಸ್ಥಳ: ನಗರದ ಮೆಗ್ಗಾನ್ ಆಸ್ಪತ್ರೆಯ ಅಂಗಳದಿಂದ ಸೈನ್ಸ್ ಕಾಲೇಜು ಮೈದಾನದವರೆಗೆ

ಶಿವಮೊಗ್ಗದ ಪ್ರಜ್ಞಾವಂತ ಜನತೆಯಲ್ಲಿ ಅರಿಕೆ,

ಸಾಲು ಸಾಲು ಹಬ್ಬಗಳು ಬರುತ್ತಿರುವ ಈ ದಿನಗಳಲ್ಲಿ ಶಿವಮೊಗ್ಗದ ಜನರು ಶಾಂತಿ, ಸಹಬಾಳ್ವೆಯಿಂದ ಎಲ್ಲ ಹಬ್ಬಗಳನ್ನು ಮಾಡಲಿ ಎಂಬ ಸದುದ್ದೇಶದೊಂದಿಗೆ ನಗರದ ಹಲವು ಸಂಘ ಸಂಸ್ಥೆಗಳು, ನಾಗರಿಕರು ಸೇರಿ ಚಿಂತಿಸಿದ ಫಲವಾಗಿ “ಸೌಹಾರ್ದವೇ ಹಬ್ಬ” ಪರಿಕಲ್ಪನೆ ಹುಟ್ಟಿದೆ. ಶಿವಮೊಗ್ಗ ನಗರದ ಏಳಿಗೆಯು ನಗರದ ವ್ಯಾಪಾರಸ್ಥರ, ಉದ್ಯಮಿಗಳ, ನಾಗರಿಕರ, ಆಟೋ ಮತ್ತು ಬಸ್ ಚಾಲಕರ, ಶಾಲಾ ಕಾಲೇಜುಗಳ ಮಕ್ಕಳ, ಎಲ್ಲ ತಾಯಂದಿರ ನೆಮ್ಮದಿಯಲ್ಲಿ ಅಡಗಿದೆ. ಎಲ್ಲ ಧರ್ಮಗಳ ಜನರು ಸಹಬಾಳ್ವೆಯಿಂದ ಸೌಹಾರ್ದಯುತವಾಗಿ, ನಿರುಮ್ಮಳವಾಗಿ ಹಬ್ಬಗಳನ್ನು ಆಚರಿಸುವಂತಾಗಬೇಕು ಎಂಬುದು ಎಲ್ಲರ ಆಶಯ.

ಈ ಬಾರಿ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನೆ ಮತ್ತು ಈದ್ ಮಿಲಾದ್ ಹಬ್ಬಗಳು ಒಟೊಟ್ಟಿಗೆ ಬಂದಿವೆ. ಊರಿನ ನಾಗರಿಕ ಬಂಧುಗಳೆಲ್ಲ ಸಂಭ್ರಮದಿಂದ ಎರಡು ಹಬ್ಬಗಳನ್ನು ಸೌಹಾರ್ದಯುತವಾಗಿ ಆಚರಿಸೋಣ ಮತ್ತು ಎಲ್ಲರಿಗು ಮಾದರಿಯಾಗೋಣ. ಈ ನಿಟ್ಟಿನಲ್ಲಿ ನಗರದ ಎಲ್ಲ ಧರ್ಮಗಳ ಜನರು ಮತ್ತು ಧಾರ್ಮಿಕ ಗುರುಗಳು ಸೇರಿ ಎಲ್ಲ ಹಬ್ಬಗಳಿಗೂ ಮುನ್ನುಡಿಯಾಗಿ ‘ಸೌಹಾರ್ದವೇ ಹಬ್ಬ” ಆಚರಿಸಲು ನಿರ್ಧರಿಸಿದ್ದೇವೆ. ದಿನಾಂಕ 15/09/2023 ರ ಶುಕ್ರವಾರ ಸಂಜೆ 4 ರಿಂದ 6 ಗಂಟೆಯ ತನಕ ನಗರದ ಮೆಗ್ಗಾನ್ ಆಸ್ಪತ್ರೆಯ ಅಂಗಳದಿಂದ ಸೈನ್ಸ್ ಕಾಲೇಜು ಮೈದಾನದವರೆಗೆ ಎಲ್ಲ ಧರ್ಮಗಳ ಜನರು ನಮ್ಮ ರಾಷ್ಟ್ರಧ್ವಜ ಹಿಡಿದು, ನಮ್ಮ ನಡೆ-ನುಡಿ, ಆಚಾರ-ವಿಚಾರಗಳು ಬೇರೆಯಾದರೂ, ನಾವೆಲ್ಲಾ ಒಂದೇ – ನಾವೆಲ್ಲಾ ಭಾರತಾಂಬೆಯ ಮಕ್ಕಳು ಎಂದು ಸಂದೇಶ ಸಾರುತ್ತ, ಹಲವು ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ 2,000 ಅಡಿಯ ಬಾವುಟವನ್ನು ಹಿಡಿದು ಸಾಗಿ “ಸೌಹಾರ್ದವೇ ಹಬ್ಬ” ಎಂದು ಸಾರೋಣ.

