ವಕೀಲರ ಮೇಲಿನ ಹಲ್ಲೆ ಆಘಾತಕಾರಿ ವಿಚಾರ.
ರಾಜ್ಯದಲ್ಲಿ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ವಕೀಲ ಸಂಘದಿಂದ ಒತ್ತಾಯ.
(SHIVAMOGA): ಸಾಗರ : ರಾಜ್ಯದ ಗಡಿಭಾಗ ಹೊಸೂರಿನಲ್ಲಿ ವಕೀಲ ಕಣ್ಣನ್‌ರವರ ಮೇಲೆ ನಡೆದ ಹಲ್ಲೆ ಖಂಡಿಸಿ, ರಾಜ್ಯದಲ್ಲಿ ತಕ್ಷಣ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರುವಂತೆ ಆಗ್ರಹಿಸಿ ಗುರುವಾರ ವಕೀಲರ ಸಂಘದ ವತಿಯಿಂದ ಉಪವಿಭಾಗಾಧಿಕಾರಿಯವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ನ.20 ರಂದು ಬೆಂಗಳೂರು ಗಡಿಭಾಗ ಹೊಸೂರಿನಲ್ಲಿ ವಕೀಲ ಕಣ್ಣನ್‌ರವರನ್ನು ರಸ್ತೆಯ ಮಧ್ಯೆ ಮಚ್ಚಿನಿಂದ ಅಮಾನುಷವಾಗಿ ಹಲ್ಲೆ ಮಾಡಿರುವುದು ಆಘಾತಕಾರಿ ಸಂಗತಿಯಾಗಿದೆ. ಇಂಥ ದುಷ್ಕೃತ್ಯದಿಂದ ವಕೀಲರು ನಿರ್ಭೀತಿಯಿಂದ ವೃತ್ತಿ ಮಾಡಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ. ಪದೇಪದೇ ವಕೀಲರ ಮೇಲೆ ಹಲ್ಲೆಯಂಥ ಪ್ರಕರಣ ಹೆಚ್ಚುತ್ತಿದೆ. ವಕೀಲರಿಗೆ ಸೂಕ್ತ ರಕ್ಷಣೆ ನೀಡಲು ಕಾಲಕಾಲಕ್ಕೆ ಸರಕಾರವನ್ನು ಒತ್ತಾಯಿಸುತ್ತಾ ಬಂದಿದ್ದರೂ, ನಮ್ಮ ಬೇಡಿಕೆಯನ್ನು ಆಡಳಿತದಲ್ಲಿರುವವರು ಗಂಭೀರವಾಗಿ ಪರಿಗಣಿಸದಿರುವುದು ಖಂಡನೀಯ. ರಾಜ್ಯದಲ್ಲಿ ವಕೀಲರ ಸಂರಕ್ಷಣಾ ಕಾಯ್ದೆ ಇನ್ನಷ್ಟು ಬಿಗಿಗೊಳಿಸಬೇಕು. ವಕೀಲರಾದ ಕಣ್ಣನ್‌ರಿಗೆ ಹಲ್ಲೆ ಮಾಡಿದವರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಂಘದ ಪ್ರಮುಖರಾದ ಎಚ್.ಆರ್. ಶ್ರೀಧರ್, ಎಚ್.ಬಿ. ರಮೇಶ್, ವಿ.ಶಂಕರ್, ಪ್ರೇಮ್ ಸಿಂಗ್, ರವೀಶ್, ವಿನಯ ಕುಮಾರ್, ಬಾಲಕೃಷ್ಣ, ಸುದರ್ಶನ, ಕೆ.ವಿ.ಪ್ರವೀಣ್, ಸರೋಜ, ಎಚ್.ಕೆ. ಅಣ್ಣಪ್ಪ ರಾಘವೇಂದ್ರ, ಫೈಜುಲ್ಲಾ, ಮೊದಲಾದವರಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