ನ್ಯೂಸ್ಶಿವಮೊಗ್ಗ

ಭಾಗವತ ವೇಣುಗೋಪಾಲ ಕೆಳಮನೆ ಇನ್ನಿಲ್ಲ

ಭಾಗವತ ವೇಣುಗೋಪಾಲ ಕೆಳಮನೆ ಇನ್ನಿಲ್ಲ

(SHIVAMOGA): ಸಾಗರ: ತಾಲೂಕಿನ ಸಿಗಂದೂರು ಚೌಡಮ್ಮದೇವಿ ಕೃಪಾಪೋಷಿತ ಯಕ್ಷಗಾನ ಮೇಳದ ಭಾಗವತರಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೆ.ಜಿ. ವೇಣುಗೋಪಾಲ ಕೆಳಮನೆ (44) ಅಪಘಾತದಿಂದ ತೀವ್ರವಾಗಿ ಗಾಯಗೊಂಡಿದ್ದ ಹಿನ್ನೆಲೆಯಲ್ಲಿ ಮಂಗಳವಾರ ನಿಧನರಾಗಿದ್ದಾರೆ.
ಮೃತ ವೇಣುಗೋಪಾಲರಿಗೆ ತಂದೆ ಭಾಗವತರಾದ ಕೆ.ಜಿ. ರಾಮರಾವ್, ತಾಯಿ ಹಾಗೂ ಓರ್ವ ಸಹೋದರ ಇದ್ದಾರೆ. ಸೋಮವಾರ ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆಯಲ್ಲಿ ಅಪಘಾತವಾಗಿ ತಲೆಗೆ ತೀವ್ರ ತರಹದ ಗಾಯಗಳಾಗಿತ್ತು. ಈ ಕಾರಣ ಶಿವಮೊಗ್ಗದ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.


ಕಲಾವಿದರ ಕುಟುಂಬದ ಕುಡಿಯಾಗಿದ್ದ ವೇಣುಗೋಪಾಲ ಉಡುಪಿಯ ಕಲಾಕೇಂದ್ರದಲ್ಲಿ ಭಾಗವತಿಕೆ ಸೇರಿದಂತೆ ಯಕ್ಷಗಾನದ ಸಾಂಪ್ರದಾಯಿಕ ಶಿಕ್ಷಣ ಪಡೆದಿದ್ದರು. ಈ ಹಿಂದೆ ಸಾಲಿಗ್ರಾಮ ಮೇಳದ ಭಾಗವತರಾಗಿಯೂ ಕೆಲಸ ಮಾಡಿದ್ದರು. ಕೆಲಕಾಲ ಉಡುಪಿ ಕಲಾಕೇಂದ್ರದಲ್ಲಿ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಸಿಗಂದೂರು ಮೇಳದಲ್ಲಿ ಭಾಗವತರ ತಂಡದಲ್ಲಿ ಕೆಲಸ ಮಾಡಿದ್ದ ಅವರು ಬರಲಿರುವ ಋತುವಿನಿಂದ ಮೇಳದ ಮುಖ್ಯ ಭಾಗವತರಾಗಿ ಕಾರ್ಯ ನಿರ್ವಹಿಸುತ್ತಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ರಂಗ ಪ್ರದರ್ಶನ ಹಾಗೂ ಭಾಗವತಿಕೆಗಳೆರಡರಲ್ಲೂ ಅವರು ತಮ್ಮ ಛಾಪು ತೋರಿಸಿದ್ದರು. ಬಯಲಾಟದ ಪ್ರಸಂಗಗಳಿಗೂ ಭಾಗವತರಾಗಿ ಕಾರ್ಯ ನಿರ್ವಹಿಸುವ ಮೂಲಕ ಅವರು ಗಮನ ಸೆಳೆದಿದ್ದರು. ಇವರ ನಿಧನಕ್ಕೆ ಸಿಗಂದೂರು ದೇವಸ್ಥಾನ ಧರ್ಮದರ್ಶಿಯವರಾದ ಶ್ರೀ ರಾಮಪ್ಪ ಅವರು ಸಂತಾಪ ಸೂಚಿಸಿದ್ದಾರೆ.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code