ಚಿಕ್ಕಮಗಳೂರುನ್ಯೂಸ್

ಆಟೋ ಚಾಲಕರು ಸಮಾಜಮುಖಿ ಸೇವೆಗೆ ಆದ್ಯತೆ ನೀಡಿ,

ಆಟೋ ಚಾಲಕರು ಸಮಾಜಮುಖಿ ಸೇವೆಗೆ ಆದ್ಯತೆ ನೀಡಿ,


(CHIKKAMAGALURU): ಆಟೋ ಚಾಲಕರು ತಮ್ಮ ದೈನಂದಿನ ಕಾರ್ಯಗಳ ಜೊತೆಗೆ ಸಮಾಜಮುಖಿ ಸೇವೆಗಳಿಗೆ ಆದ್ಯತೆ ನೀಡಬೇಕು ಎಂದು ಬಿ.ಕಣಬೂರು ಗ್ರಾಪಂ ಸದಸ್ಯ ಎಂ.ಎಸ್.ಅರುಣೇಶ್ ಹೇಳಿದರು.
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಬಾಳೆಹೊನ್ನೂರು ಪಟ್ಟಣದ ಆಟೋ ಚಾಲಕರ ಮತ್ತು ಮಾಲೀಕರ ಸಂಘ ಶನಿವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಾಳೆಹೊನ್ನೂರಿನ ಆಟೋ ಚಾಲಕರು ಹಲವಾರು ವರ್ಷಗಳಿಂದ ಉತ್ತಮ ಸಮಾಜಮುಖಿ ಕಾರ್ಯಗಳನ್ನು ನಡೆಸುಕೊಂಡು ಬರುತ್ತಿದ್ದು, ಇದರೊಂದಿಗೆ ಕನ್ನಡದ ಉಳಿವಿಗಾಗಿ ರಾಜ್ಯೋತ್ಸವವನ್ನು ಅಚ್ಚುಕಟ್ಟಾಗಿ ಆಯೋಜಿಸಿ ಕನ್ನಡದ ಹಿರಿಮೆಯನ್ನು ಮನೆ, ಮನಗಳಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ.


ಆಟೋ ಚಾಲಕರ ಕನ್ನಡದ ಸೇವೆ ಅನುಪಮವಾಗಿದ್ದು, ಆಟೋ ಸಂಘಕ್ಕೆ ಅಗತ್ಯವಿರುವ ಎಲ್ಲಾ ಸಹಕಾರವನ್ನು ನೀಡಲಾಗುವುದು ಎಂದರು.
ಗ್ರಾಪಂ ಸದಸ್ಯೆ ಕೋಕಿಲಮ್ಮ ಮಾತನಾಡಿ, ಆಟೋ ಕ್ಷೇತ್ರದ ಮೂಲಕ ಕನ್ನಡಕ್ಕೆ ಮೊದಲ ಕೊಡುಗೆ ನೀಡಿದ್ದು ಚಿತ್ರನಟ ಶಂಕರ್ ನಾಗ್ ಅವರಾಗಿದ್ದು, ಅವರಿಂದಾಗಿ ಪ್ರೇರಣೆ ಪಡೆದ ಆಟೋ ಚಾಲಕರು ಕನ್ನಡ ಉಳಿವಿಗೆ ನಿರಂತರವಾದ ಕೊಡುಗೆ ನೀಡುತ್ತಿದ್ದಾರೆ. ಕನ್ನಡದ ಬಗ್ಗೆ ವರ್ಣನೆ ಮಾಡಲು ಪದಗಳು ಸಾಲುವುದಿಲ್ಲ. ತಾಯಿ ಭುವನೇಶ್ವರಿಯ ಸೇವೆ ಮಾಡುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಕನ್ನಡ ಎಂದರೆ ಅದೊಂದು ಜನಪದ, ಕಲೆ, ಸಂಸ್ಕೃತಿ, ಸಂಸ್ಕಾರವಾಗಿದೆ.
ಆಟೋ ಚಾಲಕರು ಕನ್ನಡದ ಬೆಳವಣಿಗೆ, ಉಳಿವಿಗೆ ನಿರಂತರವಾದ ಕೊಡುಗೆ ನೀಡುತ್ತಿದ್ದಾರೆ. ಆಟೋ ಚಾಲಕರು ಸೇವಾ ಮನೋಭಾವವನ್ನು ಹೊಂದಿ ಕಾರ್ಯ ನಿರ್ವಹಣೆ ಮಾಡುತ್ತಿದ್ದು, ಬಾಳೆಹೊನ್ನೂರು ಭಾಗದಲ್ಲಿ ಉತ್ತಮ ಚಟುವಟಿಕೆಗಳಿಗೆ ಸ್ಪಂದಿಸುತ್ತಿದ್ದಾರೆ ಎಂದರು.


