ಒಂದು ಕಡೆ ಆಂಧ್ರ, ಮತ್ತೊಂದು ಕಡೆ ತಮಿಳುನಾಡು, ಈ ಎರಡು ರಾಜ್ಯಗಳ ಮಧ್ಯದಲ್ಲಿ ನಾವು ಕನ್ನಡ.
(KOLARA ): ನಮ್ಮ ತಾಲೂಕು ಗಡಿ ಭಾಗದ ತಾಲೂಕು ಆಗಿದೆ. ಒಂದು ಕಡೆ ಆಂಧ್ರ, ಮತ್ತೊಂದು ಕಡೆ ತಮಿಳುನಾಡು, ಈ ಎರಡು ರಾಜ್ಯಗಳ ಮಧ್ಯದಲ್ಲಿ ನಾವು ಕನ್ನಡ, ಬಹು ಭಾಷೆಗಳ ಮಧ್ಯೆ ಕನ್ನಡ ಬೆಳೆಸುವುದು ಕಷ್ಟದ ಕೆಲಸ,ಆಗಿನ ಕಾಲದಲ್ಲಿ ಡಾ. ರಾಜಕುಮಾರ್ ಅವರು ಗೋಕಾಕ್ ಚಳುವಳಿ ಮಾಡಿದ್ದು ಇದೇ ಬಂಗಾರಪೇಟೆಯಲ್ಲಿ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಎಸೆಸೆಲ್ಸಿ ಮತ್ತು ಪಿಯುಸಿ ನಲ್ಲಿ ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಆಗಿನ ಕಾಲದಲ್ಲಿ ಕೆಜಿಎಫ್ ಮತ್ತು ಬಂಗಾರಪೇಟೆಯಲ್ಲಿ ಹೆಚ್ಚು ತಮಿಳಿನ ಚಿತ್ರಗಳನ್ನು ಹಾಕಲಾಗುತ್ತಿತ್ತು. ಆಗ ಹೋರಾಟಗಳನ್ನು ಮಾಡಿದ ಹಿನ್ನೆಲೆ ಇಂದು ಕೆಜಿಎಫ್ ಮತ್ತು ಬಂಗಾರಪೇಟೆಯಲ್ಲಿ ಕನ್ನಡವನ್ನು ಉಳಿಸಲು ಸಾಧ್ಯವಾಯಿತು ಎಂದರು.
ಮಕ್ಕಳು ಮನೆಗಳಲ್ಲಿ ತಮಗೆ ಇಷ್ಟ ಬಂದ ಭಾಷೆಯನ್ನು ಮಾತಾಡಿ, ಆದರೆ ವ್ಯವಹಾರಿಕವಾಗಿ, ಓದಲು ಬರೆಯಲು ಕನ್ನಡಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿ ಎಂದರು. ಆ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು 3 ವರ್ಷಗಳಿಂದ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತಾ,ಕನ್ನಡವನ್ನು ಬೆಳೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಕನ್ನಡ ಭಾಷೆ ಬಂದರೆ,ನಿಮಗೆ ಸರ್ಕಾರದಲ್ಲಿ ಉದ್ಯೋಗ ಸಿಗುತ್ತದೆ. ಇಲ್ಲವಾದಲ್ಲಿ ಉದ್ಯೋಗ ಸಿಗುವುದಿಲ್ಲ, ನಮ್ಮ ತಾಲೂಕಿನ ಮಕ್ಕಳು ಅನೇಕ ಪ್ರಶಂಸೆಗಳಿಗೆ ಪಾತ್ರರಾಗಿದ್ದಾರೆ. ನನ್ನ ತಾಲೂಕಿನ ಗಡಿಭಾಗದ ಕನಮನಹಳ್ಳಿ, ಗುಲ್ಲಹಳ್ಳಿ,ಮಕ್ಕಳು ಕನ್ನಡದಲ್ಲಿ ನೂರಕ್ಕೂ ನೂರರಷ್ಟು ಫಲಿತಾಂಶವನ್ನು ಪಡೆಯುತ್ತಿದ್ದಾರೆ. ಆದರೆ ನಗರದ ಶಾಲೆಗಳಲ್ಲಿ ಫಲಿತಾಂಶ ಕುಂಠಿತಗೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅದಕ್ಕಾಗಿ ನಾವೆಲ್ಲರೂ ಕನ್ನಡವನ್ನು ಉಳಿಸಿ ಬೆಳೆಸೋಣ, ಇತ್ತೀಚಿಗೆ ಬೆಂಗಳೂರಿನಲ್ಲಿ ಕನ್ನಡವನ್ನೇ ಮರೆತು ಹೋಗುತ್ತಿದ್ದಾರೆ. ಬೆಂಗಳೂರಿನ ಅನೇಕ ನಗರಗಳಲ್ಲಿ ಕನ್ನಡವೇ ಇಲ್ಲದಂತಾಗಿದೆ.ಎಲ್ಲರೂ ಬೇರೆ ಬೇರೆ ಭಾಷೆಗಳನ್ನು ಮಾತನಾಡುತ್ತಿದ್ದಾರೆ. ಹಾಗಾಗಿ ನಮ್ಮ ಗಡಿ ಭಾಗಗಳಲ್ಲಿ ಕನ್ನಡವನ್ನು ಇನ್ನೂ ಹೆಚ್ಚಾಗಿ ಬೆಳೆಸೋಣ ಹಾಗೂ ಉಳಿಸೋಣ ಎಂದು ಕಿವಿ ಮಾತು ಹೇಳಿದರು.
ಈ ವೇಳೆ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಸಂಜೀವಪ್ಪ ಮಾತನಾಡಿ,ಪ್ರತಿ ವರ್ಷ ನವೆಂಬರ್ 1 ರಂದು ಎಲ್ಲೆಡೆ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಈಗಿನ ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತ, ಕಲೆ, ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಕನ್ನಡಿಗರ ನಾಡನ್ನು ಮೈಸೂರು ರಾಜ್ಯದಿಂದ ಕರ್ನಾಟಕ ಎಂದು ಹೆಸರಿಡಬೇಕು ಎಂದು ಮೊದಲು 1972 ರ ಜುಲೈನಲ್ಲಿ ಈ ಬಗ್ಗೆ ಚರ್ಚೆ ಆಯಿತು. ದೀರ್ಘಾವಧಿಯ ಚರ್ಚೆಗಳ ನಂತರ ರಾಜ್ಯ ವಿಧಾನಸಭೆಯಲ್ಲೂ ಇದಕ್ಕೆ ಸರ್ವಾನುಮತದಿಂದ ಅನುಮತಿ ಸಿಕ್ಕಿತು.ಆಲೂರು ವೆಂಕಟರಾವ್ ರವರು 1905 ರಲ್ಲಿ ಕರ್ನಾಟಕ ಏಕೀಕರಣ ಚಳುವಳಿಯೊಂದಿಗೆ ರಾಜ್ಯವನ್ನು ಏಕೀಕರಿಸುವ ಕನಸು ಕಂಡ ಮೊದಲ ವ್ಯಕ್ತಿ. ಅವರಿಗೆ ಈ ಸುಸಂದರ್ಭದಲ್ಲಿ ಧನ್ಯವಾದಗಳನ್ನು ಹೇಳೋಣ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಗೋವಿಂದ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಗಾನಂದ ಕೆಂಪರಾಜು,ಸಮನ್ವಯಾ ಅಧಿಕಾರಿ ಶಶಿಕಲಾ, ಪ್ರಾಂಶುಪಾಲರಾದ ಸುಬ್ರಹ್ಮಣ್ಯ, ಮುರಳಿ, ಉಪ ಪ್ರಾಂಶುಪಾಲ ಹನುಮಂತ ವಗ್ಗರ್,ಜ್ಯೋತಿ, ಸುಜಾತಾ,ಮಂಜುನಾಥ್, ರಾಮಕೃಷ್ಣಪ್ಪ, ಆಂಜನೇಯ ಗೌಡ, ಹಾಗೂ ಮೊದಲಾದವರು ಇದ್ದರು.
ವರದಿ: ವಿಷ್ಣು ಕೋಲಾರ