ಇಂಟಿಗ್ರೇಟೆಡ್ ಟೌನ್ ಶಿಪ್ ನಿರ್ಮಾಣ ಒಂದು ವರ್ಷದಲ್ಲಿ ಡಿ ಪಿ ಆರ್ ಪೂರ್ಣ ಗೊಳಿಸಲಾಗುವುದು : ಸಚಿವ ಬಿ ಎಸ್ ಸುರೇಶ್
(KOLARA) ಕೋಲಾರ : ಕೋಲಾರ ಜಿಲ್ಲೆಯ ಕೆ.ಜಿ.ಎಫ್ ನಲ್ಲಿ ಇಂಟಿಗ್ರೇಟೆಡ್ ಟೌನ್ಶಿಪ್ (Integrated Township) ಯೋಜನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿಸ್ತೃತ ಯೋಜನೆ ವರದಿಯನ್ನು 1 ವರ್ಷಗಳೊಳಗೆ ಸಿದ್ಧಪಡಿಸುವಂತೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬಿ. ಎಸ್ ಸುರೇಶ್ ತಿಳಿಸಿದರು.
ಇಂಟಿಗ್ರೇಟೆಡ್ ಟೌನ್ಶಿಪ್ ನಿರ್ಮಾಣ ಮಾಡಲಿರುವ
ಸ್ಥಳ ಪರಿಶೀಲನೆಯನ್ನು ಶಾಸಕರುಗಳಾದ ಎಸ್.ಎನ್.ನಾರಾಯಣ ಸ್ವಾಮಿ ಹಾಗೂ ರೂಪಕಲಾ ರವರೊಂದಿಗೆ ನಡೆಸಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ ಪಟ್ಟಣದಲ್ಲಿ ಇಂಟಿಗ್ರೇಟೆಡ್ ಟೌನ್ ಶಿಪ್ ನಿರ್ಮಾಣ ಮಾಡಲು ನಗರಾಭಿವೃದ್ಧಿ ಇಲಾಖೆ ಈಗಾಗಲೇ ಕಾರ್ಯಪ್ರವೃತ್ತವಾಗಿದ್ದು ಡಿ.ಪಿ.ಆರ್ ಆದ ನಂತರ ಸ್ಥಳೀಯ ಶಾಸಕರುಗಳೊಂದಿ ಚರ್ಚೆ ಮಾಡಿ ಮುಖ್ಯ ಮಂತ್ರಿಗಳ ಸಲಹೆ ಮಾರ್ಗದರ್ಶನದಂತೆ 294 ಎಕರೆ ಪ್ರದೇಶದಲ್ಲಿ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಸುಸಜ್ಜಿತ ಹಾಗೂ ವೈಜ್ಞಾನಿಕ ರೀತಿಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಇಂಟಿಗ್ರೇಟೆಡ್ ಟೌನ್
ನಿರ್ಮಾಣ ಆಗಲಿದೆ ಎಂದು ತಿಳಿಸಿದರು.
ಚೆನೈ-ಬೆಂಗಳೂರು ಎಕ್ಸ್ಪ್ರೆಸ್ ಹೆದ್ದಾರಿ ಕೆ.ಜಿ.ಎಫ್ ಮೂಲಕ ಹಾದು ಹೋಗಿದ್ದು, ಇಂಟಿಗ್ರೇಟೆಡ್ ಟೌನ್ಶಿಪ್ ನಿರ್ಮಾಣ ಮಾಡಲು ಉದ್ದೇಶಿಸಿರುವ ಜಾಗದಿಂದ ಒಂದು ಕಿ.ಮೀ ಅಂತರದಲ್ಲಿದೆ. ಎಕ್ಸ್ಪ್ರೇಸ್ ಹೆದ್ದಾರಿಯಿಂದ ಟೌನ್ಶಿಪ್ ಗೆ ನೇರ ಸಂಪರ್ಕ ಕಲ್ಪಿಸಲಾಗುವುದು ಎಂದು ಹೇಳಿದರು.
ವಸತಿ ಯೋಜನೆ, ಕೈಗಾರಿಕೆಗಳು, ಆರೋಗ್ಯ ಘಟಕಗಳು ಶೈಕ್ಷಣಿಕ ಸಂಸ್ಥೆಗಳು, ವಾಣಿಜ್ಯ ಮುಂಗಟ್ಟುಗಳು, ಬ್ಯಾಂಕ್ಗಳು, ಉದ್ಯಾನವನ, ಮನೋರಂಜನ ತಾಣಗಳು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒಳಗೊಂಡಂತೆ, ಸದರಿ ಯೋಜನೆಯಿಂದಾಗಿ ಸ್ಥಳೀಯರಿಗೆ ಉದ್ಯೋಗ ಅವಕಾಶ ಮತ್ತು ಉತ್ತಮ ವಸತಿ ಯೋಜನೆಯ ವಿಭಿನ್ನ ಹಾಗೂ ವಿಶಿಷ್ಟವಾದ ಇಂಟಿಗ್ರೇಟೆಡ್ ಟೌನ್ಶಿಪ್ ರಾಜ್ಯದಲ್ಲೇ ಮಾದರಿಯಾಗಲಿದೆ ಎಂದು ಸಚಿವರು ವಿವರಿಸಿದರು.
ವರದಿ: ವಿಷ್ಣು ಕೋಲಾರ