ಎಲ್ಲಿಯವರೆಗೆ ಕನ್ನಡ ಅನ್ನದ ಭಾಷೆ ಆಗುವುದಿಲ್ಲವೋ ಅಲ್ಲಿಯವರೆಗೆ ಕನ್ನಡ ಭಾಷೆ ಮತ್ತು ಕನ್ನಡಾಂಬೆಗೆ ತೊಂದರೆಗಳು ಕಟ್ಟಿಟ್ಟ ಬುತ್ತಿ- ಶಂಕರ್ ಶೇಟ್
(SHIVAMOGA): ಸೊರಬ: ಯಾರು ಮಾತೃಭಾಷೆಯನ್ನು ಪೂಜಿಸಿ ಗೌರವಿಸುತ್ತಾರೋ ಅವರನ್ನು ಮಾತೃಭಾಷೆ ರಕ್ಷಣೆ ಮಾಡುತ್ತದೆ ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶಂಕರ್ ಶೇಟ್ ಅಭಿಪ್ರಾಯಪಟ್ಟರು.
ಪಟ್ಟಣದ ಹೆಚ್‌ಪಿಆರ್ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಮಾತೃಭಾಷೆ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಶ್ವದಲ್ಲಿ ಅತ್ಯಂತ ಶ್ರೇಷ್ಠ ಸುಂದರ, ಸರಳ ಭಾಷೆ ಕನ್ನಡ. ಅನ್ಯ ಭಾಷೆಯನ್ನು ತನ್ನತ್ತ ಸೆಳೆಯುವ ಶಕ್ತಿ ಕನ್ನಡಕ್ಕಿದೆ. ಸಾಹಿತಿಗಳು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ, ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ದೊರಕಿರುವುದು ನಮ್ಮೆಲ್ಲರ ಸೌಭಾಗ್ಯ. ಎಲ್ಲಿಯವರೆಗೆ ಕನ್ನಡ ಆಡು ಭಾಷೆ ಆಗುವುದಿಲ್ಲವೋ, ಎಲ್ಲಿಯವರೆಗೆ ಶಿಕ್ಷಣ ಹಾಗು ಆಡಳಿತದಲ್ಲಿ ಕನ್ನಡ ಭಾಷೆ ಪ್ರಥಮ ಹಾಗೂ ಪ್ರಧಾನ ಭಾಷೆ ಆಗುವುದಿಲ್ಲವೋ, ಎಲ್ಲಿಯವರೆಗೆ ಕನ್ನಡ ಅನ್ನಭಾಷೆಯ ಆಗುವುದಿಲ್ಲವೋ ಅಲ್ಲಿಯವರೆಗೆ ಕನ್ನಡ ಭಾಷೆ ಮತ್ತು ಕನ್ನಡಾಂಬೆಗೆ ತೊಂದರೆಗಳು ಕಟ್ಟಿಟ್ಟ ಬುತ್ತಿ. ಇಡೀ ವಿಶ್ವದ ಎಲ್ಲಾ ಜನರು ಅವರ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯಬೇಕೆಂಬುದು ಈ ದಿನಾಚರಣೆಯ ಉದ್ದೇಶ. ಆದ್ದರಿಂದ ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಬೆಳೆಸುವಲ್ಲಿ ಹೆಚ್ಚಿನ ಗಮನವಹಿಸಬೇಕು ಎಂದು ಕರೆ ನೀಡಿದರು.
