ಧಾರ್ಮಿಕ ಸಾಹಿತ್ಯ ಕೃತಿಗಳಿಂದ ಮನದ ಪರಿವರ್ತನೆ ಸಾಧ್ಯ..ಮುನಿಶ್ರೀ ಪಾಯ
ಸಾಗರರು
(SHIVAMOGA): ಶರಾವತಿ ಹಿನ್ನೀರಿನ ಪ್ರದೇಶದ ಕಂದ್ರವಳ್ಳಿಯ ಪಂಚಕಲ್ಯಾಣ ಮಹೋತ್ಸವದಲ್ಲಿ ಸಾಹಿತಿ ವಿ.ಟಿ.ಸ್ವಾಮಿಯವರು ರಚಿಸಿದ ಪರಮಪೂಜ್ಯ ಮುನಿಶ್ರೀ 108 ಮಹಾನ್ ಸಾಗರರು ಅವರ ಜೀವನ ಸಾರ ಕುರಿತ ಕೃತಿ ಲೋಕಾರ್ಪಣೆ.
ತುಮರಿ-ಧಾರ್ಮಿಕ ಕೃತಿಗಳ ಸ್ವ ಅಧ್ಯಾಯದಿಂದ ಆತ್ಮ ಕಲ್ಯಾಣ ಸಾಧ್ಯ ಎಂದು ಮುನಿಶ್ರೀ ಪಾಯ ಸಾಗರರು ಹೇಳಿದರು.
ಅವರು ಇಲ್ಲಿಗೆ ಸಮೀಪದ ಕಳೂರು ಗ್ರಾಮದ ಕಂದ್ರವಳ್ಳಿಯಲ್ಲಿ ಭಗವಾನ್ ಮಹಾವೀರಸ್ವಾಮಿ ಜಿನ ಮಂದಿರದ ಪಂಚಕಲ್ಯಾಣ ಮಹೋತ್ಸವ ಕಾರ್ಯಕ್ರಮದಲ್ಲಿ ಸಾಹಿತಿ ವಿ.ಟಿ.ಸ್ವಾಮಿ ಇವರು ರಚಿಸಿದ ಪರಮಪೂಜ್ಯ ಮುನಿಶ್ರೀ 108 ಮಹಾನ್ ಸಾಗರರು ಜೀವನ ಸಾರ ಕೃತಿ ಬಿಡುಗಡೆಯ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಧರ್ಮವನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಂಡಲ್ಲಿ ಮಾತ್ರ ಜೀವನ ದರ್ಶನವಾಗುತ್ತದೆ. ಜಗತ್ತಿನಲ್ಲಿ ಅಹಿಂಸೆ ಮತ್ತು ಶಾಂತಿಯನ್ನು ಸಾರಿದ ಜೈನ ಧರ್ಮ ಅತ್ಯಂತ ಶ್ರೇಷ್ಠ ಧರ್ಮವಾಗಿದೆ. ಇಂತಹ ಧರ್ಮದ ಸಿದ್ದಾಂತಗಳ ಆಚರಣೆಯಿಂದ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯ.ಜೀವನದಲ್ಲಿ ಪ್ರತಿಯೊಬ್ಬರು ಆದರ್ಶಗಳನ್ನು ಅಳವಡಿಸಿಕೊಂಡು ಇನ್ನೊಬ್ಬರಿಗೆ ಮಾದರಿಯಾಗಬೇಕು,ಆತ್ಮ ಕಲ್ಯಾಣದೆಡೆ ಹೆಚ್ಚು ಗಮನವನ್ನು ನೀಡಬೇಕು, ಆತ್ಮ ಸಾಕ್ಷಾತ್ಕಾರದಿಂದ ಮೋಕ್ಷದೆಡೆಗೆ ಸಾಗಬಹುದು. ನಿತ್ಯ ನಿರಂತರವಾಗಿ ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ಈ ಮೂಲಕ ಸಾರ್ಥಕ ಜೀವನವನ್ನು ಸಾಗಿಸಬೇಕು ಎಂದವರು ತಿಳಿಸಿದರು.
ಮುನಿಶ್ರೀ 108 ಮಹಾನ್ ಸಾಗರರು ಪ್ರವಚನ ನೀಡಿ ತ್ಯಾಗಧರ್ಮದಿಂದ ಮಾತ್ರ ಜಗತ್ತಿನಲ್ಲಿ ಶಾಂತಿ ನೆಮ್ಮದಿ ನೆಲೆಸಲು ಸಾಧ್ಯವಾಗುತ್ತದೆ. ತೀರ್ಥಂಕರರು ಸಾರಿದ ಸಂದೇಶಗಳು ಎಲ್ಲಾರಿಗೂ ಬೆಳಕಾಗಿವೆ. ಬಾಹುಬಲಿ ಎನ್ನುವ ಮಹಾನ್ ಚೈತನ್ಯ ಸ್ವರೂಪಿಯಾಗಿದ್ದು ಅವರು ಸಾಗಿದ ಹಾದಿ ನಮಗೆಲ್ಲ ಬೆಳಕಾಗಿವೆ. ಯಾರೂ ಯಾರನ್ನು ನಿಂದನೆ ಟೀಕೆ ಮಾಡದೆ, ನಮ್ಮ ನಮ್ಮ ಆತ್ಮ ಸಾಕ್ಷಾತ್ಕರದ ಕಡೆಗೆ ಸಾಗಬೇಕಾಗಿದೆ. ಸರಳವಾದ ಜೀವನದ ಕಡೆ ಪ್ರತಿಯೊಬ್ಬರು ಗಮನ ಹರಿಸಬೇಕಾಗಿದೆ ಎಂದವರು ಹೇಳಿದರು. ಈ ಸಂದರ್ಭದಲ್ಲಿ ಮುನಿಶ್ರೀ108 ವಿದಿತಸಾಗರರು, ಮುನಿಶ್ರೀ108 ಸಮ್ಯುಕ್ತಸಾಗರರು ಉಪಸ್ಥಿತರಿದ್ದರು.
