ಸರ್ಫೇಸಿ ಕಾಯ್ದೆಯಿಂದ ಕಾಫಿ ಹೊರಕ್ಕೆ: ಸ್ವಾಗತಾರ್ಹ
(CHIKKAMAGALURU): ಕಾಫಿ ತೋಟದ ಮೇಲಿನ ಸಾಲವು ಸರ್ಫೇಸಿ ಕಾಯ್ದೆಯಡಿ ಬರುವುದಿಲ್ಲ ಎಂದು ಕೇಂದ್ರ ವಾಣಿಜ್ಯ ಸಚಿವರು ನೀಡಿರುವ ಸ್ಪಷ್ಟನೆಯು ಸ್ವಾಗತಾರ್ಹವಾಗಿದೆ ಎಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಟಿ.ಎಂ.ಉಮೇಶ್ ಕಲ್ಮಕ್ಕಿ ಹೇಳಿದ್ದಾರೆ.
ಕಾಫಿ ತೋಟದ ಮೇಲೆ ಸಾಲ ಮಾಡಿ ಸಕಾಲದಲ್ಲಿ ಸಾಲ ಮರು ಪಾವತಿ ಮಾಡದೆ ಸುಸ್ತಿಯಾಗಿದ್ದ ಸಾಲಗಾರರು ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಅವರ ಹೇಳಿಕೆಯಿಂದಾಗಿ ನಿಟ್ಟುಸಿರು ಬಿಡುವಂತಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಷ್ಟು ದಿನ ನಿರ್ದಿಷ್ಟ ಪ್ರಕರಣಗಳಲ್ಲಿ ಬ್ಯಾಂಕುಗಳು ನ್ಯಾಯಾಲಯದ ಆದೇಶವನ್ನು ಮುಂದಿಟ್ಟುಕೊಂಡು ಸಾರಾಸಗಟಾಗಿ ಎಲ್ಲಾ ಸುಸ್ತಿದಾರರಿಗೂ ಸರ್ಫೇಸಿ ಕಾಯ್ದೆಯಡಿ ತೋಟ ಹರಾಜು ಮಾಡುವ ನೋಟಿಸ್ ನೀಡುತ್ತಿದ್ದರು. ಇದರಿಂದಾಗಿ ನೂರಾರು ಕಾಫಿ ಬೆಳೆಗಾರರು ತೋಟ ಹರಾಜು ಆಗುತ್ತದೆ ಎಂದು ಆತಂಕದಲ್ಲಿದ್ದರು.
ಈ ಬಗ್ಗೆ ಹಲವಾರು ವರ್ಷಗಳಿಂದ ಕಾಫಿ ಬೆಳೆಗಾರರು, ಕಾಫಿ ಸಂಘಟನೆಗಳು ವಿವಿಧ ಹೋರಾಟವನ್ನು ನಡೆಸಿದ್ದರು. ಬೆಳೆಗಾರರ ಬೇಡಿಕೆ ಕಾಫಿ ಕೃಷಿಯನ್ನು ಸರ್ಫೇಸಿ ಕಾಯ್ದೆಯಿಂದ ಹೊರಗಿಡಬೇಕು ಎಂದು ಪ್ರಬಲವಾಗಿತ್ತು.
ಈ ಕುರಿತು ಕ್ಷೇತ್ರದ ಸಂಸದರು, ಸಚಿವರುಗಳಿಗೆ ಮನವಿಯನ್ನು ಸಹ ಸಲ್ಲಿಸಿದ್ದರು. ಪ್ರಸ್ತುತ ಕೇಂದ್ರ ಸಚಿವರು ಈ ಬಗ್ಗೆ ಸ್ಪಷ್ಟನೆ ನೀಡಿರುವುದು ಸ್ವಾಗತಾರ್ಹವಾಗಿದ್ದು, ಕೇಂದ್ರ ಸರ್ಕಾರವು ಸದಾ ರೈತರು, ಬೆಳೆಗಾರರ ಪರವಾಗಿ ಇರುತ್ತದೆ ಎಂಬುದಕ್ಕೆ ಉತ್ತಮವಾದ ಉದಾಹರಣೆ ಇದಾಗಿದೆ. ಇಂತಹ ಉತ್ತಮ ನಿರ್ಧಾರ ಪ್ರಕಟಿಸಿರುವ ಕೇಂದ್ರ ಸರ್ಕಾರಕ್ಕೆ ಬೆಳೆಗಾರರು ಅಭಿನಂದನೆ ಸಲ್ಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಇದರೊಂದಿಗೆ ಕೇಂದ್ರ ಸರ್ಕಾರವು ಅಡಕೆ ಬೆಳೆಯ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಲು ಮುಂದಾಗಿರುವುದು ಸಹ ಅಡಕೆ ಬೆಳೆಗಾರರಿಗೆ ಪೂರಕವಾಗಿದೆ.
ಈ ಹಿಂದೆ ವಿಶ್ವ ಆರೋಗ್ಯ ಸಂಸ್ಥೆಯ ಸಹ ಸಂಸ್ಥೆಯೊಂದು ನಡೆಸಿದ್ದ ಅಧ್ಯಯನದಲ್ಲಿ ಅಡಕೆ ಕ್ಯಾನ್ಸರ್‌ಕಾರಕ ಅಂಶ ಹೊಂದಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಆತಂಕಗೊಂಡಿದ್ದು ಬೆಳೆಗಾರರ ಹಿತ ಕಾಪಾಡಲು ಕೇಂದ್ರ ಸರ್ಕಾರವು ಮುಂದಾಗಿರುವುದು ಶ್ಲಾಘನೀಯವಾಗಿದೆ.
ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯ ಭಾಗವಾಗಿರುವ ಅಡಕೆಯ ಔಷಧೀಯ ಗುಣಗಳ ಕುರಿತು ಸಂಶೋಧನೆ ನಡೆಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿರುವುದು ಸ್ವಾಗತಾರ್ಹವಾಗಿದ್ದು, ಒಟ್ಟಾರೆಯಾಗಿ ಕೇಂದ್ರ ಸರ್ಕಾರವು ಅಡಕೆ, ಕಾಫಿ ಬೆಳೆಗಾರರಿಗೆ ಪೂರಕವಾಗುವ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.