ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ನಾಟಕವಿದು: ಚಿದಂಬರರಾವ್ ಜಂಬೆ.
(SHIVAMOGA): ನಾಟಕವೆಂಬುದು ತೀರಾ ಭಿನ್ನ ರೀತಿಯ ವಾದವನ್ನು ಮಂಡಿಸಲು ಬಳಕೆಯಾಗುವ ವಿಶಿಷ್ಟ ಮಾದರಿಯಾಗಿದ್ದು, ಅದು ಸಂಗ್ಯಾ ಬಾಳ್ಯಾ ನಾಟಕದಲ್ಲಿ ಬಳಕೆಯಾಗಿತ್ತು ಎಂಬುದು ಗಮನಾರ್ಹ ಸಂಗತಿ. ಸ್ಥಾಪಿತ ಸಂಪ್ರದಾಯ, ರೀತಿ-ರಿವಾಜುಗಳ ಎದುರು ಪ್ರತಿಭಟನಾರ್ಥಕವಾಗಿಯೂ ಈ ನಾಟಕ ನಮ್ಮಲ್ಲಿ ಪ್ರಯೋಗಕ್ಕೆ ಒಳಪಟ್ಟಿತು ಎಂದು ಹಿರಿಯ ರಂಗ ನಿರ್ದೇಶಕ, ಕೇಂದ್ರ ಸಂಗೀತ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಚಿದಂಬರರಾವ್ ಜಂಬೆ ಅಭಿಪ್ರಾಯ ವ್ಯಕ್ತಪಡಿಸಿದರು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕೆಳದಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾರೇಕೊಪ್ಪದ `ಗಮಧನಿ’ಯಲ್ಲಿ ಭಾನುವಾರ ಕೆಳದಿ ಪ್ರಾಂತ್ಯದ ಭಾರತಿ ಕಲಾವಿದರು ತಂಡ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಾನಪದ ನೃತ್ಯ ನಾಟಕ `ಸಂಗ್ಯಾ ಬಾಳ್ಯಾ’ ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕೆಲ ದಶಕದ ಹಿಂದೆ ಈ ನಾಟಕ ಪ್ರಯೋಗವೇ ದೊಡ್ಡ ಕ್ರಾಂತಿ ಎಂಬಂತಿತ್ತು. ಕೆಳದಿ ಭಾಗದಲ್ಲಿನ ನಾಟಕ ಸಂಸ್ಕೃತಿ ಹಾಗೂ ಆಧುನಿಕ ವಿಚಾರಧಾರೆಗಳನ್ನು ಹೊಂದಿದವರ ನಡುವೆ ಇವತ್ತಿಗೂ ಅದರ ಪ್ರದರ್ಶನ ಮುಂದುವರೆದಿರುವುದು ನಿಜಕ್ಕೂ ಖುಷಿಯ ಸಂಗತಿ. ಇಲ್ಲಿನ ನಾಟಕ ಸಂಸ್ಕೃತಿಯ ಸೊಗಡನ್ನು ಬಾಲ್ಯದಿಂದಲೂ ಸವಿದಿದ್ದರಿಂದಲೇ ರಂಗಭೂಮಿಯಲ್ಲಿ ಗುರುತಿಸಿಕೊಳ್ಳುವಲ್ಲಿ ಸಹಕಾರಿಯಾಯಿತು ಎಂದರು.
ನಾಟಕದ ಸಂಗ್ರಹ, ರಚನೆ, ರೂಪರೇಷೆಗಳನ್ನು ಮಾಡಿದ ಎಚ್.ಜಿ.ಸೀತಾರಾಮ್ ಮಾತನಾಡಿ, ಪ್ರತಿಭೆಗಳಿಗೆ ಪ್ರಯತ್ನದ ಸಹಯೋಗ ದೊರೆತಲ್ಲಿ ಅಪರೂಪದ ಸಾಧನೆ ಮಾಡಬಹುದು. ಅಂತೆಯೇ ಸಂಗ್ಯಾ ಬಾಳ್ಯಾ ನಾಟಕದ ಪದ್ಯಗಳ ರಚನೆ, ಅದರ ಪ್ರಯೋಗ ಎಂಬುದು ನಮ್ಮ ಮಟ್ಟಿಗೆ ಪವಾಡದ ಸ್ವರೂಪದಲ್ಲಿ ಆಗಿದೆ. ಅದು ಇವತ್ತಿಗೂ ಜನಪದದ ನಡುವೆಯಿದ್ದು, ಪ್ರದರ್ಶನಕ್ಕೆ ಸಾವಿರಾರು ಜನರನ್ನು ಇಂದಿಗೂ ಸೇರಿಸುವ ಶಕ್ತಿ ಅದಕ್ಕಿರುವುದೇ ಅದರ ಗಟ್ಟಿತನಕ್ಕೆ ಸಾಕ್ಷಿ ಎಂದರು.
ವೇದಿಕೆಯಲ್ಲಿ ಹಿರಿಯ ರಂಗಕರ್ಮಿರಾದ ಕೆ.ಜಿ.ಕೃಷ್ಣಮೂರ್ತಿ, ದೇವರು ಆರ್.ಭಟ್, ಮಂಗಳಮೂರ್ತಿ ಮನೇಘಟ್ಟ, ಅ.ರಾ.ಲಂಬೋದರ ಇದ್ದರು. ಸಾನ್ವಿ ಪ್ರಾರ್ಥಿಸಿದರು. ರಾಧಾಕೃಷ್ಣ ಬಂದಗದ್ದೆ ಸ್ವಾಗತಿಸಿದರು. ಸಾಮಾಜಿಕ ಚಿಂತಕ ಬಿ.ಎಸ್.ದೇವೇಂದ್ರ ಬೆಳೆಯೂರು ಪ್ರಾಸ್ತಾವಿಕ ಮಾತನಾಡಿದರು. ರಾಮಮೂರ್ತಿ ವಂದಿಸಿದರು. ಎಚ್.ಎಸ್. ರಮೇಶ್ ನಿರೂಪಿಸಿದರು.
ವರದಿ: ರಾಘವೇಂದ್ರ ತಾಳಗುಪ್ಪ