ಜಿಲ್ಲೆನ್ಯೂಸ್

ಯುವನಿಧಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಜಿಲ್ಲಾಧಿಕಾರಿಗಳ ಕರೆ

ಯುವನಿಧಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಜಿಲ್ಲಾಧಿಕಾರಿಗಳ ಕರೆ


(KOLARA): ಕೋಲಾರ:ಜಿಲ್ಲೆಯ ಯುವಕರು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಯುವನಿಧಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ ರವರು ಕರೆ ಕೊಟ್ಟರು.
ಇಂದು ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಳ್ಳಳಾಗಿದ್ದ, ಯುವನಿಧಿ ಯೋಜನೆಯ ಫಲಾನುಭವಿಗಳನ್ನು ನೋಂದಣಿ ಮಾಡಿಸುವ ಕುರಿತು ಜಿಲ್ಲೆಯ ಎಲ್ಲಾ ಪ್ರಾಂಶುಪಾಲರೊoದಿಗಿನ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.


ಸರ್ಕಾರದ ಎಲ್ಲ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದು ಈ ಜಿಲ್ಲೆಯಲ್ಲಿ ಸಾಂಪ್ರದಾಯಿಕವಾಗಿ ಬಂದಿರುವ ವಾಡಿಕೆ. ರಾಜ್ಯ ಸರ್ಕಾರದ 5 ಗ್ಯಾರೆಂಟಿ ಯೋಜನೆಗಳಾದ ಶಕ್ತಿ, ಗೃಹಲಕ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆಗಳನ್ನು ನಮ್ಮ ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನ ಮಾಡಲಾಗಿದೆ. ಮಾನ್ಯ ಮುಖ್ಯಮಂತ್ರಿಗಳು ರಾಜ್ಯ ಸರ್ಕಾರದ ಯೋಜನೆಗಳು ಅನುಷ್ಟಾನಗೊಂಡಿರುವ ಪ್ರಗತಿ ಕಂಡು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅದರಂತೆ ಈ ಯುವನಿಧಿ ಯೋಜನೆಯ ಗ್ಯಾರೆಂಟಿಯನ್ನೂ ಸಹ ಯಶಸ್ವಿಯಾಗಿ ಅನುಷ್ಠಾನ ಮಾಡಲಾಗುವುದೆಂಬ ನಿರೀಕ್ಷೆಯಲ್ಲಿ ರಾಜ್ಯ ಸರ್ಕಾರ ಇದೆ. ಸರ್ಕಾರದ ನಿರೀಕ್ಷೆಗನುಗುಣವಾಗಿ ನಾವು ನಮ್ಮ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಬೇಕಿದೆ. ಈ ಹಿನ್ನೆಲೆಯಲ್ಲಿ ಯುವನಿಧಿ ಯೋಜನೆಯ ಪರಿಣಾಮಕಾರಿ ಅನುಷ್ಟಾನಕ್ಕಾಗಿ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರ ಸಹಕಾರ ಅಗತ್ಯವಾಗಿದೆ ಎಂದರು.


ಜಿಲ್ಲಾ ಕೌಶಲ್ಯಾಭಿವೃದ್ದಿ ಇಲಾಖೆಯ ಮೂಲಕ ಈ ಯೋಜನೆ ಜಾರಿಗೊಳ್ಳುತ್ತಿದ್ದು, ಹೆಚ್ಚು ಹೆಚ್ಚು ಫಲಾನುಭವಿಗಳನ್ನು ಈ ಯೋಜನೆಯಲ್ಲಿ ತೊಡಗಿಸಿಕೊಳ್ಳಬೇಕಿರುತ್ತದೆ. ಇದರಿಂದ ನಿರುದ್ಯೋಗಿ ಯುವಕರ ನಿಖರ ಮಾಹಿತಿ ಸರ್ಕಾರಕ್ಕೆ ಲಭ್ಯವಾಗುವುದಲ್ಲದೇ, ಅಂಥವರಿಗೆ ವಿದ್ಯೆಗೆ ತಕ್ಕ ಉದ್ಯೋಗ ದೊರಕಿಸಿಕೊಡಲು ಇಂತಹ ಯೋಜನೆಗಳು ಪರಿಣಾಮಕಾರಿಯಾಗುತ್ತವೆ ಎಂದು ಅಭಿಪ್ರಾಯ ಪಟ್ಟರು.
ಕಾಲೇಜು ಮಟ್ಟದಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಲು ಕಾರ್ಯಾಗಾರಗಳನ್ನು ಏರ್ಪಡಿಸಿ ಫಲಾನುಭವಿಗಳನ್ನು ಗುರುತಿಸಲು ಯೋಜನೆ ರೂಪಿಸಿಕೊಳ್ಳಲು ತಿಳಿಸಿದರು. 2022-23ನೇ ಸಾಲಿನಲ್ಲಿ ಪದವಿ/ ಡಿಪ್ಲೊಮಾ ಉತ್ತೀರ್ಣರಾದ ವಿದ್ಯಾರ್ಥಿಗಳು, ಪದವಿ/ಡಿಪ್ಲೊಮಾ ನಂತರ ಕನಿಷ್ಠ 6 ತಿಂಗಳ ಅವಧಿಯ ವರೆಗೆ ಖಾಸಗಿ ಅಥವಾ ಸರ್ಕಾರಿ ಉದ್ಯೋಗ ಹೊಂದಿಲ್ಲದವರು, ಸ್ವಯಂ ಉದ್ಯೋಗ ಹೊಂದಿಲ್ಲದವರು, ಉನ್ನತ ವಿದ್ಯಾಭ್ಯಾಸ ಮುಂದುವರೆಸದೇ ಇರುವವರು ಕರ್ನಾಟಕದಲ್ಲಿ ವಾಸವಿರುವವರು ಎಸ್.ಎಸ್.ಎಲ್.ಸಿ, ಪಿ.ಯು.ಸಿ ಪದವಿ/ಡಿಪ್ಲೊಮಾ ಪ್ರಮಾಣ ಪತ್ರಗಳನ್ನು ಸಲ್ಲಿಸುವ ಮೂಲಕ ಸೇವಾಸಿಂಧು ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲದೇ ಕರ್ನಾಟಕ ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿಯೂ ಸಹ ಅರ್ಜಿ ಸಲ್ಲಿಸಬಹುದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ಜಿಲ್ಲೆಯ ವಿವಿಧ ಪದವಿ/ಡಿಪ್ಲೊಮಾ ಕಾಲೇಜುಗಳ ಪ್ರಾಂಶುಪಾಲರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code