ಅಮರಜ್ಯೋತಿ ಆಂಗ್ಲ ಮಾಧ್ಯಮ ಪದವಿ ಪೂರ್ವ ಕಾಲೇಜಿನಲ್ಲಿ ಕ್ರಿಸ್‌ಮಸ್ ಆಚರಣೆ
(SHIVAMOGA): ಸೊರಬ: ಪ್ರಸ್ತುತ ದಿನಗಳಲ್ಲಿ ಯುವ ಜನತೆ ಧರ್ಮ, ಸಂಪ್ರದಾಯ, ಸಂಸ್ಕೃತಿ, ಮತ್ತು ಆಚಾರ-ವಿಚಾರಗಳ ಬಗ್ಗೆ ಅರಿವಿನ ಕೊರತೆ ಕಾಣಿಸುತ್ತಿರುವುದು ಆತಂಕದ ವಿಷಯವಾಗಿದೆ ಎಂದು ಇತಿಹಾಸ ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ ಹೇಳಿದರು.
ಪಟ್ಟಣ ಹೊಸಪೇಟೆ ಬಡಾವಣೆಯ ಅಮರಜ್ಯೋತಿ ಆಂಗ್ಲ ಮಾಧ್ಯಮ ಪದವಿ ಪೂರ್ವ ಕಾಲೇಜಿನಲ್ಲಿ ಕ್ರಿಸ್‌ಮಸ್ ಆಚರಣೆ ಹಿನ್ನೆಲೆಯಲ್ಲಿ ಹಮ್ಮಿಕೊಂಡ ನೋಯಲ್ ವೈಬ್ಸ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಬ್ಬ ಹರಿದಿನಗಳ ಮಹತ್ವವನ್ನು ಮತ್ತು ಅದರ ಹಿಂದಿರುವ ತತ್ವಗಳನ್ನು ತಿಳಿದುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಧರ್ಮವು ನೈತಿಕತೆ ಮತ್ತು ಸತ್ಯದ ತಳಹದಿಯ ಮೇಲೆ ಸ್ಥಾಪಿತವಾಗಿದ್ದು, ಜೀವನದ ದಾರಿದೀಪವಾಗಿರುತ್ತದೆ. ಯುವಪೀಳಿಗೆ ಮೂಲ ಸಂಸ್ಕೃತಿಯ ಮೌಲ್ಯಗಳನ್ನು ಅರ್ಥಮಾಡಿಕೊಂಡು, ಉತ್ತಮ ಸಂಸ್ಕಾರವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ವ್ಯಕ್ತಿಯ ವ್ಯಕ್ತಿತ್ವವನ್ನು ಬಲಪಡಿಸುತ್ತದೆ ಮತ್ತು ಸಮಾಜವನ್ನು ಉತ್ತಮ ದಿಕ್ಕಿನಲ್ಲಿ ಕೊಂಡೊಯ್ಯಲು ಸಹಕಾರಿಯಾಗುತ್ತದೆ ಎಂದರು.
ಪತ್ರಕರ್ತ ಎಸ್.ಆರ್. ಮಧುಕೇಶ್ವರ ಮಾತನಾಡಿ, ಯುವ ಜನತೆ ದುಶ್ಚಟಗಳಿಗೆ ಮಾರು ಹೋಗದೇ, ಉತ್ತಮ ಆರೋಗ್ಯವನ್ನು ಸಂಪಾದಿಸಿ ಕೊಳ್ಳಬೇಕು. ನಿತ್ಯ ವ್ಯಾಯಾಮ ಮಾಡುವುದನ್ನು ಮೈಗೂಡಿಸಿ ಕೊಳ್ಳಬೇಕು. ತಂತ್ರಜ್ಞಾನದ ಯುಗದಲ್ಲಿ ಬೆರಳ ತುದಿಯಲ್ಲಿ ಲಭ್ಯವಿದೆ. ಆದರೆ, ಇದನ್ನು ಜ್ಞಾನಾರ್ಜನೆ ಬಳಕೆ ಮಾಡಿಕೊಳ್ಳಬೇಕು ವಿನಃ, ಕಾಲಹರಣ ಸಲ್ಲದು. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಕ್ರೀಡೆ ಮತ್ತು ಸಾಹಿತ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು. ನಮ್ಮ ಪರಿಸರ, ಸಂಸ್ಕೃತಿ, ಮತ್ತು ಪ್ರಾದೇಶಿಕ ಜ್ಞಾನವನ್ನು ಬೆಳೆಸುವುದಕ್ಕೆ ತಂತ್ರಜ್ಞಾನವನ್ನು ಒಂದು ಸಾಧನವಾಗಿ ಬಳಸಬೇಕು. ಮೂಲ ಜ್ಞಾನವನ್ನು ಕಡೆಗಣಿಸಬಾರದು ಎಂದರು.
ಸಂಸ್ಥೆಯ ಸಂಯೋಜಕಿ ಸಿಸ್ಟರ್ ಲೆನಿಟಾ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ರಿಸ್‌ಮಸ್ ಹಬ್ಬ ಸೇರಿದಂತೆ ಎಲ್ಲಾ ಹಬ್ಬಗಳು ಸಮಾಜವನ್ನು ಒಗ್ಗೂಡಿಸುವ ಹಿನ್ನೆಲೆಯನ್ನು ಹೊಂದಿರುತ್ತವೆ. ಪ್ರೀತಿ, ತ್ಯಾಗ ಮತ್ತು ಸಹಾನುಭೂತಿಯ ಬೋಧನೆಗಳಿಗೆ ಪೂಜ್ಯನೀಯವಾದ ಯೇಸು ಕ್ರಿಸ್ತನ ಜನನ ದಿನವಾಗಿದ್ದು, ಈ ಸಂದರ್ಭದಲ್ಲಿ ಅನೇಕ ಧಾರ್ಮಿಕ ಕಾರ್ಯಗಳು ನಡೆಯುತ್ತವೆ. ಕ್ರೈಸ್ತರು ಮಾತ್ರವಲ್ಲದೇ ಜಗತ್ತಿನಲ್ಲಿ ಎಲ್ಲ ಧರ್ಮಿಯರು ಕ್ರಿಸ್‌ಮಸ್ ಹಬ್ಬದಲ್ಲಿ ಪಾಲ್ಗೊಳ್ಳುವುದು ವಿಶೇಷವಾಗಿದೆ ಎಂದರು.
ಸಂಸ್ಥೆಯ ಪಾಂಶುಪಾಲೆ ಸಿಸ್ಟರ್ ಸಿಲ್ವಿಯಾ ಸಿಕ್ವೇರಾ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲೆ ಸಿ. ಹರ್ಷಿತಾ, ಅಧ್ಯಾಪಕರಾದ ಸುಬ್ರಾಹ ಹಳ್ಳೇರ್, ನಟರಾಜ್, ಪ್ರಜ್ವಲ್, ಪ್ರಶಾಂತ್, ವೆಂಕಟೇಶ್, ಬಿಂದುಶ್ರೀ, ಶೀತಲ್, ಜುಬೇದಾ, ರಂಜಿತಾ, ಅನಿಲ್ ಕುಮಾರ್, ನಾಗರಾಜ್, ಸಚಿನ್, ಅಶ್ವಿನಿ, ಸುಪ್ರಿಯಾ, ಪದ್ಮಾವತಿ, ರೇನಿಟಾ ಉಪಸ್ಥಿತರಿದ್ದರು.
ವರದಿ: ಮಧು ರಾಮ್ ಸೊರಬ