ನ್ಯೂಸ್ಶಿವಮೊಗ್ಗ

ಗೌರಿಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಪ್ರಯುಕ್ತ ಪೇಟೆ ವ್ಯಾಪ್ತಿಯ ನಾಗರೀಕರ ಶಾಂತಿ ಸಭೆ.

ಗೌರಿಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಪ್ರಯುಕ್ತ ಪೇಟೆ ವ್ಯಾಪ್ತಿಯ ನಾಗರೀಕರ ಶಾಂತಿ ಸಭೆ.

(SHIVAMOGA): ಸಾಗರ: ಸ್ವಾತಂತ್ರ್ಯ ಪೂರ್ವದಲ್ಲಿ ಜನರನ್ನು ಒಗ್ಗೂಡಿಸಲು ಆಯೋಜಿಸಲಾಗುತ್ತಿದ್ದ ಗಣಪತಿ ಹಬ್ಬವು ಇಂದು ಹೊಸ ನಾಯಕರನ್ನು ಹುಟ್ಟುಹಾಕಲು ಮಾಡಲಾಗುತ್ತಿದೆ. ಆಯೋಜನಾ ಸಮಿತಿಯ ಪ್ರತಿಯೊಬ್ಬರೂ ನಾಯಕರೆ. ಹೀಗಾಗಿ ಆಯೋಜನಾ ಸಮಿತಿಯವರು ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಉಪವಿಭಾಗಾಧಿಕಾರಿ ಆರ್. ಯತೀಶ್ ಹೇಳಿದರು.


ಪಟ್ಟಣದ ಶಾರದಾಂಬಾ ಸಭಾಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ಗೌರಿಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಪ್ರಯುಕ್ತ ಪೇಟೆ ವ್ಯಾಪ್ತಿಯ ನಾಗರೀಕರ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ನೂರಾರು ಕಡೆ ಗಣಪತಿ ಕೂರಿಸಲಾಗುತ್ತದೆ. ಅಲ್ಲೆಲ್ಲ ಪೊಲೀಸ್ ಬಂದೋಬಸ್ತು ಮಾಡುವುದು ಕಷ್ಟದ ಕೆಲಸ. ಹೀಗಾಗಿ ಸಮಿತಿಯವರಿಗೂ ಒಂದಷ್ಟು ಜವಾಬ್ದಾರಿಗಳನ್ನು ಇಲಾಖೆ ನೀಡಿರುತ್ತವೆ. ಸ್ಥಳೀಯವಾಗಿ ಸೇರುವ ಎಲ್ಲ ಭಕ್ತರನ್ನು ನಿಯಂತ್ರಿಸುವುದು ಅವರ ಜವಾಬ್ದಾರಿ. ಹೀಗಾಗಿ ನೀವೆಲ್ಲ ನಿಮ್ಮ ಭಾಗದ ನಾಯಕರಾಗಿರುತ್ತೀರಿ. ನಿಮ್ಮ ಬೆಂಬಲಿಗರನ್ನು ನಿಯಂತ್ರಣದಲ್ಲಿಟ್ಟುಕೊಂಡು, ಶಾಂತಿಯುತವಾಗಿ ಹಬ್ಬ ಆಚರಿಸಲು ಸಹಕರಿಸಬೇಕು. ತುಂಬ ಶಾಂತಿಯುತವಾಗಿ, ಸಡಗರ- ಭಕ್ತಿಯಿಂದ ಹಬ್ಬವನ್ನು ಆಚರಿಸುವಂತಾಗಬೇಕು ಎನ್ನುವುದನ್ನು ಸಮಾಜಕ್ಕೆ ಅರಿವು ಮೂಡಿಸುವ ಸಲುವಾಗಿ ನಾವು ಸಭೆ ಕರೆಯುತ್ತೇವೆ. ಜತೆಯಲ್ಲಿ ಸುಖಾಸುಮ್ಮನೆ ಯಾವುದೋ ವಿಚಾರಕ್ಕೆ ಅಡ್ಡಿಪಡಿಸುವುದು, ತಡೆಯೊಡ್ಡುವುದು ಅಧಿಕಾರಿಗಳ ಮನಸ್ಥಿತಿಯಲ್ಲ. ಜವಾಬ್ದಾರಿಯುತ ನಾಗರೀಕರಾಗಿ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.


ಡಿವೈಎಸ್‍ಪಿ ಗೋಪಾಲಕೃಷ್ಣ ನಾಯಕ್ ಮಾತನಾಡಿ, ಕಾನೂನಿನ ಅಡಿಯಲ್ಲಿ ಅಗತ್ಯವಿರುವ ಎಲ್ಲ ರೀತಿಯ ಸಹಕಾರ ನೀಡಲು ಇಲಾಖೆ ಸಿದ್ಧವಿದೆ. ಅದನ್ನು ಮೀರಿ ನಡೆಯುವ ಯಾವುದೇ ಅಚಾತುರ್ಯಗಳಿಗೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಎಲ್ಲ ಸಮುದಾಯದ ಭಕ್ತರು ಶ್ರದ್ಧೆಯಿಂದ ಹಬ್ಬ ಆಚರಿಸುವಂತಾಗಬೇಕು. ಬದಲಾಗಿ ಗಾಂಜಾ, ಎಣ್ಣೆ ಮತ್ತಿನಲ್ಲಿ ನಡೆಸುವ ಅಬ್ಬರವಾಗಬಾರದು. ನಮ್ಮ ವರ್ತನೆಯಿಂದ ಮತ್ತೊಬ್ಬರಿಗೆ ತೊಂದರೆ, ಹಿಂಸೆಯಾಗಬಾರದು ಎನ್ನುವುದನ್ನು ಬಯಸುವ ದೇಶ ನಮ್ಮದು. ಜವಾಬ್ದಾರಿಯುತ ನಾಗರೀಕರಾಗಿ ನಾವು ಇನ್ನೊಂದು ಸಮುದಾಯ, ವ್ಯಕ್ತಿ, ಧರ್ಮಗಳಿಗೆ ಸಮಸ್ಯೆ ಉಂಟು ಮಾಡದೆ ಖುಷಿಯಿಂದ ಹಬ್ಬ ಆಚರಿಸೋಣ ಎಂದರು.
ಸಾರ್ವಜನಿಕರು ಹಬ್ಬಗಳ ಆಚರಣೆ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ತಮಗಿರುವ ಗೊಂದಲ ನಿವಾರಿಸಿಕೊಂಡರು. ಸಭೆಯಲ್ಲಿ ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ, ನಗರಸಭೆಯ ಪರಿಸರ ಅಭಿಯಂತರ ಮದನ್, ವೃತ್ತ ನಿರೀಕ್ಷಕರಾದ ಮಹಬಲೇಶ್ವರ ನಾಯ್ಕ, ಸೀತಾರಾಮ್, ಸೇರಿದಂತೆ ಮೆಸ್ಕಾಂ, ಅಗ್ನಿಶಾಮಕ ದಳ, ಮೊದಲಾದ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code