ಅಮಚಿಯಲ್ಲಿ ದತ್ತಿ ಉಪನ್ಯಾಸ ಹಾಗೂ ಭೀಷ್ಮಾರ್ಜುನ ತಾಳಮದ್ದಳೆ ಪ್ರಸಂಗ ಪ್ರದರ್ಶನ
ತಾಳಮದ್ದಳೆ ಸಾಹಿತ್ಯದ ಶಕ್ತಿ..ವಿ.ಟಿ.ಸ್ವಾಮಿ
(SHIVAMOGA): ಸಾಗರ:ತಾಳಮದ್ದಲೆ ಜನ ಸಾಮಾನ್ಯರಿಗೆ ತಲುಪುವ ಬಹುಮುಖ ಮಾಧ್ಯಮವಾಗಿದೆ ಎಂದು ಯಕ್ಷಗಾನ ಕಲಾವಿದ ಶಂಕರನಾರಾಯಣ ಹೊಸಕೊಪ್ಪ ಹೇಳಿದರು.
ಅವರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಭಾಗವತ ಯಕ್ಷಮಿತ್ರ ಮಂಡಳಿ ಅಮಚಿ ಇವರು ಇಲ್ಲಿಗೆ ಸಮೀಪದ ಅಮಚಿಯ ಮಹಾಬಲಗಿರಿ ಅವರ ಮನೆ ಅಂಗಳದಲ್ಲಿ ಆಯೋಜಿಸಿದ್ದ ತ್ರಿಪುರಾಂತಕೇಶ್ವರ ಯಕ್ಷಗಾನ ಕಲಾಸಂಘ ಖಂಡಿಕಾ ಇವರು ನೀಡಿದ ದಿ:ಪಟೇಲ್ ಲಕ್ಷ್ಮೀನಾರಾಯಣ ಅಮಚಿ ಇವರ ದತ್ತಿ ಉಪನ್ಯಾಸ ಕಾರ್ಯಕ್ರದಲ್ಲಿ ಮಾತನಾಡಿ ತಾಳಮದ್ದಲೆಗೆ ವಿಶೇಷವಾದ ಸಾಂಸ್ಕೃತಿಕ ಶಕ್ತಿ ಇದೆ. ಜನ ಸಾಮಾನ್ಯರಿಗೆ ಹತ್ತಿರವಾಗುವ ಅನೇಕ ವಿಷಯಗಳನ್ನು ಸರಳವಾಗಿ ಹಾಗೂ ಅರ್ಥವಾಗುವ ರೀತಿಯಲ್ಲಿ ತಿಳಿಸಲಾಗುತ್ತದೆ. ಯಕ್ಷಗಾನದ ಮುನ್ನೆಲೆಗೆ ಬರುವುದೇ ತಾಳಮದ್ದಲೆ ಮೂಲಕ. ಹಾಗಾಗಿ ಅನೇಕ ಕಲಾವಿದರು ಬೆಳೆದಿರುವುದೇ ತಾಳಮದ್ದಳೆಯಿಂದ. ಅದರಲ್ಲೂ ವಿಶೇಷವಾಗಿ ಪಟೇಲ್ ಲಕ್ಷ್ಮೀನಾರಾಯಣ ಅವರು ಮಲೆನಾಡಿನ ಭಾಗದಲ್ಲಿ ಯಕ್ಷಗಾನ ಹಾಗೂ ತಾಳಮದ್ದಲೇ ಮೂಲಕ ಅನೇಕ ಕಲಾವಿದರನ್ನು ಬೆಳೆಸಿದ್ದಾರೆ. ಹಾಗೂ ಪೋಷಿಸಿದ್ದಾರೆ ಎಂದವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಸಾಪ ತಾಲ್ಲೂಕು ಅಧ್ಯಕ್ಷ ವಿ.ಟಿ.