ಚಿಕ್ಕಮಗಳೂರುನ್ಯೂಸ್

ಭಾರತೀಯ ಕಲೆ, ಸಂಸ್ಕೃತಿಗೆ ವಿಶಿಷ್ಟ ಸ್ಥಾನಮಾನ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ ಉದ್ಘಾಟನೆ.

ಭಾರತೀಯ ಕಲೆ, ಸಂಸ್ಕೃತಿಗೆ ವಿಶಿಷ್ಟ ಸ್ಥಾನಮಾನ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ ಉದ್ಘಾಟನೆ.

(CHIKKAMAGALURU ): ಭಾರತೀಯ ಕಲೆ ಮತ್ತು ಸಂಸ್ಕೃತಿಗೆ ವಿಶ್ವದಲ್ಲಿಯೇ ವಿಶಿಷ್ಟವಾದ ಸ್ಥಾನಮಾನವಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಎನ್.ಆರ್.ಪುರ ತಾಲೂಕು ಮಟ್ಟದ ಪ್ರಾಥಮಿಕ, ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ, ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ, ಕಲೆ ಸಂಸ್ಕೃತಿಯು ವಿಶೇಷವಾದ ಗೌರವಾದಾರಗಳನ್ನು ಹೊಂದಿದ್ದ, ಹಲವರ ನೋವು, ಸಂಕಷ್ಟಗಳನ್ನು ದೂರ ಮಾಡುವ ಶಕ್ತಿ ಹೊಂದಿದೆ. ಭಾರತೀಯ ಕಲೆ, ಸಂಸ್ಕೃತಿಗೆ ವಿದೇಶಿಗರು ಸಹ ಇಂದು ಮಾರು ಹೋಗುತ್ತಿದ್ದು, ವಿದೇಶಿಗರು ನಮ್ಮ ಸಂಸ್ಕೃತಿಯನ್ನು ಕಲಿಯುತ್ತಿದ್ದಾರೆ. ಇಲ್ಲಿನ ಕಲೆಯನ್ನು ವಿದೇಶದಲ್ಲಿ ಪ್ರಚುರ ಪಡಿಸುತ್ತಿದ್ದಾರೆ.


ಕಲೆ ಮತ್ತು ಸಂಸ್ಕೃತಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾಗಿದ್ದು, ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಣವೊಂದೇ ಮಾನದಂಡವಲ್ಲ ಎಂಬುದನ್ನು ಅರಿತುಕೊಳ್ಳಬೇಕಿದೆ. ಶಿಕ್ಷಣದಲ್ಲಿ ಸಾಧನೆ ಮಾಡಲಾಗದವರು, ಪಠ್ಯೇತರ ಚಟುವಟಿಕೆಗಳ ಮೂಲಕ ತಮ್ಮ ಕಲೆಯನ್ನು ಹೊರ ಹಾಕಬಹುದಾಗಿದೆ.
ಈ ಹಿನ್ನೆಲೆಯಲ್ಲಿ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ರಾಜ್ಯಾದ್ಯಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಕಾರಂಜಿಯನ್ನು ಜಾರಿಗೆ ತರಲಾಯಿತು. ಈ ಮೂಲಕ ವಿದ್ಯಾರ್ಥಿಗಳು ಸಂಗೀತ, ಅಭಿನಯ, ಭಾಷಣ, ಪ್ರಬಂಧ, ರಸಪ್ರಶ್ನೆ, ನೃತ್ಯ ಮುಂತಾದವುಗಳನ್ನು ತೊಡಗುವಂತೆ ಪ್ರೋತ್ಸಾಹಿಸಲಾಯಿತು.
ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ ಸ್ಪರ್ಧಿಗಳಿಗೆ ತೀರ್ಪುಗಾರರು ಯಾವುದೇ ಲೋಪವಾಗದಂತೆ ಅಂಕಗಳನ್ನು ನೀಡಬೇಕು. ಪ್ರತಿಭಾನ್ವಿತರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.


