ಕಾರಿನ ಮೇಲೆ ಕಂಟೇನರ್ ಲಾರಿ ಬಿದ್ದ ಪರಿಣಾಮ 6 ಮಂದಿ ಸಾವು
(BENGALURU):ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು,ಕಾರಿನ ಮೇಲೆ ಕಂಟೇನರ್ ಲಾರಿ ಬಿದ್ದ ಪರಿಣಾಮ 6 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಘಟನೆ ನೆಲಮಂಗಲ ತಾಲೂಕಿನ ಟಿ.ಬೇಗೂರು ಬಳಿ ನಡೆದಿದೆ.
ಅಪಘಾತದಲ್ಲಿ ಎರಡು ಕಾರುಗಳು, ಎರಡು ಲಾರಿಗಳು ಮತ್ತು ಶಾಲಾ ಬಸ್ ಭಾಗಿಯಾಗಿವೆ. ವೇಗವಾಗಿ ಬಂದ ಲಾರಿಗಳು ನಿಯಂತ್ರಣ ತಪ್ಪಿ ಡಿಕ್ಕಿಯಾಗಿ, ಪಲ್ಟಿಯಾದ ಕಂಟೇನರ್ ಲಾರಿ KA 01 ND 1536 ನಂಬರ್ ಕಾರಿನ ಮೇಲೆ ಬಿದ್ದಿದೆ. ಪರಿಣಾಮ, ಕಾರಿನಲ್ಲಿದ್ದ ಇಬ್ಬರು ಮಹಿಳೆಯರು, ಇಬ್ಬರು ಪುರುಷರು ಮತ್ತು ಒಂದು ಮಗು ಸೇರಿ ಒಟ್ಟು 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕಂಟೇನರ್ ಲಾರಿ ಬಿದ್ದ ರಭಸಕ್ಕೆ ಕಾರು ಸಂಪೂರ್ಣವಾಗಿ ಅಪ್ಪಚ್ಚಿಯಾಗಿದ್ದು, ಅದರಲ್ಲಿ ಇದ್ದ ದೇಹಗಳು ಛಿದ್ರಗೊಂಡಿವೆ. ಈ ಘಟನೆ ಹಿನ್ನೆಲೆಯಲ್ಲಿ ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಸ್ಥಳಕ್ಕೆ ನೆಲಮಂಗಲ ಟ್ರಾಫಿಕ್ ಪೊಲೀಸರು ಆಗಮಿಸಿ, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮೃತ ದೇಹಗಳನ್ನು ಕಾರಿನ ಅವಶೇಷಗಳಿಂದ ಹೊರತೆಗೆಯಲು ಕಠಿಣ ಪರಿಶ್ರಮ ಮಾಡಲಾಗುತ್ತಿದೆ. ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಜನರು ದಿಗ್ಭ್ರಮೆಯಲ್ಲಿದ್ದಾರೆ.
ಈ ಭೀಕರ ಅಪಘಾತವು ಅತಿಯಾದ ವೇಗ ಮತ್ತು ಲಾರಿಯ ನಿಯಂತ್ರಣ ತಪ್ಪಿರುವುದರಿಂದ ನಡೆದಿರುವುದಾಗಿ ಪ್ರಾಥಮಿಕ ಮಾಹಿತಿ ನೀಡಲಾಗಿದೆ. ಪೊಲೀಸರು ಈ ಕುರಿತು ತನಿಖೆ ಪ್ರಾರಂಭಿಸಿದ್ದಾರೆ.
ವರದಿ: ವಿಷ್ಣು ಕೋಲಾರ