ದುರ್ಗಾದೇವಿ ವಿಗ್ರಹ ನಿರ್ಮಾಣಕ್ಕೆ ಚಾಲನೆ
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಬಾಳೆಹೊನ್ನೂರು ಪಟ್ಟಣದ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ನಾಡಹಬ್ಬ ದಸರಾ ಅಂಗವಾಗಿ ಪ್ರತಿಷ್ಠಾಪಿಸುವ ಶ್ರೀ ದುರ್ಗಾಪರಮೇಶ್ವರಿ ವಿಗ್ರಹ ನಿರ್ಮಾಣ ಕಾರ್ಯಕ್ಕೆ ಭಾನುವಾರ ರೇಣುಕನಗರದ ಶ್ರೀಶಾಸ್ತ ಕಲಾಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಚಾಲನೆ ನೀಡಲಾಯಿತು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಈ ಕುರಿತು ಮಾಹಿತಿ ನೀಡಿ, ಅಕ್ಟೋಬರ್ 3 ರಿಂದ 12ರವರೆಗೆ 15ನೇ ವರ್ಷದ ದುರ್ಗಾದೇವಿ ನವರಾತ್ರಿ ಮಹೋತ್ಸವವನ್ನು ವಿಜೃಂಭಣೆಯಿಂದ ನಡೆಸಲಾಗುವುದು. ಪ್ರತೀ ವರ್ಷದಂತೆ ಈ ವರ್ಷವೂ ಹತ್ತು ದಿನಗಳ ಪರ್ಯಂತ ನವರಾತ್ರಿ ಮಹೋತ್ಸವ ನಡೆಯಲಿದ್ದು, ಜಿಲ್ಲೆಯಲ್ಲಿ ಅತೀ ದೊಡ್ಡ ನಾಡಹಬ್ಬ ಕಾರ್ಯಕ್ರಮಗಳಲ್ಲಿ ಇದು ಒಂದಾಗಿದೆ.
ಹತ್ತು ದಿನಗಳ ಪರ್ಯಂತ ದುರ್ಗಾದೇವಿಯ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ತ್ರಿಕಾಲ ಪೂಜೆ, ನಿತ್ಯ ಸಂಜೆ ವೈವಿದ್ಯಮಯ ಧರ್ಮ, ಕಲೆ, ಸಂಸ್ಕೃತಿ ಬಿಂಬಿತ ಸಾಂಸ್ಕೃತಿಕ ಕಾರ್ಯಕ್ರಮಗಳು ದುರ್ಗಾ ಮಂಟಪದಲ್ಲಿ ನಡೆಯಲಿವೆ.
ಆಯುಧಪೂಜೆ ದಿನ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಇದೇ ವೇದಿಕೆಯಲ್ಲಿ ನಾಡಿನ ಪ್ರಮುಖ ಗಣ್ಯರೊಬ್ಬರಿಗೆ ಶ್ರೀದುರ್ಗಾದೇವಿ ಗೌರವ ಶ್ರೀರಕ್ಷೆ ಪ್ರಧಾನ ಮಾಡಲಾಗುವುದು. ವಿಜಯದಶಮಿಯ ಅಂತಿಮ ದಿನ ವಿವಿಧ ಆಕರ್ಷಣೆಗಳೊಂದಿಗೆ ಹದಿನೈದಕ್ಕೂ ಹೆಚ್ಚು ಕಲಾತಂಡದೊಂದಿಗೆ ಪಟ್ಟಣದಲ್ಲಿ ವೈಭವಯುತವಾದ ಮೆರವಣಿಗೆ ನಡೆಸಿ ಭದ್ರಾನದಿಯಲ್ಲಿ ದುರ್ಗಾದೇವಿ ವಿಗ್ರಹವನ್ನು ಜಲಸ್ತಂಭನಗೊಳಿಸಲಾಗುವುದು ಎಂದು ತಿಳಿಸಿದರು.
ಸಮಿತಿಯ ಕಾರ್ಯಾಧ್ಯಕ್ಷ ಬಿ.ಚನ್ನಕೇಶವ ಬರಗಲ್, ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ವಿಗ್ರಹ ಶಿಲ್ಪಿ ಮಣಿಕಂಠ ಮತ್ತಿತರರು ಹಾಜರಿದ್ದರು.