ಎನ್.ಆರ್.ಪುರ ಬಿಇಓ ಕೆ.ಆರ್.ಪುಷ್ಪ ಮಾತನಾಡಿ, ತಾಲೂಕು ಮಟ್ಟದ ಕ್ಲಸ್ಟರ್‌ಗಳ ಕಾರಂಜಿ ಈಗಾಗಲೇ ಮುಕ್ತಾಯಗೊಂಡಿದ್ದು, ಪ್ರಾಥಮಿಕ, ಪ್ರೌಢಶಾಲೆಗಳ ಪ್ರತಿಭಾ ಕಾರಂಜಿಯನ್ನು ಬಾಳೆಹೊನ್ನೂರಿನಲ್ಲಿ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಯಾವುದೇ ಅಂಜಿಕೆಯಿಲ್ಲದೆ ತಮ್ಮ ಪ್ರತಿಭೆಯನ್ನು ಹೊರ ಹೊಮ್ಮಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಬೇಕು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
ಬಾಳೆಹೊನ್ನೂರು ವಿದ್ಯಾಸಂಸ್ಥೆ ಕಾರ್ಯದರ್ಶಿ ಬಿ.ಸಿ.ಗೀತಾ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸುವುದು ಅತೀ ಮುಖ್ಯವಾಗಿದ್ದು, ಸೋಲು ಗೆಲುವು ಮುಖ್ಯವಲ್ಲ. ತೀರ್ಪುಗಾರರು ಹಂಸಕ್ಷೀರ ನ್ಯಾಯದಂತೆ ತೀರ್ಪನ್ನು ನೀಡಿ ಯಾವುದೇ ವಿದ್ಯಾರ್ಥಿಗಳ ಮನಸ್ಸಿಗೂ ನೋವಾಗದಂತೆ ನೋಡಿಕೊಳ್ಳಬೇಕು. ಉತ್ತಮ ಆತಿಥ್ಯ, ವಿಶಿಷ್ಟತೆಯೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಿದ್ದು ಎಲ್ಲ ವಿದ್ಯಾರ್ಥಿಗಳು ಸಂಭ್ರಮಿಸಬೇಕು ಎಂದರು.
ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಎನ್.ಆರ್.ಪುರ ತಾಲೂಕಿನ ಮೂವರು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. ರಾಷ್ಟ್ರಮಟ್ಟದ  ಹ್ಯಾಮರ್ ಥ್ರೋ ಸ್ಪರ್ಧೆಗೆ ಆಯ್ಕೆಯಾದ ಪಿಯುಸಿ ವಿದ್ಯಾರ್ಥಿ ಸಾಲೀಮ್ ಅವರನ್ನು ಸನ್ಮಾನಿಸಲಾಯಿತು.


ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ.ಆರ್. ವೆಂಕಪ್ಪ ಗೌಡ, ಗ್ರಾಪಂ ಅಧ್ಯಕ್ಷ ಸದಾಶಿವ ಆಚಾರ್ಯ, ಉಪಾಧ್ಯಕ್ಷೆ ರಂಜಿತಾ, ಸದಸ್ಯೆ ಸರಿತಾ, ಪ್ರಾಚಾರ್ಯ ಕೆ.ಆರ್.ಬೂದೇಶ್, ವಿದ್ಯಾಸಂಸ್ಥೆಯ ಸದಸ್ಯರಾದ ಕೆ.ಕೆ.ವೆಂಕಟೇಶ್, ಸಿರಾಜುದ್ದೀನ್, ಇಫ್ತೆಖಾರ್ ಆದಿಲ್, ಪ್ರಮುಖರಾದ ಮಾಲತೇಶ್, ಸೇವ್ಯಾನಾಯ್ಕ್, ಅಶೋಕ್, ಬಿ.ಎಸ್.ಕುಮಾರಚಂದ್ರ ನಾಯಕ್, ಎಂ.ಜೆ.ರಮೇಶ್, ಜಯಶ್ರೀ, ಕಟ್ಟೇಗೌಡ, ಕೆ.ಎಂ. ರಾಘವೇಂದ್ರ, ನಂಜುಂಡಪ್ಪ, ಸಿ.ವಿ.ಸುನೀಲ್, ಕೊಟ್ರೇಶಪ್ಪ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *

Scan the code