ಮಾರಿಕಾಂಬಾದೇವಿ ಮತ್ತು ದುರ್ಗಾಂಬಾ ದೇವಿಯ ನೂತನ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮ.
(SHIVAMOGA): ಸಾಗರ- ತಾಲೂಕಿನ ತ್ಯಾಗರ್ತಿ ಭಾಗದ ಸಾವಿರಾರು ಭಕ್ತರ ಶ್ರದ್ಧಾ ಕೇಂದ್ರವಾಗಿರುವ ಶ್ರೀ ಮಾರಿಕಾಂಬಾದೇವಿ ಮತ್ತು ಶ್ರೀ ದುರ್ಗಾಂಬಾ ದೇವಿಯ ನೂತನ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮ ಡಿ. 24, 25 ಮತ್ತು 26ರಂದು ನಡೆಯಲಿದೆ. ಸುಮಾರು 475 ವರ್ಷದ ಇತಿಹಾಸ ಹೊಂದಿರುವ ದೇವಾಲಯದ ಹಳೆಯ ಕಟ್ಟಡವನ್ನು ತೆರವುಗೊಳಿಸಿ ಪುನರ್‌ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕೆಂಬ ಭಕ್ತಾದಿಗಳ ಅಪೇಕ್ಷೆ ಈಡೇರಿದೆ. ಸುಮಾರು 1.50 ಕೋಟಿ ರೂಪಾಯಿಗಳಷ್ಟು ವೆಚ್ಚದಲ್ಲಿ ಭವ್ಯವಾದ ಮಂದಿರವನ್ನು ನಿರ್ಮಾಣ ಮಾಡಲಾಗಿದ್ದು, ಆಗಮ ಶಾಸ್ತ್ರದಂತೆ ಬಹಳಷ್ಟು ಪ್ರಾಚೀನ ದೇವಾಲಯಗಳನ್ನು ಪುನರ್‌ನಿರ್ಮಾಣ ಮಾಡಿದ ಅನುಭವ ಹೊಂದಿದ ನುರಿತ ತಜ್ನರ ಮಾರ್ಗದರ್ಶನ ಹಾಗೂ ಸಲಹೆಯಂತೆ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.
ವರದಪುರದ ಶ್ರೀ ಶ್ರೀಧರಸ್ವಾಮಿಗಳ ಕೃಪಾಶೀರ್ವಾದದೊಂದಿಗೆ, ಧರ್ಮಸ್ಥಳ ಕ್ಷೇತ್ರದ ಧರ್ಮದರ್ಶಿ ವೀರೇಂದ್ರ ಹೆಗ್ಗಡೆಯವರು, ಹೊರನಾಡು ಕ್ಷೇತ್ರದ ಭೀಮೇಶ್ವರ ಜೋಷಿಯವರ ಆಶೀರ್ವಾದದೊಂದಿಗೆ, ಶ್ರೀ ಮಂಜುಗುಣಿ ಕ್ಷೇತ್ರದ ಶ್ರೀನಿವಾಸ ಭಟ್ಟರ ಪರಿಕಲ್ಪನೆ ಹಾಗೂ ಸಲಹೆಯ ಮೇರೆಗೆ ದೇವರ ನೂತನ ವಿಗ್ರಹಗಳ ಪ್ರತಿಷ್ಟಾಪನೆ ಕಾರ್ಯಕ್ರಮ ರೂಪಿಸಲಾಗಿದೆ. ಈ ಶುಭ ದಿನದಂದು ಲೋಕಾರ್ಪಣೆಗೊಳ್ಳಲಿರುವ ನೂತನ ಭವ್ಯ ಮಂದಿರಗಳ ಗರ್ಭಗುಡಿಯಲ್ಲಿ ಮಾರಿಕಾಂಬಾ, ದುರ್ಗಾಂಬಾ ಹಾಗೂ ಪರಿವಾರ ದೇವತೆಗಳ ನೂತನ ವಿಗ್ರಹ ಪ್ರತಿಷ್ಟಾಪನಾ ಕಾರ್ಯಕ್ರಮವು ನೆರವೇರಲಿದೆ. ದೇವಾಲಯ ಲೋಕಾರ್ಪಣಾ ಕಾರ್ಯಕ್ರಮದ ಪೂರ್ವಭಾವಿಯಾಗಿ ಹೋಮ, ಯಜ್ನ, ಯಾಗಾದಿಗಳನ್ನೂ ಒಳಗೊಂಡಂತೆ, ಅನೇಕ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ.
