ಕಲೆ ಯಾರದೇ ಸ್ವತ್ತಲ್ಲ, ದೇಸೀ ಕಲೆಯನ್ನು ಕಲಿತು ಪ್ರದರ್ಶನ
(SHIVAMOGA): ಸೊರಬ : ಕಲೆ ಯಾರದೇ ಸ್ವತ್ತಲ್ಲ, ಪಟ್ಟಣದ ಮಕ್ಕಳು ಆಧುನಿಕ ಕಲೆಗಳತ್ತ ಗಮನ ನೀಡುತ್ತಿರುವ ಹೊಸ್ತಿಲಲ್ಲ ಹಳ್ಳಿ ಮಕ್ಕಳು ದೇಸೀ ಕಲೆಯನ್ನು ಕಲಿತು ಪ್ರದರ್ಶನ ನೀಡುವ ಮೂಲಕ ಸಂಸ್ಕೃತಿಯ ಉಳಿವಿಗೆ ಮುಂದಾಗಿದ್ದಾರೆ.
ತಾಲೂಕಿನ ಚಂದ್ರಗುತ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಪ್ರದರ್ಶನಗೊಂಡ ಶ್ರೀ ದೇವಿ ಮಹಾತ್ಮೆ ಎಂಬ ಬಯಲಾಟ ಪ್ರದರ್ಶನ ಸಭಿಕರ ಮನಸೋರೆಗೊಂಡಿತು. ಮಕ್ಕಳು ಗ್ರಾಮೀಣ ಕಲೆಯಾದ ಬಯಲಾಟವನ್ನು ಕಲಿತು ಪ್ರದರ್ಶನ ನೀಡುವ ಮೂಲಕ ಪ್ರೇಕ್ಷಕರಿಂದ ಸೈ ಎನಿಸಿಕೊಂಡರು.
ಬಯಲಾಟದ ಭಾಗವತರಾದ ಪ್ರಕಾಶ್ ಎನ್. ನಾಯ್ಕ ಚನ್ನಪಟ್ಟಣ, ಭರತ್ ಎಂ.ಕೆ ಮಡಿವಾಳ ಅವರು ವಿದ್ಯಾರ್ಥಿಗಳಿಗೆ ಜನಪದ ಕಲೆ ಬಯಲಾಟದ ತರಬೇತಿ ನೀಡಿ, ಕಾರ್ಯಕ್ರಮದ ಯಶಸ್ವಿಗೆ ಪಾತ್ರರಾದರು.
ಚಂದ್ರಗುತ್ತಿ ಭಾಗದಲ್ಲಿ ಜನಪದ ಕಲಾವಿದರಿದ್ದು ಜನಪದ ಕಲೆಗೆ ಮಹತ್ವವಿದೆ. ಅದರಲ್ಲೂ ಶಾಲಾ ವಿದ್ಯಾರ್ಥಿಗಳು ಶ್ರೀ ದೇವಿ ಮಹಾತ್ಮೆ ಎಂಬ ಬಯಲಾಟವನ್ನು ಅರ್ಥಪೂರ್ಣವಾಗಿ ಪ್ರದರ್ಶಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.
ಗಣಪತಿ ಮತ್ತು ಚಾರಕ ಪಾತ್ರದಲ್ಲಿ ಜಿ. ಜೀವನ, ಶಾರದೆ ಪಾತ್ರದಲ್ಲಿ ಅಶ್ವಿನಿ, ಸೂತ್ರದಾರ ಪಾತ್ರದಲ್ಲಿ ಸಮರ್ಥ, ಬಾಲಗೋಪಾಲರ ಪಾತ್ರದಲ್ಲಿ ತನುಜಾ, ನಿರೀಕ್ಷಾ, ನಾರದ ಪಾತ್ರದಲ್ಲಿ ಆರ್. ಧನುಷ, ದೇವಿಂದ್ರ ಪಾತ್ರದಲ್ಲಿ ಕೆ.ಆರ್. ದಿವ್ಯ, ಮೇನಕೆ ಪಾತ್ರದಲ್ಲಿ ಹರ್ಷಿಕಾ, ಮಹಿಷಾಸುರ ಪಾತ್ರದಲ್ಲಿ ಎಸ್. ಕೀರ್ತಿ, ರಕ್ತ ಬೀಜಾಸುರ ಪಾತ್ರದಲ್ಲಿ ಎಂ. ಲಾವಣ್ಯ, ವಿಷ್ಣು ಪಾತ್ರದಲ್ಲಿ ಪ್ರಜ್ಞಾ ಪಿ. ಭಟ್, ಬ್ರಹ್ಮ ಪಾತ್ರದಲ್ಲಿ ಕೆ. ವಿಷ್ಣು, ಈಶ್ವರ ಪಾತ್ರದಲ್ಲಿ ಪಿ. ತೇಜಸ್ವಿನಿ, ದೇವಿ ಪಾತ್ರದಲ್ಲಿ ಸಿ. ಕವಿತಾ ಅಚ್ಚುಕಟ್ಟಾಗಿ ಪಾತ್ರಗಳನ್ನು ನಿರ್ವಹಿಸಿದರು. ಜಿ. ಜೀವನ ಅವರ ಹಾಸ್ಯ ಪಾತ್ರ ಸಕಾಲಿಕವಾಗಿತ್ತು.
ಜನಪದ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಶಾಲಾಭಿವೃದ್ಧಿ ಸಮಿತಿಯವರು, ಶಾಲಾ ಶಿಕ್ಷಕ ವೃಂದ ಹಾಗೂ ಪೋಷಕರು ಸಾಥ್ ನೀಡಿದರು. ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ವರದಿ: ಮಧು ರಾಮ್ ಸೊರಬ