ಕೋಲಾರನ್ಯೂಸ್

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಯ ಅಪೂರ್ಣ ಅರ್ಜಿ ತಿದ್ದುಪಡಿಗೆ ಅವಕಾಶ

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಯ ಅಪೂರ್ಣ ಅರ್ಜಿ ತಿದ್ದುಪಡಿಗೆ ಅವಕಾಶ


(KOLARA): ಕೋಲಾರ ಜಿಲ್ಲೆಯ ಬಂಗಾರಪೇಟೆ, ಬೇತಮಂಗಲ(ಕೆಜಿಎಫ್) ಹಾಗೂ ಮಾಲೂರು ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿನ ವಿವಿಧ ಗ್ರಾಮ ಪಂಚಾಯತ್, ಪುರಸಭೆ, ನಗರಸಭೆ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿಯರ ಗೌರವ ಸೇವೆ ಹುದ್ದೆಗಳಿಗೆ ಸಲ್ಲಿಸಿದ ಅಪೂರ್ಣ ಅರ್ಜಿಗಳನ್ನು ಜ.5 ವರೆಗೆ ಪೂರ್ಣಗೊಳಿಸಲು ಕಾಲಾವಕಾಶ ವಿಸ್ತರಿಸಲಾಗಿದೆ.

ಮಾರ್ಚ್ 11ರಿಂದ ಮೇ 20ರ ವರೆಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು. ಪ್ರಸ್ತುತ ಅರ್ಜಿ ಸಲ್ಲಿಸುವ ಕಾಲಾವಧಿ ಮುಗಿದಿದ್ದು, ಅರ್ಜಿ ಸಲ್ಲಿಸುವಾಗ ವೆಬ್ಸೈಟ್ನಲ್ಲಿ ನಾಲ್ಕು ಹಂತಗಳಿದ್ದು, ಇದರಲ್ಲಿ ಕೆಲವರಿಗೆ ಒಂದನೇ ಹಂತದಲ್ಲಿಯೇ ಅಪ್ಲಿಕೇಶನ್ ಸಕ್ಸಸ್ ಫುಲ್ ಅಪ್ಲೋಡೆಡ್ ಎಂಬ ಮೆಸೇಜ್ ಅವರುಗಳ ಮೊಬೈಲಿಗೆ ಸ್ವೀಕೃತವಾಗಿರುವುದರಿಂದ ಅರ್ಜಿಗಳನ್ನು ಪೂರ್ಣಗೊಳಿಸಿರುವುದಿಲ್ಲ.

ಡಿಸೆಂಬರ್ 20ರ ಸರ್ಕಾರದ ಆದೇಶದಲ್ಲಿ ಅರ್ಜಿ ಸಲ್ಲಿಸುವ ನಾಲ್ಕು ಹಂತಗಳನ್ನು ಪೂರ್ಣಗೊಳಿಸದೆ ಅಪೂರ್ಣ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾತ್ರ ಡಿ.26 ರಿಂದ ಜ.5, 2025 ರವರೆಗೆ ಅರ್ಜಿಗಳನ್ನು ಪೂರ್ಣಗೊಳಿಸಲು ವೆಬ್ಸೈಟ್ ನಲ್ಲಿ ಇಲಾಖಾವತಿಯಿಂದಲೇ ಅವಕಾಶ ನೀಡಿ ಆದೇಶಿಸಲಾಗಿರುತ್ತದೆ.

ಅಪೂರ್ಣ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಅರ್ಜಿಗಳನ್ನು ಪೂರ್ಣಗೊಳಿಸಲು ಡಿ.26 ರಿಂದ ಜ.5, 2025ರ ಸಂಜೆ ವರೆಗೆ ಕಾಲಾವಕಾಶ ನಿಗದಿಪಡಿಸಿದೆ.ಅಭ್ಯರ್ಥಿಗಳು ಅರ್ಜಿಯನ್ನು ನಾಲ್ಕು ಹಂತಗಳಲ್ಲಿ ಅಂದರೆ ಮೊದಲ ಹಂತ ಆನ್ ಲೈನ್ ತಂತ್ರಾಂಶದಲ್ಲಿ ನಿಗದಿತ ಅರ್ಜಿ ನಮೂನೆಯಲ್ಲಿ ಮಾಹಿತಿ ತುಂಬುವುದು,ಎರಡನೇ ಹಂತ ತಮ್ಮ ಭಾವಚಿತ್ರ ಸಹಿಯನ್ನು ಅಪ್ಲೋಡ್ ಮಾಡುವುದು, ಮೂರನೇ ಹಂತ ತಮ್ಮ ದಾಖಲಾತಿಗಳನ್ನು ಅಪ್ಲೋಡ್ ಮಾಡುವುದು, ನಾಲ್ಕನೇ ಹಂತ ತಮ್ಮ ಆಧಾರ ಸಂಖ್ಯೆ ನಮೂದಿಸಿ ಇ ಹಸ್ತಾಕ್ಷರದೊಂದಿಗೆ ಅರ್ಜಿಯನ್ನು ಪೂರ್ಣಗೊಳಿಸಲು ಅವಕಾಶ ನೀಡಲಾಗಿದೆ. ಸದರಿ ಅವಕಾಶವನ್ನು ಅರ್ಹರು ಸದುಪಯೋಗ ಪಡಿಸಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ಆಯಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಕಚೇರಿ ಸಮಯದಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾರಾಯಣ ಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code