Newsಶಿವಮೊಗ್ಗ

ಸಾಗರ ತಾಲೂಕಿನ ಚಿತ್ರ ಸಿರಿಯ ಚಂದ್ರಶೇಖರ ಎನ್. ಸಿರಿವಂತೆಯವರಿಗೆ ರಾಜ್ಯೋತ್ಸವ ಪ್ರಶಸ್ತಿ.

ಸಾಗರ ತಾಲೂಕಿನ ಚಿತ್ರ ಸಿರಿಯ ಚಂದ್ರಶೇಖರ ಎನ್. ಸಿರಿವಂತೆಯವರಿಗೆ ರಾಜ್ಯೋತ್ಸವ ಪ್ರಶಸ್ತಿ.

(SHIVAMOGA): ಮಲೆನಾಡಿನ ಹೆಮ್ಮೆಯ ಮಣ್ಣಿನ ಕಲೆ ಹಸೆಚಿತ್ತಾರ, ಭತ್ತದ ತೆನೆಯ ತೋರಣ, ಕನ್ನಡ ಅಕ್ಷರವ ಕಲಿಯುವ ಕಲೆಯ ಆವಿಷ್ಕಾರ, ಅಧ್ಯಯನ, ಕಣ್ಣು ತೆರೆಯುವ ಬುದ್ಧ ಪ್ರದರ್ಶನದ ಮೂಲಕ ಸಾಗರ ತಾಲೂಕಿನಲ್ಲಿರುವ ಸಿರಿವಂತೆ ಎಂಬ ಪುಟ್ಟ ಗ್ರಾಮದಿಂದ ದೇಶ-ವಿದೇಶದವರೆಗೆ ಕಲಾರಸಿಕರಲ್ಲಿ ಮರೆಯದ ನೆನಪಿನ ಚಿತ್ತಾರ ಬಿಡಿಸಿರುವ ಎನ್. ಚಂದ್ರಶೇಖರ ಈಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
1962ರಲ್ಲಿ ನಾರಾಯಣ ನಾಯ್ಕ ಮತ್ತು  ಕಾಮಾಕ್ಷಮ್ಮನವರ ಪುತ್ರರಾಗಿ ಜನಿಸಿದ ಚಂದ್ರಶೇಖರ್ ಪಿಯುಸಿ ಶಿಕ್ಷಣ ಪೂರೈಸಿ ಕಲೆ- ಸಂಸ್ಕೃತಿ ಅಧ್ಯಯನ, ಆವಿಷ್ಕರಣದಲ್ಲಿ ತೊಡಗಿಕೊಂಡು. ಮಲೆನಾಡಿನಲ್ಲಿ ಪ್ರಚಲಿತದಲ್ಲಿರುವ ಹಸೆ ಚಿತ್ತಾರ, ಭತ್ತದ ತೋರಣಗಳ ಕಲೆಗಳ ಸಾಂಪ್ರದಾಯಿಕ ಮೂಲ ಉಳಿಸಿ, ಹೊಸತನದ ವಿನ್ಯಾಸ ರಚಿಸಿ, ಪ್ರಾಕೃತಿಕ ಬಣ್ಣ, ಆಧುನಿಕ ವರ್ಣ ವೈವಿಧ್ಯದ ಮೂಲಕ ಜನಾಕರ್ಷಣೆ ತಂದಿದ್ದಲ್ಲದೆ, ಕಲೆಯ ತರಬೇತಿಯನ್ನೂ ನೀಡಿದರು. ದೇಶದ ಕೊಲ್ಕತ್ತ, ಮಧುರೈ, ಹೈದರಾಬಾದ್, ಕೊಚ್ಚಿನ್ ಸೇರಿದಂತೆ ಕರ್ನಾಟಕದ ವಿವಿಧೆಡೆಗಳಲ್ಲಿ ಪ್ರದರ್ಶನ, ಮೂಲಕ ಮಲೆನಾಡ ಕಲೆಯನ್ನು ಪ್ರಚಾರ ಗೊಳಿಸಿದರು. 1111 ಅಡಿಯ ಭತ್ತದ ತೆನೆ ತೋರಣ ರಚಿಸಿದರು.


ಕಲೆಯಲ್ಲಿ ಜೀವ ತುಂಬುವ ಮೂಲಕ ಜೀವನ ಕಲೆಯ ಸಾರವನ್ನೂ ಅರಿತ ಚಂದ್ರಶೇಖರ್ ತಮ್ಮ ಮನೆಯಲ್ಲಿ ಕಣ್ಣು ತೆರೆಯುವ ಬುದ್ಧನ ಪ್ರತಿಮೆ ಕೂರಿಸುವ ಮೂಲಕವೂ ಗಮನ ಸೆಳೆದಿದ್ದಾರೆ. ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ದುಬೈನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನಗಳಲ್ಲಿ ಪಾರಂಪರಿಕ ಕಲೆಯನ್ನು ಪ್ರದರ್ಶಿಸಿ  ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದಾರೆ. 2008ರಲ್ಲಿ ಜಪಾನ್‌ನಲ್ಲಿ ನಡೆದ ಅಂತರಾಷ್ಟ್ರೀಯ  ಚಿತ್ರಕಲಾ ಪ್ರದರ್ಶನದಲ್ಲಿ ಭಾರತದ ಕಲಾಪ್ರತಿನಿಧಿಯಾಗಿ ಪಾಲ್ಗೊಂಡಿದ್ದರು. ಕನ್ನಡ ಅಕ್ಷರಗಳ ಕಲಾತ್ಮಕ ಕಲಿಕೆ, ಚಮತ್ಕೋನದ ಆವಿಷ್ಕಾರ ಇವರ ಸಾಧನೆಯಾಗಿದೆ. ಸಾಹಿತ್ಯ ರಚನೆಯಲ್ಲೂ ಆಸಕ್ತಿ ಹೊಂದಿದ ಇವರ `ಭತ್ತದ ಸಿರಿ’ ಕವನ ಸಂಗ್ರಹ ವಿವಿಧ ಲೇಖನ ಪ್ರಕಟಣೆ ಸಾಹಿತ್ಯ ಲೋಕಕ್ಕೆ ಇವರ ಕೊಡುಗೆಗಳಾಗಿವೆ.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code