ಆನೆ ಹಾವಳಿಯಿಂದ ಅರಣ್ಯ ಇಲಾಖೆಗೆ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ
(CHIKKAMAGALURU): ಪ್ರತಿವರ್ಷವೂ ಆನೆಗಳು ನಾಡಿಗೆ ಬರುವುದನ್ನು ನಿಯಂತ್ರಿಸಬೇಕು ಆನೆ ಹಾವಳಿಯಿಂದಾಗಿರುವ ನಷ್ಟ ಭರಿಸಬೇಕು ಎಂದು ರೈತ ಸಂಘದ ನೇತ್ರತ್ವದಲ್ಲಿ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ತಾಲೂಕಿನ ಸುತ್ತಮುತ್ತಲ ಹಳ್ಳಿಗಳ ನೂರಾರು ರೈತರು ಹನುಮಂತಪ್ಪ ವೃತ್ತದ ಬಳಿ ಜಮಾಯಿಸಿ ಆಜಾದ್ ವೃತ್ತದ ತನಕ ಮೆರವಣಿಗೆ ನಡೆಸಿ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗುರುಶಾಂತಪ್ಪ ಮಾತನಾಡಿ,ಮಾನವ ಜೀವನ ಮತ್ತು ಬೆಳೆಹಾನಿ ಉಂಟಾಗುತ್ತಿದೆ. ಆನೆಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ವೈದ್ಯನಿಕ ಕ್ರಮಕೈಗೊಂಡಿಲ್ಲ ಎಂದರು. ಸಂಘದ ತಾಲ್ಲೂಕು ಘಟ್ಟದ ಅಧ್ಯಕ್ಷ ಸುನಿಲ್ ಕುಮಾರ್ ಅರಣ್ಯ ಅಧಿಕಾರಿಗಳಿಗೆ ಕಾಡಾನೆಗಳನ್ನು ಹಿಡಿದು ಓಡಿಸಲು ಏಕೆ ಸಾಧ್ಯವಾಗುತಿಲ್ಲ ಎಂದು ಪ್ರಶ್ನಿಸಿದರು. ಈಗ ಸಾಂಕೇತಿಕ ಪ್ರತಿಭಟನೆ ನಡೆಸಲಾಗಿದೆ. ಆನೆಗಳನ್ನು ಸ್ಥಳಾoತರಿಸದಿದ್ದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ನಂತರ ಎಐಟಿ ವೃತದಲ್ಲಿರುವ ಅರಣ್ಯ ಇಲಾಖೆ ಕಚೇರಿಗೆ ತೆರಳಿ ಆಕ್ರೋಶ ವ್ಯಕ್ತಪಡಿಸಿದರು. ರೈತರನ್ನು ಒಳನುಗ್ಗದಂತೆ ಪೊಲೀಸರು ತಡೆದರು. ರೈತರು ಮನವಿ ಮಾಡಿದ ಬಳಿಕ ಪೊಲೀಸರು ಗೇಟ್ ತೆಗೆದರು. ಸ್ಥಳಕ್ಕೆ ಬಂದ ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು ರೈತರ ಸಮಸ್ಯೆ ಆಲಿಸಿದರು.
ರೈತರ ಸಮಸ್ಯೆ ನಮಗೆ ಅರ್ಥವಾಗಿದೆ. ಆನೆಗಳನ್ನು ಕಾಡಿನ ಕಡೆಗೆ ಓಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು ತಿಳಿಸಿದರು.ಹಾಸನ ಜಿಲ್ಲೆಯಿಂದ ಬಂದ ಆನೆಗಳು ಇಲ್ಲಿ ಬೆಳೆ ಹಾನಿ ಮಾಡುತ್ತಿವೆ. ಸದ್ಯ ಅಲ್ಲಿಂದ ಅರಣ್ಯದ ಕಡೆಗೆ ಆನೆಗಳು ತೆರಳಿದ್ದು ಅವುಗಳನ್ನು ಸಾರಗೋಡು ಅಥವಾ ಮುತೋಡಿ ಅರಣ್ಯದ ಕಡೆಗೆ ಕಳುಹಿಸುವ ಪ್ರಯತ್ನನಿಸಲಾಗುತ್ತಿದೆ ಎಂದು ಹೇಳಿದರು. 90 ರೈತರ ಜಮೀನಿನಲ್ಲಿ ಬೆಳೆಹಾನಿ ಆಗಿರುವ ಬಗ್ಗೆ ಈಗಾಗಲೇ ಮಾಹಿತಿ ಸಂಗ್ರಹಿಸಲಾಗಿದೆ. ವೈಜ್ಞಾನಿಕ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಪರಿಹಾರದ ಮೊತ್ತ ಹೆಚ್ಚಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ತೀರ್ಮಾನ ಆಗಬೇಕಿದೆ ತಮ್ಮ ಮನವಿಯನ್ನು ಮೇಲಾಧಿಕಾರಿಗಳಿಗೆ ಕಳುಹಿಸಲಾಗುವುದು ಎಂದಿದ್ದಾರೆ.