ಈ ಸದ್ಭಾವನೆಯ ಹಬ್ಬಕ್ಕೆ ಎಲ್ಲ ಜನರು ಜಾತಿ ಧರ್ಮ ಭೇದವಿಲ್ಲದೆ, ಪಕ್ಷಾತೀತವಾಗಿ ಬಂದು ಪಾಲ್ಗೊಳ್ಳೋಣ. ನಾವೆಲ್ಲಾ ಶಿವಮೊಗ್ಗದಲ್ಲಿ ಶಾಂತಿ ಸಹಬಾಳ್ವೆಯಿಂದ ಬದುಕುತ್ತೇವೆ ಮತ್ತು ಸೌಹಾರ್ದವಾಗಿ ಹಬ್ಬಗಳನ್ನು ಆಚರಿಸುತ್ತೇವೆ ಎಂದು ಒಗ್ಗಟ್ಟಾಗಿ ಹೇಳೋಣ. ನೀವು, ನಿಮ್ಮ ಕುಟುಂಬದವರು ಮತ್ತು ಸ್ನೇಹಿತರೊಡಗೂಡಿ ಬನ್ನಿ “ಸೌಹಾರ್ದವೇ ಹಬ್ಬ” ಆಚರಿಸೋಣ.

ವಿಶೇಷ ಸೂಚನೆ: ಕಾರ್ಯಕ್ರಮದಲ್ಲಿ ತ್ರಿವರ್ಣ ಧ್ವಜ ಬಿಟ್ಟು ಬೇರಾವುದೇ ಧ್ವಜಗಳಾಗಲಿ ಅಥವಾ ಬ್ಯಾನರುಗಳಿಗಾಗಲಿ ಅವಕಾಶವಿರುವುದಿಲ್ಲ. ನಿಮ್ಮ ಬಳಿಯಿರುವ ತ್ರಿವರ್ಣ ಧ್ವಜಗಳನ್ನು ತನ್ನಿ ಮತ್ತು ಗೌರವಯುತವಾಗಿ ಧ್ವಜಗಳನ್ನು ನೋಡಿಕೊಳ್ಳಿ.

ನಮ್ಮ ನಡಿಗೆ ಶಾಂತಿಯ ಕಡೆಗೆ ಸಮಿತಿಯ ಪರವಾಗಿ

ಸಂಪರ್ಕ: ಕೆ. ಪಿ. ಶ್ರೀಪಾಲ್ (9448329757), ಫಾದರ್ ಕ್ಲಿಫರ್ಡ್ ರೋಶನ್ ಪಿಂಟೊ (8277557247), ಕಿರಣ್ ಕುಮಾರ್ ಕೆ. (9900015255), ಲಿಯಾಕತ್ (9886954734), ಇಸ್ಮಾಯಿಲ್ (9900800192), ಮೊಹಮ್ಮದ್ ಹುಸೇನ್ (9845343262), ರಫೀ (9538652539)

Leave a Reply

Your email address will not be published. Required fields are marked *

Scan the code