ಅಂಬೇಡ್ಕರ್ ರವರ ಸ್ಮಾರಕ ಹಾಗೂ ಮ್ಯೂಸಿಯಂ ನಿರ್ಮಾಣ ಮಾಡುವಂತೆ ದಲಿತ ಸಂಘರ್ಷ ಸಮಿತಿಯಿಂದ ಹೋರಾಟದ ಎಚ್ಚರಿಕೆ
(KOLARA): ಬಂಗಾರಪೇಟೆ: ಕೆಜಿಎಫ್ ನಗರಕ್ಕೆ ಡಾ|| ಅಂಬೇಡ್ಕರ್ ಬಂದು ಹೋಗಿದ್ದ ನೆನಪಿಗಾಗಿ ಅವರು ಬಂದಿದ್ದ ಸ್ಥಳದಲ್ಲಿ ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕ ಹಾಗೂ ಮ್ಯೂಸಿಯಂ ನಿರ್ಮಾಣ ಮಾಡಬೇಕೆಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಸೂಲಿಕುಂಟೆ ರಮೇಶ್ ಸರ್ಕಾರವನ್ನು ಒತ್ತಾಯಿಸಿದ್ದಾರೆ ತಪ್ಪಿದರೆ ರಾಜ್ಯಾಧ್ಯಂತ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 1956ರಲ್ಲಿ ಫೆಬ್ರವರಿ 23ರಂದು ಅಂಬೇಡ್ಕರ್ ರವರು ಕೆಜಿಎಫ್‌ನ ಗಣಿ ಪ್ರದೇಶಕ್ಕೆ ಬಂದಿದ್ದರು,ಅದರ ಸಲುವಾಗಿ ಅವರು ಬಂದಿದ್ದ ಜಾಗವನ್ನು ಸ್ಮಾರಕ ಹಾಗೂ ಮ್ಯೂಸಿಂಯ ನಿರ್ಮಾಣ ಮಾಡಬೇಕೆಂಬ ಸಂಘದ ಒತ್ತಾಯದ ಮೇರೆಗೆ 2022ರಲ್ಲಿ ಸರ್ವೆ ನಂ.2ರಲ್ಲಿ 5ಎಕರೆ ಜಮೀನನ್ನು ಮೀಸಲಿಟ್ಟಿದ್ದರು ಹಾಗೂ ಬಜೆಟ್‌ನಲ್ಲಿ ಸಹ 2ಕೋಟಿ ಹಣ ಮೀಸಲಿಟ್ಟು 1.55ಕೋಟಿ ಹಣ ಸಹ ಲೋಕೋಪಯೋಗಿ ಇಲಾಖೆಗೆ ಬಿಡುಗಡೆ ಮಾಡಿದ್ದರು.ಆದರೆ ಅದೇ ವರ್ಷ ಮತ್ತೆ ಸರ್ಕಾರ ನೀಡಿದ್ದ 5ಎಕರೆ ಜಾಗವನ್ನು ರದ್ದುಪಡಿಸಿದೆ.ಜಿಲ್ಲಾಧಿಕಾರಿ ಅಕ್ರಮಪಾಷ ರವರು 17.1.2024ರಲ್ಲಿ ಕೆಜಿಎಫ್ ನಗರಸಭೆಗೆ ಪತ್ರ ಬರೆದು ಅಂಬೇಡ್ಕರ್ ಸ್ಮಾರಕ ಹಾಗೂ ಮ್ಯೂಸಿಯಂ ನಿರ್ಮಾಣಕ್ಕೆ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಮನೆ ನಿರ್ಮಾಣಕ್ಕೆ ಮೀಸಲಿಟ್ಟಿದ್ದ ಜಾಗವನ್ನು ರದ್ದುಗೊಳಿಸಿ ಆ ಜಾಗವನ್ನು ಕೈಗಾರಿಕಾ ಪ್ರದೇಶಕ್ಕೆ ಮೀಸಲಿಡಲಾಗಿದೆ ಎಂದು ಪತ್ರದಲ್ಲಿ ತಿಳಿಸಿರುವುದನ್ನು ತೀವ್ರವಾಗಿ ಖಂಡಿಸಿದರು.
ಅoಬೇಡ್ಕರ್ ಕೆಜಿಎಫ್‌ಗೆ ಬಂದು ಹೋಗಿ 74ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಅಲ್ಲಿ ಸ್ಮಾರಕ ಹಾಗೂ ಮ್ಯೂಸಿಯಂ ನಿರ್ಮಾಣಕ್ಕೆ ದಲಿತ ಸಂಘಟನೆಗಳು ಹೋರಾಟ ಮಾಡಿ ಪಡೆದ ಜಾಗವನ್ನು ಸರ್ಕಾರ ಕೈಗಾರಿಕೆಗೆ ಮೀಸಲಿಟ್ಟಿರುವುದು ಯಾವ ನ್ಯಾಯ, ಸರ್ಕಾರ ನಮ್ಮದು ದಲಿತ ಪರ ಸರ್ಕಾರ ಸಂವಿಧಾನವನ್ನು ನಾವು ಗೌರವಿಸುವೆವು ಎಂದು ಬಾಯಲ್ಲಿ ಹೇಳು ಮುಖ್ಯಮಂತ್ರಿ ಸಿದ್ದರಾಮಯ್ಯ ಯಾಕೆ ಅಂಬೇಡ್ಕರ್ ಸ್ಮಾರಕ ನಿರ್ಮಾಣಕ್ಕೆ ಮೀಸಲಿಟ್ಟಿದ್ದ ಜಾಗವನ್ನು ರದ್ದು ಮಾಡಲಾಗಿದೆ, ಕೈಗಾರಿಕಾ ಪ್ರದೇಶಲ್ಲಿ ಅಂಬೇಡ್ಕರ್ ಸ್ಮಾರಕ ವಿರಬಾರದೆ ಎಂದು ಪ್ರಶ್ನಿಸಿದರು.ಅಲ್ಲದೆ ಸ್ಮಾರಕ ನಿರ್ಮಣಕ್ಕೆ ಕನಿಷ್ಟ ಪಕ್ಷ ಪರ್ಯಾಯ ಸ್ಥಳವನ್ನೂ ತೋರಿಸದೆ ಕಡೆಗಣಿಸಿದೆ. ಸರ್ಕಾರ ಹಾಗೂ ಜಿಲ್ಲಾಡಳಿತ ದಲಿತ ವಿರೋಧಿತನ ಅನುಸರಿಸುತ್ತಿದೆ ಎಂದು ಆರೋಪಿಸಿ ಇದೇ ತಿಂಗಳು 23ರಂದು ಅಂಬೇಡ್ಕರ್ ಕೆಜಿಎಫ್‌ಗೆ ಬಂದು ಹೋಗಿದ್ದ ದಿನವಾಗಿದೆ,ಅಂದು ಅದೇ ಜಾಗದಲ್ಲಿ ಸ್ಮಾರಕ ನಿರ್ಮಾಣಕ್ಕೆ ಪೂಜೆ ಸಲ್ಲಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಗೋಷ್ಟಿಯಲ್ಲಿ ಸಂಘದ ರಾಜ್ಯ ಸಂಘಟನಾ ಸಂಚಾಲಕ ರಾಮಚಂದ್ರಪ್ಪ, ಗೋವಿದoಪ್ಪ, ಶಿವಕುಮಾರ್ ಮತ್ತಿತರರು ಸಹ ಇದ್ದರು.