ಕೆ.ಎಸ್.ಓಂಕಾರ್ ಜೈನ್ ಪುಸ್ತಕವನ್ನು ಬಿಡುಗಡೆ ಮಾಡಿದರು. ಈ ಸಂದರ್ಭಲ್ಲಿ ಜ್ಯೋತಿ ಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.
ಕುಗ್ರಾಮವೊಂದರಲ್ಲಿ ಆಯೋಜಿಸಿದ್ದ ಪಂಚಕಲ್ಯಾಣ ಮಹೋತ್ಸವ ಐದುದಿನಗಳ ಯಶಸ್ವಿಯಾಗಿ ನಡೆದಿದ್ದು ವಿಶೇಷವಾಗಿತ್ತು. ಪ್ರತಿ ದಿನ ಪೂಜೆ, ಪ್ರವಚನ,ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ರಾಜ್ಯ ಹಾಗೂ ಹೊರರಾಜ್ಯಗಳಿಂದಲು ಜನರು ಇಲ್ಲಿಗೆ ಆಗಮಿಸಿದ್ದರು.
ಗುರುವಿಗೆ ಗುರುವಾದ ಪರಮಪೂಜ್ಯ ಮುನಿಶ್ರೀ 108ಮಹಾನ್ ಸಾಗರರು:
ಅದೊಂದು ಅಪರೂಪದ ಕ್ಷಣ.ಶರಾವತಿ ಹಿನ್ನೀರ ಪ್ರದೇಶದ ಕಳೂರು ಗ್ರಾಮದ ಕಂದ್ರವಳ್ಳಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಭಗವಾನ್ 1008 ಮಹಾವೀರಸ್ವಾಮಿಯ ಜಿನಮಂದಿರದ ಪಂಚಕಲ್ಯಾಣ ಮಹೋತ್ಸವ ಐದು ದಿನಗಳ ಕಾಲ ನಡೆಯಿತು. ಅಂದು ಸಮವಸರಣ ಕಾರ್ಯಕ್ರಮ ವೇದಿಕೆಯಲ್ಲಿ ತೀರ್ಥಂಕರರ ಪ್ರತೀಕವಾಗಿ ದಿವ್ಯ ಧ್ವನಿಯನ್ನು ನೀಡುವ ಸಂದರ್ಭ ಪರಮಪೂಜ್ಯ ಮುನಿಶ್ರೀ 108 ಪಾಯಸಾಗರರು, ಮುನಿಶ್ರೀ 108 ಮಹಾನ್ ಸಾಗರರು, ಮುನಿಶ್ರೀ 108 ಸಮುಕ್ತಸಾಗರರು ಹಾಗೂ ಮುನಿಶ್ರೀ 108 ವಿದಿತಸಾಗರರು ಕುಳಿತಿದ್ದ ಸಮವಸರಣ ಮಹಾಮಂಟಪದಲ್ಲಿ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಶ್ರಾವಕ, ಶ್ರಾವಕಿಯರ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಿದ ಕ್ಷಣದಲ್ಲಿ ವೇದಿಕೆಗೆ ಆಹ್ವಾನಿಸಿದ್ದು ಲೇಖಕ ವಿ.ಟಿ.ಸ್ವಾಮಿ ಇವರನ್ನು ಇವರು ಬರೆದ ಪರಮಪೂಜ್ಯ ಮುನಿಶ್ರೀ 108 ಮಹಾನ್ ಸಾಗರ ಮಹಾರಾಜರ ಜೀವನ ಸಾರ ಧಾರ್ಮಿಕ ಗ್ರಂಥ ಬಿಡುಗಡೆಯ ಸನ್ನಿವೇಶ. ಆ ದಿನಗಳಲ್ಲಿ ಮುನಿಶ್ರೀ ಮಹಾನ್ ಸಾಗರರು ಪೂರ್ವಾಶ್ರಮದ ಮಹಾವೀರರ ಹೆಸರಿನಲ್ಲಿದ್ದರು ಶಾಲೆ ಮೆಟ್ಟಿಲು ಹತ್ತದೆ ಬದುಕಿಗಾಗಿ ಅವರಿವರ ಮನೆಗೆ ಕೆಲಸಕ್ಕೆ ಹೋಗಿ ದುಡಿಯುತ್ತಿದ್ದ ಬಾಲಕನಿಗೆ ಶಿಕ್ಷಣದ ಯೋಗ ದೊರಕಿದ್ದು ಅಕ್ಷರತುಂಗಾ ಯೋಜನೆಯ ಮೂಲಕ ಅಂತಹ ಶಿಕ್ಷಣವನ್ನು ನೀಡಿದ ಗುರು ವಿ.ಟಿ.ಸ್ವಾಮಿ ಹಾಗೂ ಅಂದಿನ ಶಿಷ್ಯರಾಗಿ ಇಂದು ಮುನಿಶ್ರೀಗಳಾದ ಮಹಾನ್ ಸಾಗರರ ಸಮಾಗಮ ನೆರೆದಿದ್ದ ಜನರಲ್ಲಿ ಅದೆಂತಹ ಸಂಭ್ರಮ..!! ಆದರೆ ವಿಚಿತ್ರವೆಂದರೆ ಅಂದು ಪಾಠ ಕಲಿಸಿದ ಗುರುವಿಗೆ ಇಂದು ಧಾರ್ಮಿಕ ಗುರುವಾಗಿದ್ದು ಮುನಿಶ್ರೀ೧೦೮ ಮಹಾನ್ ಸಾಗರರು.
