ನಾಡು, ನುಡಿ, ಸಂಸ್ಕøತಿ, ಪರಂಪರೆಯ ರಕ್ಷಣೆಯಲ್ಲಿ ಪ್ರತಿಯೊಬ್ಬರೂ ಕಟಿಬದ್ಧರಾಗಿರಬೇಕು.
(SHIVAMOGA): ಶಾಸ್ತ್ರೀಯ ಭಾಷಾ ಸ್ಥಾನಮಾನ ಪಡೆದ ಕನ್ನಡಕ್ಕೆ ಭಾಷೆಗಳ ರಾಣಿ ಎಂದು ಕರೆಯಲಾಗುತ್ತಿದ್ದು, ನಾಡು, ನುಡಿ, ಸಂಸ್ಕøತಿ, ಪರಂಪರೆಯ ರಕ್ಷಣೆಯಲ್ಲಿ ಪ್ರತಿಯೊಬ್ಬರೂ ಕಟಿಬದ್ಧರಾಗಿರಬೇಕು ಎಂದು ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಸಮಾಜ ಸೇವಕ ಡಾ. ಎಚ್.ಇ. ಜ್ಞಾನೇಶ್ ಹೇಳಿದರು.
ಶನಿವಾರ ಪಟ್ಟಣದ ಸೊಪ್ಪಿನಕೇರಿ ಬಡಾವಣೆಯಲ್ಲಿ ಶ್ರೀ ದುರ್ಗಾಂಬ ಕನ್ನಡ ರಾಜ್ಯೋತ್ಸವ ಸಮಿತಿಯಿಂದ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಹಾಗೂ ಶಾಶ್ವತ ಕನ್ನಡ ಧ್ವಜಸ್ತಂಭ ಸ್ಥಾಪನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅತ್ಯಂತ ಸುಂದರವಾದ ಲಿಪಿ ಹೊಂದಿರುವ ಕನ್ನಡ ಕೇವಲ ಭಾಷೆಯಾಗಿರದೇ ಪ್ರತಿಯೊಬ್ಬ ಕನ್ನಡಿಗನ ಉಸಿರಾಗಿದೆ. ವೈಶಿಷ್ಟವಾದ ಹಾಗೂ ವೈಜ್ಞಾನಿಕವಾದ ಭಾಷೆ ಕನ್ನಡವಾಗಿದೆ ಎಂಬುದನ್ನು ಜಗತ್ತಿನಲ್ಲಿ ಬಹುತೇಕರು ಒಪ್ಪಿಕೊಂಡಿದ್ದಾರೆ. ಕಾಲಘಟ್ಟಕ್ಕೆ ತಕ್ಕಂತೆ ಲಿಪಿಗಳು ಬೆಳೆವಣಿಗೆ ಹೊಂದುವ ಮೂಲಕ ಸ್ಪಷ್ಟವಾದ ಭಾಷಾ ಲಿಪಿಯಾಗಿ ಕನ್ನಡ ರೂಪುಗೊಂಡಿದೆ. ಇದನ್ನು ಕನ್ನಡದ ಮೊದಲ ಶಾಸನ ಎಂದು ಕರೆಸಿಕೊಳ್ಳುವ ಹಲ್ಮಿಡಿ ಶಾಸನದಿಂದ ಆರಂಭಗೊಂಡು ಪ್ರಸ್ತುತ ಬಳಕೆಯಲ್ಲಿರುವ ಲಿಪಿಯ ಮೂಲಕ ಅಧ್ಯಯನ ಮಾಡಿದರೆ ಅರಿವಿಗೆ ಬರುತ್ತದೆ ಎಂದರು.
