ನ್ಯೂಸ್ಶಿವಮೊಗ್ಗ

ಪ್ರತಿ ಮನೆಯಲ್ಲೂ ಗ್ರಂಥಾಲಯ ಇರಬೇಕು. ಅದು ಜೀವದ, ಹಾಗೂ ನಮ್ಮ ಸಂಸ್ಕೃತಿಯ ಲಕ್ಷಣ

ಪ್ರತಿ ಮನೆಯಲ್ಲೂ ಗ್ರಂಥಾಲಯ ಇರಬೇಕು. ಅದು ಜೀವದ, ಹಾಗೂ ನಮ್ಮ ಸಂಸ್ಕೃತಿಯ ಲಕ್ಷಣ

 

(SHIVAMOGA): ಸಾಗರ – ಪ್ರತಿ ಮನೆಯಲ್ಲೂ ಗ್ರಂಥಾಲಯ ಇರಬೇಕು. ಅದು ಜೀವದ, ಹಾಗೂ ನಮ್ಮ ಸಂಸ್ಕೃತಿಯ ಲಕ್ಷಣ ಎಂದು ಕಲಾವಿದ ಅರುಣ ಬೆಂಕಟವಳ್ಳಿ ಅಭಿಪ್ರಾಯಪಟ್ಟರು.

ಸಾಗರ ತಾಲೂಕಿನ ಅಮಟೆಕೊಪ್ಪದ ಹೊಂಗಿರಣ ಸ್ಕೂಲ್ ಆಫ್ ಎಕ್ಸಲೆನ್ಸ್ನಲ್ಲಿ ಆಯೋಜಿಸಲಾಗಿದ್ದ ಪುಸ್ತಕ ಸಪ್ತಾಹದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ. ಅಂತೆಯೇ ಓದುವುದಕ್ಕೆ ಶ್ರಮ ವಿನಿಯೋಗಿಸಿದರೆ, ಅದರ ಪ್ರತಿಫಲ ಖಂಡಿತವಾಗಿಯೂ ದೊರೆಯುತ್ತದೆ. ಓದುವಿಕೆಯಿಂದ ನಮಗೆ ಜ್ಞಾನ ಲಭಿಸುವುದಲ್ಲದೆ ಬದುಕಿಗೆ ಬೇಕಾದ ಪ್ರೇರೇಪಣೆ ದೊರೆಯುತ್ತದೆ. ಇದರಿಂದಾಗಿ ಜೀವನದಲ್ಲಿ ಉನ್ನತ ಸ್ಥಾನಕ್ಕೇರಬಹುದು. ತಾಳೆಗರಿಯಲ್ಲಿ ಬರೆಯುವ ಮೂಲಕ ಸಾಹಿತ್ಯ, ಜ್ಞಾನ ಸಂರಕ್ಷಿಸುವ ಕಾರ್ಯ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಅದೇ ರೀತಿಯಲ್ಲಿ ಪುಸ್ತಕ ಗಳನ್ನು ಓದುವುದರ ಜತೆಗೆ ಅವುಗಳನ್ನು ಸೂಕ್ತ ರೀತಿಯಲ್ಲಿ ರಕ್ಷಿಸುವ ಕಾರ್ಯವೂ ನಮ್ಮಿಂದಾಗಬೇಕು ಎಂದು ಹೇಳಿದರು.

ಹೊಸನಗರ ತಾಲೂಕಿನ ಬಿಲ್ಪತ್ರೆ ಶಾಲೆಯ ಶಿಕ್ಷಕರು ಹಾಗೂ ಸಂಪನ್ಮೂಲ ವ್ಯಕ್ತಿ ಬಿ.ಟಿ. ಪ್ರಸನ್ನ ಕುಮಾರ್ ಮಾತನಾಡಿ, ಇಂದು ಬೆರಳಿನ ತುದಿಯಲ್ಲಿ ಎಲ್ಲವೂ ಸಿಗುವಂತಹ ತಂತ್ರಜ್ಞಾನವಿದೆ. ಆದರೆ ಅದಕ್ಕಿಂತಲೂ ನಮ್ಮನ್ನು ಉನ್ನತಿಗೇರಿಸುವ ಶಕ್ತಿ ಪುಸ್ತಕಗಳಿಗಿದೆ. ಪುಸ್ತಕದ ಬಗ್ಗೆ ಸಹಜ ಪ್ರೀತಿ ಹೊಂದಿರುವ ಹೊಂಗಿರಣವು ಪುಸ್ತಕ ಸಪ್ತಾಹವನ್ನು ಅರ್ಥಪೂರ್ಣವಾಗಿ ಆಚರಿಸುತ್ತಾ, ವಿದ್ಯಾರ್ಥಿಗಳಲ್ಲಿ ಓದಿನ ಆಸಕ್ತಿಮೂಡಿಸುವ ಪ್ರಯತ್ನ ಮಾಡುತ್ತಿರುವುದು ಅಭಿನಂದನಾರ್ಹ ಎಂದರು.

ಉಪನ್ಯಾಸಕಿ ಅಂಬಿಕಾ ಪೈ ಹಾಗೂ ಪ್ರಾಸ್ತಾವಿಕವಾಗಿ ಗ್ರಂಥಪಾಲಕಿ ಶಿಲ್ಪಾ ಮಾತನಾಡಿದರು. ಪ್ರೌಢಶಾಲಾ ವಿದ್ಯಾರ್ಥಿಗಳು ‘ಮೊಲಗಳು ಮತ್ತು ಕಪ್ಪೆಗಳು’ ಎಂಬ ಕಥೆಯನ್ನು ಕಥಾಭಿನಯದ ಮೂಲಕ ಪ್ರಸ್ತುತಪಡಿಸಿದರು. ಪುಸ್ತಕ ಸಪ್ತಾಹದ ಅಂಗವಾಗಿ ನಡೆದ ಕಥೆ ಹೇಳುವುದು, ಕಥಾ ರಚನೆ, ಕಥಾಭಿನಯ, ಜ್ಞಾಪಕ ಶಕ್ತಿ, ಭಾಷಣ, ಚರ್ಚಾಸ್ಪರ್ಧೆ, ಪ್ರಬಂಧ ರಚನೆ ಮೊದಲಾದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪ್ರಾಚಾರ್ಯರಾದ ಕೆ. ಶೋಭಾ, ಉಪಪ್ರಾಚಾರ್ಯ ಅರವಿಂದ್ ಗುರ್ಜರ್, ಪಿಯು ಕಾಲೇಜಿನ ಪ್ರಾಚಾರ್ಯ ವಿ. ರೋಹಿತ್, ಎಲ್ಲ ವಿಭಾಗದ ಮುಖ್ಯಸ್ಥರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಭೂಮಿಕಾ ಸ್ವಾಗತಿಸಿದರು, ಅಭಿರಾಮ್ ವಂದಿಸಿದರು. ಪ್ರತೀಕ್ಷಾ ನಿರೂಪಿಸಿದರು.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code