ಆಟೋ ಚಾಲಕರ ಸಂಘದ ಅಧ್ಯಕ್ಷ ಸಂದೇಶ್ ಮಾತನಾಡಿ, ಕನ್ನಡದ ಕಾರ್ಯಕ್ರಮ ನಡೆಸಲು ಬಹಳ ಶ್ರಮ ಅಗತ್ಯವಿದ್ದು, ಆಟೋ ಚಾಲಕರು ಒಂದು ತಿಂಗಳ ಪರ್ಯಂತ ಶ್ರಮವಹಿಸಿ ಕಾರ್ಯಕ್ರಮದ ಆಯೋಜನೆ ಮಾಡಿದ್ದಾರೆ. ಆದರೆ ಕೆಲವರು ಕಾರ್ಯಕ್ರಮಕ್ಕೆ ಅಡಚಣೆ ಉಂಟು ಮಾಡುತ್ತಿದ್ದು, ಇದನ್ನು ನಾವು ಸಹಿಸಲ್ಲ.
ಯಾವುದೇ ಅನ್ಯಾಯ, ಅನಾಹುತಗಳು ನಡೆದಲ್ಲಿ ಆಟೋ ಚಾಲಕರು ಯಾವುದೇ ಅಂಜಿಕೆ ಇಲ್ಲದೆ ಹೋರಾಟಕ್ಕೆ ದುಮುಕಿ ನ್ಯಾಯದ ಪರ ನಿಲ್ಲಲಿದ್ದಾರೆ ಎಂದರು.
ಕಾಫಿ ಬೆಳೆಗಾರ ಸಿ.ಎಂ.ಮಹಾದೇವಗೌಡ, ಬಿ.ಕಣಬೂರು ಗ್ರಾಪಂ ಉಪಾಧ್ಯಕ್ಷೆ ವಿ.ರಂಜಿತಾ, ಗ್ರಾಪಂ ಸದಸ್ಯರಾದ ಶಿವಪ್ಪ, ಜಯಲಕ್ಷ್ಮಿ, ಮಹಮ್ಮದ್ ಜುಹೇಬ್, ಡಿ.ಸರಿತಾ, ಸಿಸಿಲಿಯಾ, ಫಿಲೋಮಿನಾ, ಎನ್.ಎನ್.ಪ್ರತಿಮಾ, ಇ.ಎಸ್.ಜಯಂತಿ, ಮಾಜಿ ಅಧ್ಯಕ್ಷ ಜಾನ್ ಡಿಸೋಜಾ, ಹಿರಿಯ ಆಟೋ ಚಾಲಕ ಕೃಷ್ಣ, ಜುಬೇರ್, ಈಶ್ವರ್, ಪೆಡ್ಡಿ ದಾಲ್ಮೇದಾ, ಏಜಾಸ್, ಫಿಲಿಪ್ ಮಿಸ್ಕಿತ್, ರತ್ನ, ಆಟೋ ಚಾಲಕರ ಸಂಘದ ಕಾರ್ಯದರ್ಶಿ ಸುನೀಲ್ ಪ್ರಭು, ಖಜಾಂಚಿ ಎಲ್.ಮಧುಸೂದನ್, ಉಪಾಧ್ಯಕ್ಷ ಮಹಮ್ಮದ್ ಶರೀಫ್, ಜಗದೀಶ್ ಅರಳಿಕೊಪ್ಪ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *

Scan the code