ವೈದ್ಯರ ಜೀವನ ಸೇವೆ ತ್ಯಾಗದ ಸಂಕೇತ
(CHIKKAMAGALURU): ಬಾಳೆಹೊನ್ನೂರು: ಬಡವ-ಬಲ್ಲಿದ, ರಾತ್ರಿ-ಹಗಲು ಎನ್ನದೇ ನಿಸ್ವಾರ್ಥ ಸೇವೆ ಮಾಡುವ ವೈದ್ಯರ ಜೀವನ ಹಾಗೂ ಸೇವೆಯು ತ್ಯಾಗದ ಸಂಕೇತವಾಗಿದೆ ಎಂದು ಜೇಸಿಐ ಅಧ್ಯಕ್ಷ ಎನ್.ಶಶಿಧರ್ ಹೇಳಿದರು.
ಪಟ್ಟಣದ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆಯ ವತಿಯಿಂದ ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು ಸೋಮವಾರ ಗೌರವಿಸಿ ಅವರು ಮಾತನಾಡಿದರು.
ವೈದ್ಯೋ ನಾರಾಯಣ ಹರಿಃ ಎಂದರೆ ವೈದ್ಯರು ನಾರಾಯಣ ಸ್ವರೂಪನು, ಅಂದರೆ ಭಗವಂತನ ಸ್ವರೂಪರಾಗಿದ್ದಾರೆ. ನಾರಾಯಣ ಎಂದರೆ ಸಮಚಿತ್ತ ವೃತ್ತಿಯುಳ್ಳುವರಾಗಿದ್ದು, ಮೇಲು-ಕೀಳು, ಬಡವ-ಬಲ್ಲಿದ, ಸ್ತ್ರೀ-ಪುರುಷ, ಒಳ್ಳೆಯವ-ಕೆಟ್ಟವ ಎನ್ನುವ ಯಾವುದೇ ಬೇಧ ಭಾವವಿಲ್ಲದೇ ಸಕಲರನ್ನೂ ಸಮಾನವಾಗಿ ಅವರವರ ಕರ್ಮಕ್ಕನುಗುಣವಾಗಿ ಸಲಹುವವರು ಆಗಿದ್ದಾರೆ.
ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಲವು ಮೂಲಭೂತ ಸೌಕರ್ಯಗಳು ಇಲ್ಲದಿದ್ದರೂ ಸಹ ವೈದ್ಯರಾದ ಪ್ರವೀಣ್ ಅವರು ನಿರಂತರವಾಗಿ ಸೇವೆ ಸಲ್ಲಿಸುವ ಮೂಲಕ ರೋಗಿಗಳನ್ನು ಸಲಹುತ್ತಿದ್ದಾರೆ. ದಿನದ ಯಾವುದೇ ಸಮಯದಲ್ಲಿ ಕರೆದರೂ ಕೂಡ ಬೇಸರಿಸಿಕೊಳ್ಳದೆ ರೋಗಿಗಳ ಸೇವೆಗೆ ಬರುತ್ತಿದ್ದಾರೆ. ಇವರ ಸೇವೆ ಇನ್ನೂ ಹೆಚ್ಚು ನಮಗೆ ಲಭಿಸಲಿ ಎಂದು ಕೋರಿದರು.
ಜೇಸಿಐ ಪೂರ್ವಾಧ್ಯಕ್ಷ ಸುಧಾಕರ್ ಮಾತನಾಡಿ, ವೈದ್ಯರು ನಮ್ಮಿಂದ ರೋಗ, ರುಜಿನವನ್ನು ಮಾತ್ರವಲ್ಲದೇ, ವೇದನೆಯನ್ನು, ಅಶಾಂತಿ, ಬಾಧೆ, ದುಃಖ ಮತ್ತು ವ್ಯಥ್ಯೆಯನ್ನು ಸಹ ದೂರ ಮಾಡಿ ನಮ್ಮಲ್ಲಿ ಆರೋಗ್ಯ, ಶಾಂತಿ, ಸಂತೋಷ ಹಾಗೂ ನೆಮ್ಮದಿಯನ್ನು ಕರುಣಿಸಲಿದ್ದಾರೆ.
ಇಂದಿನ ಮುಂದುವರೆದ ದಿನಗಳಲ್ಲಿಯೂ ಸಹ ಹಲವು ವೈದ್ಯರು ತಮ್ಮ ತತ್ವಾದರ್ಶಗಳನ್ನು ಬಿಡದೇ ಸೇವಾ ಮನೋಭಾವವನ್ನು ಹೊಂದಿಕೊoಡು ತಮ್ಮ ತಮ್ಮ ಕರ್ತವ್ಯಪಾಲನೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಪ್ರವೀಣ್ ಗೌರವ ಸ್ವೀಕರಿಸಿ ಮಾತನಾಡಿ, ರಾಷ್ಟ್ರೀಯ ವೈದ್ಯರ ದಿನದಂದು ತಮ್ಮನ್ನು ಗುರುತಿಸಿ ಗೌರವಿಸಿರುವುದು ಸಂತಸ ತಂದಿದೆ. ಸರ್ವ ಜನರ ರೋಗ-ರುಜಿನಗಳನ್ನು ದೂರ ಮಾಡಿ ನೆಮ್ಮದಿಯ ಜೀವನ ಕಲ್ಪಿಸುವುದೇ ವೈದ್ಯರ ಉದ್ದೇಶವಾಗಿದೆ.
ಭಾರತವು ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಮುಂದುವರೆದಿದ್ದು, ಇಂದು ವಾರ್ಷಿಕ ಸಾವಿರಾರು ಹೊಸ ವೈದ್ಯರುಗಳು ವೃತ್ತಿಗೆ ಬರುತ್ತಿದ್ದರು ಸಹ ವೈದ್ಯರ ಕೊರತೆ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಈ ಕೊರತೆ ನೀಗಿ ಭಾರತವು ವೈದ್ಯಕೀಯ ಕ್ಷೇತ್ರದಲ್ಲಿ ಪ್ರಥಮ ಸ್ಥಾನ ಗಳಿಸಲಿ ಎಂದರು.
ಪಟ್ಟಣದಲ್ಲಿ ಎಲ್ಲಾ ಸಂಘ ಸಂಸ್ಥೆಗಳು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಉತ್ತಮವಾದ ಸಹಕಾರ ನೀಡುತ್ತಿದ್ದು, ಇದರಿಂದಾಗಿ ರೋಗಿಗಳಿಗೆ ಹೆಚ್ಚಿನ ಸೇವೆ ನೀಡಲು ಸಾಧ್ಯವಾಗಿದೆ ಎಂದರು.
ಜೇಸಿಐ ಪೂರ್ವಾಧ್ಯಕ್ಷ ಎಸ್.ಎಲ್.ಚೇತನ್, ಸದಸ್ಯರಾದ ವಿ.ರೋಹಿತ್, ಅಶೋಕ್, ಯು.ಸಿ.ಪ್ರದೀಪ್, ಚೇತನ್‌ಕುಮಾರ್, ಸನತ್‌ಶೆಟ್ಟಿ, ಹಿರಿಯ ಆರೋಗ್ಯ ನಿರೀಕ್ಷಕ ಭಗವಾನ್ ಮತ್ತಿತರರು ಹಾಜರಿದ್ದರು.