ಆ ಸಂದರ್ಭ ಎಲ್ಲಾರೂ ನಿರಾವ ಮೌನ.. ಹಾಗೂ ಅದೇನಿದು.. ಅಲ್ಲಿಂದಲೇ ನಮಸ್ಕರಿಸಿದ ಕ್ಷಣ..ಎಲ್ಲಾರಲ್ಲೂ ಸಂತಸ ನೂರ್ಮಡಿಸಿತ್ತು.
1991-92 ರ ಅವದಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಎಸ್.ಬಂಗಾರಪ್ಪನವರು ಜಾರಿ ತಂದಿದ್ದ ಅಕ್ಷರ ತುಂಗಾ ಶಾಲೆಯ ಭಾಗ್ಯ ದೊರಕದ ಅನೇಕರಿಗೆ ಶಿಕ್ಷಣ ನೀಡಿದ ಅಪರೂಪದ ಕಾರ್ಯಕ್ರಮ ಇಂತಹ ಯೋಜನೆಯ ಮೂಲಕ ಅಕ್ಷರ ಕಲಿತವರು ಅಂದಿನ ಮಹಾವೀರರು (ಇಂದಿನ ಪರಮಪೂಜ್ಯ ಮುನಿಶ್ರೀ108 ಮಹಾನ್ ಸಾಗರರು) ಅವರಿಗೆ ಅಕ್ಷರತುಂಗಾದ ಮೂಲಕ ಪಾಠಹೇಳಿಕೊಟ್ಟವರು ಅಂದು ಶಿಕ್ಷಕರಾಗಿದ್ದ ವಿ.ಟಿ.ಸ್ವಾಮಿಯವರು. ಮುನಿಶ್ರೀಯವರು ಮುನಿದೀಕ್ಷೆಯನ್ನು ಪಡೆದು ದೇಶದ ಉತ್ತರ ಪ್ರದೇಶಾಧಿಯಾಗಿ ಅನೇಕ ರಾಜ್ಯಗಳಲ್ಲಿ ಇವರು ಸಂಚರಿಸಿ ಧಾರ್ಮಿಕ ಪ್ರವಚಗಳನ್ನು ನೀಡಿದ್ದಾರೆ. ಹಾಗೂ ಅನೇಕ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ. ಒಂದು ಪುಟ್ಟ ಹಳ್ಳಿಯ ಮಹಾವೀರ ಮಹಾನ್ ಸಾಗರರಾಗಿದ್ದು ಸಾಮಾನ್ಯದ ಸಂಗತಿಯೇನಲ್ಲ.
ವೇದಿಕೆಯಲ್ಲಿ ಮಾತನಾಡಲಾಗದೆ ಹಾಗೆ ಕ್ಷಣ ಕಾಲ ಮೌನವಾಗಿ. ಇಂತಹ ಕ್ಷಣ ನನ್ನ ಕನಸು ಮನಸ್ಸಿನಲ್ಲು ಅಂದುಕೊಂಡಿರಲಿಲ್ಲ, ನನ್ನ ಜೀವನ ಸಾರ್ಥಕವಾಯಿತು ಎಂದಾಗ.. ಎಲ್ಲೆಲ್ಲೂ ಜಯಕಾರ.. ಗುರು ಶಿಷ್ಯರ ಸಮಾಗಮ.. ಪಂಚಕಲ್ಯಾಣ ಮಹೋತ್ಸವಕ್ಕೆ ಮೆರಗು ತಂದಿತ್ತು ಹಾಗೂ ಹೊಸ ಸಂದೇಶವನ್ನು ಸಾರಿತ್ತು.
ವರದಿ: ರಾಘವೇಂದ್ರ ತಾಳಗುಪ್ಪ