ಸ್ವಾಮಿ ಮಾತನಾಡಿ ಆಧುನಿಕತೆಯ ಭರಾಟೆಯಲ್ಲಿ ಮೌಲ್ಯಯುತ ಕಲೆಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಸಾಹಿತ್ಯ ಹಾಗೂ ಕಲೆಗಳು ರಾಜಾಶ್ರಯದಿಂದ ಇಂದು ಜನಾಶ್ರಯದತ್ತ ಬಂದಿದ್ದು ಇಂತಹ ಕಲೆ ಸಾಹಿತ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜನ ಸಾಮಾನ್ಯರು ಮುಂದಾಗಬೇಕಾಗಿದೆ. ಯಕ್ಷಗಾನ ಹಾಗೂ ತಾಳಮದ್ದಲೆ ಸಾಹಿತ್ಯದ ತಾಯಿಯಾಗಿದೆ. ಮನಮುಟ್ಟುವಂತೆ ಅನೇಕ ವಿಚಾರಗಳನ್ನು ಇದರ ಮೂಲಕ ನೀಡಲಾಗುತ್ತದೆ. ರಾಮಾಯಣ ಮಹಾಭಾರತದಂತಹ ಅನೇಕ ಕೃತಿಗಳ ಸಾರವನ್ನು ಸಂಭಾಷಣೆಗಳ ಮೂಲಕ ತಿಳಿಸಲಾಗುತ್ತದೆ. ಸಂಗೀತ, ಕಲೆ ಸಾಹಿತ್ಯದ ಮೂಲಕ ಬದುಕಿನ ಬಾಂಧವ್ಯವನ್ನು ಬೆಳೆಸಲು ಸಾಧ್ಯವಾಗುತ್ತದ ಎಂದರು.
ಈ ಸಂದರ್ಭದಲ್ಲಿ ಯಕ್ಷಗಾನ ಹಿರಿಯ ಕಲಾವಿದರಾದ ಎಂ.ಆರ್.ಲಕ್ಷ್ಮೀನಾರಾಯಣ, ಎ.ಎಸ್.ಮಹಾಬಲ ಗಿರಿ ಮೊದಲಾದವರು ಉಪಸ್ಥಿತರಿದ್ದರು. ಅಮೃತದೇವ ಕಟ್ಟಿನಕೆರೆ ಅವರು ಕಾರ್ಯಕ್ರಮ ನಿರೂಪಿಸಿದರು.
ಜನಮನ ಸೆಳೆದ ಭೀಷ್ಮಾರ್ಜುನ ತಾಳಮದ್ದಲೆ ಪ್ರಸಂಗ:
ಇದೆ ಸಂದರ್ಭದಲ್ಲಿ ಭಾಗವತ ಯಕ್ಷಮಿತ್ರ ಮಂಡಳಿ ಅಮಚಿಯವರು ಭೀಷ್ಮಾರ್ಜುನ ತಾಳಮದ್ದಲೆ ಪ್ರಸಂಗವನ್ನು ಪ್ರದರ್ಶಿಸಿದರು.ಹಿಮ್ಮೇಳನದಲ್ಲಿ ಮಹಾಬಲಗಿರಿರಾವ್ ಅಮಚಿ, ಪ್ರಶಾಂತ್ ಮಧ್ಯಸ್ಥರು ಗೊರೆಮನೆ, ಎ.ಎಂ.ತಿಮ್ಮಪ್ಪ ಅಮಚಿ. ಮದ್ದಳೆಯಲ್ಲಿ ಮಂಜುನಾಥ ಗುಡ್ಡೇದಿಂಬ, ಗಜಾನನ ದೊಡ್ಡಬಾಳೆ, ಚಂಡೆಯನ್ನು ಮಹಾಬಲೇಶ್ವರ ಮೂಡಗೋಡು, ಅಮೃತದೇವ ಕಟ್ಟಿನಕೆರೆ ಹಾಗೂ ಮುಮ್ಮೇಳನದಲ್ಲಿ ಎಂ.ಆರ್.ಲಕ್ಷ್ಮೀನಾರಾಯಣ, ಎಂ.ಎನ್.ಹೆಗಡೆ ಯಲ್ಲಾಪುರ,ಸುಭ್ರಾಯ ಹೆಗಡೆ ಶಿರಸಿ, ಪ್ರಸಾದ್ ಭಟ್ಕಳ, ಮಹೇಶ್ ಭಟ್ ಉಮ್ಮಚ್ಚಿಗೆ ಇವರು ನಿರ್ವಹಿಸಿದರು ನೂರಾರು ಸಂಖ್ಯೆಯಲ್ಲಿ ಯಕ್ಷಭಿಮಾನಿಗಳು ಭಾಗವಹಿಸಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