ಡಿ.24, ಮಂಗಳವಾರದಂದು ಗಣಪತಿ ಪೂಜಾ ಕಾರ್ಯಕ್ರಮದೊಂದಿಗೆ ಕಾರ್ಯಕ್ರಮ ಆರಂಭಗೊ೦ಡು ದೇವಾಲಯದ ಲೋಕಾರ್ಪಣಾ ಸಮಾರಂಭ, ಪುಣ್ಯಾಹವಾಚನೆ, ಮಾತೃಕಾಪೂಜನ, ಮಹಾಸಂಕಲ್ಪ, ಸಪ್ತಶುದ್ಧಿ, ರಾಕ್ಷೋಘ್ನ ಹವನ, ಪಂಚಗವ್ಯಹೋಮ ಇತ್ಯಾದಿ ಧಾರ್ಮಿಕ ಕಾರ್ಯಗಳು ನಡೆಯಲಿದೆ, ಸಂಜೆ ಕುಂದಾಪುರದ ಸಾಂತಾವರ ಶ್ರೀವೀರಾಂಜನೇಯ ಭಜನಾ ಮಂಡಳಿಯವರಿಂದ “ಕುಣಿತ ಭಜನಾ ಕಾರ್ಯಕ್ರಮ” ಆಯೋಜಿಸಲಾಗಿದೆ.
ಡಿ.25, ಬುಧವಾರದಂದು ಮಾರಿಕಾಂಬಾ, ದುರ್ಗಾಂಬಾ ಹಾಗೂ ಪರಿವಾರ ದೇವತೆಗಳ ನೂತನ ವಿಗ್ರಹ ಪ್ರತಿಷ್ಟಾಪನಾ ಕಾರ್ಯಕ್ರಮ, ಬ್ರಹ್ಮಕಲಶ ಮಹೋತ್ಸವ, ಪ್ರಾಣಪತಿಷ್ಟೆ, ಪ್ರಸಾದ ವಿತರಣೆ ಹಾಗೂ ವೇದಿಕೆ ಕಾರ್ಯಕ್ರಮ ನಡೆಯಲಿದೆ. ತ್ಯಾಗರ್ತಿ ಸತ್ಯಪೀಠದ ಶ್ರೀಮದ್ ಪರಮಹಂಸ ಶ್ರೀಧರ ಭಾರತೀರ್ಥ ಸ್ವಾಮಿಗಳು ಶಿಖರ ಕಲಶಾರೋಹಣ ಮತ್ತು ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀಭೀಮೇಶ್ವರ ಜೋಷಿಯವರು, ಮಾರಿಕಾಂಬಾ ದೇವಿಯ ವಿಗ್ರಹ ಪ್ರತಿಷ್ಟಾಪನಾ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ. ಮಧ್ಯಾಹ್ನ ಧರ್ಮಸಭೆ ನಡೆಯಲಿದ್ದು, ಕರ್ನಾಟಕ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು, ಸಿಗಂಧೂರು ಧರ್ಮದರ್ಶಿ ಡಾ.ರಾಮಪ್ಪ, ಶಿರಸಿ ಶಾಸಕ ಭೀಮಣ್ಣ ನಾಯ್ಕ, ಎಂಎಡಿಬಿ ಅಧ್ಯಕ್ಷ ಮಂಜುನಾಥ ಗೌಡ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಸಂಜೆ ಪ್ರಾಯಶ್ಚಿತ್ತ ಶಾಂತಿ ಹೋಮಗಳು, ಉತ್ಸವ ಹಾಗೂ ರಾಜೋಪಚಾರ ಪೂಜೆಗಳು, ರಾತ್ರಿ ಯಕ್ಷಗಾನ ಒಳಗೊಂಡಂತೆ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದೆ.
ಡಿ.26 ಗುರುವಾರದಂದು ಕಲಾಭಿವೃದ್ಧಿಹೋಮ, ನವಚಂಡಿಹೋಮ, ಪೂರ್ಣಾಹುತಿ, ಮಹಾಮಂಗಳಾರತಿ, ದೇವಿಗೆ ಉಡಿತುಂಬುವ ಕಾರ್ಯಕ್ರಮ, ಸಾರ್ವಜನಿಕ ಪ್ರಸಾದ, ಅನ್ನಸಂತರ್ಪಣೆ ಹಾಗೂ ವೇದಿಕೆ ಕಾರ್ಯಕ್ರಮ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ವೀರಾಪುರ ಹಿರೇಮಠದ ಶ್ರೀ ಮರಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ದಿವ್ಯಸಾನಿಧ್ಯ ವಹಿಸಲಿದ್ದು, ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ ರಾಘವೇಂದ್ರ, ಶಾಸಕ ಬೇಳೂರು ಗೋಪಾಲಕೃಷ್ಣ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಹರತಾಳು ಹಾಲಪ್ಪ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ಶ್ರೀ ಮಾರಿಕಾಂಬಾ ಮತ್ತು ದುರ್ಗಾಂಬಾ ದೇವಿಯ ದೇವಾಲಯದ ಸಮಿತಿ ಅಧ್ಯಕ್ಷ ಕೆ.ಬಿ ಗಣಪತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ವರದಿ: ರಾಘವೇಂದ್ರ ತಾಳಗುಪ್ಪ