ಕನ್ನಡ ಉಪನ್ಯಾಸಕಿ ಪವಿತ್ರ ಎ.ವಿ ಉಪನ್ಯಾಸ ನೀಡಿ ಭಾಷೆ ಎಂಬುದು ಭಾವನೆಗಳ ಅಭಿವ್ಯಕ್ತಿ. ನಮ್ಮ ಭಾವನೆ, ನಮ್ಮ ಸಂಸ್ಕೃತಿ, ನಮ್ಮ ಕಲ್ಪನೆ, ಕನಸುಗಳೆಲ್ಲವೂ ಭಾಷೆಯಲ್ಲಿ ಅಡಗಿವೆ. ಭಾಷೆ ಸಂಸ್ಕೃತಿಯ ಪ್ರತಿಬಿಂಬ. ಒಂಬು ಭಾಷೆಯ ಸಾಂಸ್ಕೃತಿಕ ಪದಕೋಶವನ್ನು ಅನುವದಿಸಲು ಸಾಧ್ಯವಿಲ್ಲ, ವಿವರಿಸಲು ಮಾತ್ರ ಸಾಧ್ಯ. ಒಬ್ಬ ವ್ಯಕ್ತಿ ತಲೆಮಾರಿನಿಂದ ಬಳಸಿಕೊಂಡ ಭಾಷೆಗೆ ಸಾಂಸ್ಕೃತಿಕ ಆವರಣ ಬೆಳೆದಿರುತ್ತದೆ. ಅಂತಹ ಸಾಂಸ್ಕೃತಿಕ ವಾತಾವಣರ ಬೆಳೆಸಿಕೊಂಡ ಭಾಷೆಯನ್ನು ಮಾತೃಭಾಷೆ ಎಂದು ಕರೆಯುತ್ತೇವೆ. ಪ್ರಪಂಚದಲ್ಲಿರುವ ಸುಮಾರು 6೦೦೦ ಭಾಷೆಗಳಲ್ಲಿ ಶೇ.43 ರಷ್ಟು ಭಾಷೆಗಳು ಅಳಿವಿನಂಚಲ್ಲಿವೆ. ಇಷ್ಟು ಪ್ರಮಾಣದ ಭಾಷೆಗಳು ನಾಶವಾದರೆ ನಾವು ಕೇವಲ ಭಾಷೆಯನ್ನು ಮಾತ್ರ ಕಳೆದುಕೊಳ್ಳುವುದಿಲ್ಲ. ಅದರ ಜೊತೆಗೆ ಆ ಭಾಷೆಯ ಸಂಸ್ಕೃತಿ, ಸಂಪ್ರದಾಯವನ್ನು ಕಳೆದುಕೊಳ್ಳುತ್ತೇವೆ. ಈ ಹಿನ್ನೆಲೆಯಲ್ಲಿ ಬಹುಭಾಷೆ ಮತ್ತು ಸಂಸ್ಕೃತಿಯನ್ನು ಗುರುತಿಸಿ, ಪ್ರೋತ್ಸಾಹಿಸಿ, ಉಳಿಸುವ ನೆಲೆಯಿಂದ ಯುನೆಸ್ಕೋ ವಿಶ್ವ ಮಾತೃಭಾಷಾ ದಿನವನ್ನ ಆಚರಿಸುವ ನಿರ್ಧಾರ ಕೈಗೊಂಡಿತು. ಅದರ ಆಶಯದಂತೆ ಫೆ.21 ರಂದು ವಿಶ್ವ ಮಾತೃಭಾಷಾ ದಿನ ಆಚರಿಸಲಾಗುತ್ತಿದೆ ಎಂದರು.
ಪ್ರಾಂಶುಪಾಲ ಮಂಜುನಾಥ ಎಸ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಉದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಹೇಶ್ ಎಂ.ಕೆ ಅವರನ್ನು ಸನ್ಮಾನಿಸಲಾಯಿತು. ಆಕಾಶವಾಣಿ ಕಲಾವಿದ ಹೆಚ್.ಗುರುಮೂರ್ತಿ ಮತ್ತು ಸಂಗಡಿಗರಿoದ ಕನ್ನಡ ಗೀತ ಗಾಯನ ನಡೆಯಿತು.
ವೇದಿಕೆಯ ಕಾರ್ಯದರ್ಶಿ ಮಹೇಶ್ ಖಾರ್ವಿ, ಸಾಹಿತಿ ಉಮೇಶ್ ಭದ್ರಾಪುರ, ನೇತ್ರ ಉಮೇಶ್, ವೀಣಾ ನಾಯ್ಕ್, ಮೇಘಶ್ರೀ, ಅನುಷಾ, ಪೂರ್ಣಿಮಾ ಮತ್ತಿತರು ಉಪಸ್ಥಿತರಿದ್ದರು.
ವರದಿ: ಸಂದೀಪ ಯು.ಎಲ್, ವೆಸ್ಟರ್ನ್ ಘಾಟ್ ನ್ಯೂಸ್, ಸೊರಬ