ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗೂ ಪ್ರೋತ್ಸಾಹ ಅಗತ್ಯ
(SHIVAMOGA): ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗೂ ಪ್ರೋತ್ಸಾಹ ನೀಡುವ ಮೂಲಕ ಅವರ ವಿಕಾಸಕ್ಕೆ ನೆರವಾಗಬೇಕು ಎಂದು ಮಲೆನಾಡ ಸಿರಿ ಸಂಸ್ಥೆಯ ಅಧ್ಯಕ್ಷ ರಾಜು ಹಿರಿಯಾವಲಿ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕು ಯಲಸಿ ಸಹಿಪ್ರಾ ಶಾಲೆಯಲ್ಲಿ ಅವರು ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಕ್ಕಳಿಗೆ ಚಿತ್ರಸ್ಪರ್ಧೆ ಹಮ್ಮಿಕೊಂಡು ಬಹುಮಾನ ವಿತರಿಸಿ ಮಾತನಾಡಿದರು.
ತಾಲ್ಲೂಕಿನ ಮೂಲೆಮೂಲೆಯಲ್ಲಿನ ಸರ್ಕಾರಿ ಶಾಲೆಗಳಿಗೆ ತೆರಳಿ ಅಲ್ಲಿನ ಕುಂದು ಕೊರತೆಗಳ ಬಗ್ಗೆ ವಿಚಾರಿಸುವ ಜೊತೆಗೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಮುಖೇನ ಅವರನ್ನ ಶಿಕ್ಷಣದತ್ತ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಸಂಸ್ಥೆಯ ಉದ್ಧೇಶ ಕೂಡ ಮುಂಪೀಳಿಗೆಯ ಮಕ್ಕಳನ್ನು ಮುಖ್ಯವಾಹಿನಿಗೆ ತರುವುದಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರ ಸಹಕಾರವೂ ಗಮನಾರ್ಹವಾಗಿದೆ ಎಂದರು.
ಮಲೆನಾಡ ಸಿರಿ ಸಂಸ್ಥೆಯ ರಾಮಚಂದ್ರ ಮಾತನಾಡಿ, ಮಕ್ಕಳಿಗೆ ಗುಣಾತ್ಮಕ ಶಿಕ್ಷಣದ ಜೊತೆಗೆ ನೈತಿಕ ಹೊಣೆಗಾರಿಕೆಯ ಜಾಗೃತಿಯನ್ನು ಮೂಡಿಸಬೇಕು. ಗುರುಹಿರಿಯರಿಗೆ ಗೌರವ ನೀಡುವ ಶಿಕ್ಷಣವೂ ಬೇಕಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಗ್ರಾಮದ ಪ್ರಮುಖ ಶ್ರೀಪಾದ ಬಿಚ್ಚುಗತ್ತಿ ಮಾತನಾಡಿ, ಕೇವಲ ಸರ್ಟಿಫಿಕೇಟ್ ಶಿಕ್ಷಣಕ್ಕಾಗಿ ಮಕ್ಕಳ ಸರ್ವತೋಮುಖ ಬೆಳವಣಿಗೆಯ ಪ್ರಮುಖ ಅಂಶಗಳನ್ನು ಮರೆತಿದ್ದೇವೆ. ಅವರಿಗೆ ಶುದ್ಧ ಗಾಳಿ, ನೀರು, ಆಹಾರ ಕೊಡುವಲ್ಲಿ ನಾವು ಸೋಲುತ್ತಿದ್ದೇವೆ ಎಂದು ವಿಷಾಧಿಸಿದರು.
ಇದೇ ವೇಳೆ ಮಕ್ಕಳಿಗೆ ಪ್ಲಾಸ್ಟಿಕ್ ಮುಕ್ತ ಶಾಲೆಯನ್ನಾಗಿಸಲು ಪ್ರಮಾಣ ವಚನ ಬೋಧಿಸಲಾಯಿತು. ನಾಡುನುಡಿಯ ಬಿಂಬಿಸುವ ಚಿತ್ರ ರಚಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಶಾಲಾ ಸಮಿತಿ ಅಧ್ಯಕ್ಷ ಸುರೇಶ್, ಮಲೆನಾಡ ಸಿರಿ ಸದಸ್ಯರಾದ ರಾಮಚಂದ್ರ, ಗ್ರಾಮ ಪ್ರಮುಖ ರಾದ ಜಾನಕಪ್ಪ ವಡೆಯರ್, ಬುಕ್ಕೇಶ್, ಶಾಲಾ ಸಮಿತಿ ಸದಸ್ಯರು, ಪೋಷಕರು, ಮುಶಿ ನಾಗರಾಜ್, ಸಶಿ ಸೋಮಶೇಖರ್ ಮುಂತಾದವರಿದ್ದರು.
ವರದಿ: ಮಧು ರಾಮ್ ಸೊರಬ