ಕನ್ನಡ ಕಟ್ಟುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು. ವ್ಯವಹಾರಿಕವಾಗಿ ಕನ್ನಡ ಬಳಕೆ ಮಾಡುವ ಮೂಲಕ ಭಾಷಾ ಶ್ರೀಮಂತಿಯನ್ನು ಎತ್ತಿ ಹಿಡಿಯುವ ಕೆಲಸವಾಗಬೇಕು. ಪಟ್ಟಣದಲ್ಲಿ ಕನ್ನಡದ ಮನಸ್ಸುಗಳು ಒಗ್ಗೂಡಿ ಶಾಶ್ವತ ಕನ್ನಡ ಧ್ವಜಸ್ತಂಭ ಸ್ಥಾಪನೆ ಮಾಡಿರುವುದು ಸ್ವಾಗತಾರ್ಹ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವಂತಾಗಬೇಕು. ಅಂತಹ ಕಾರ್ಯಕ್ರಮಗಳಿಗೆ ಸದಾ ಸಹಕಾರ ನೀಡುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಕಿರಣ್, ನಾಗರಾಜ, ಪ್ರೇಮ ಕುಮಾರ್ ಹಾಗೂ ಕೆ.ಟಿ. ಮಂಜುನಾಥ ತುರುವೆಕೆರೆ ಅವರನ್ನು ಸನ್ಮಾನಿಸಲಾಯಿತು. ಕನ್ನಡ ಧ್ವಜಸ್ತಂಭದ ಉದ್ಘಾಟನೆ ಮತ್ತು ನಾಡ ಧ್ವಜಾರೋಹಣವನ್ನು ಜಡೆ ಹಿರೇಮಠ ಹಾಗೂ ಸೊರಬ ಕಾನುಕೇರಿ ಮಠದ ಘನಬಸವ ಅಮರೇಶ್ವರ ಸ್ವಾಮೀಜಿ ನೆರವೇರಿಸಿದರು.
ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ನಾಗರಾಜ ಗುತ್ತಿ, ವಿದ್ಯುತ್ ಗುತ್ತಿಗೆದಾರ ಕೆ. ಪಾಂಡುರಂಗ, ಪುರಸಭೆ ಸದಸ್ಯ ಡಿ.ಎಸ್. ಪ್ರಸನ್ನಕುಮಾರ್ ದೊಡ್ಮನೆ, ಮಾಜಿ ಸದಸ್ಯ ಶ್ರೀಕಾಂತ್ ಶೇಟ್, ಪಪಂ ಮಾಜಿ ಅಧ್ಯಕ್ಷ ಪ್ರಶಾಂತ್ ಮೇಸ್ತ್ರಿ, ಕಸಾಪ ತಾಲೂಕು ಅಧ್ಯಕ್ಷ ಎನ್. ಷಣ್ಮುಖಾಚಾರ್, ಶ್ರೀ ದುರ್ಗಾಂಬ ದೇವಸ್ಥಾನ ಸಮಿತಿಯ ಗೌರವಾಧ್ಯಕ್ಷ ಆರ್. ಕೃಷ್ಣಮೂರ್ತಿ, ಅಧ್ಯಕ್ಷ ಡಿ. ಮಹಾಬಲಪ್ಪ, ಹಿರಿಯರಾದ ಡಿ. ಪರಸಪ್ಪ, ಶ್ರೀ ದುರ್ಗಾಂಬ ಕನ್ನಡ ರಾಜ್ಯೊತ್ಸವ ಆಚರಣ ಸಮಿತಿಯ ಪ್ರಮುಖರಾದ ಕುಮಾರ್ ಮಂಚಿ, ರಮೇಶ್, ಸಂತೋಷ್ ಸೊಪ್ಪಿನಕೇರಿ, ಕೆ. ರಾಜು, ಪಿ. ಸುರೇಶ್, ಜಿ. ಗಣೇಶ್, ಕೆ. ಮಹಾಬಲೇಶ್ ಸೇರಿದಂತೆ ಮತ್ತಿತರರಿದ್ದರು.
ವರದಿ: ಮಧು ರಾಮ್ ಸೊರಬ