ಶ್ರೀಮಂತ ಮಹಿಳೆಯ ಹೈಬ್ರಿಡ್ ನಾಯಿಗೆ ಬುದ್ಧಿ ಕಲಿಸಿದ ಪಶು ವೈದ್ಯರು
ಶ್ರೀಮಂತ ಮಹಿಳೆಯೊಬ್ಬಳು ಪಶುವೈದ್ಯರ ಬಳಿಗೆ ಬಂದಳು, ಆಕೆಯೊಂದಿಗೆ ಒಂದು ಹೈಬ್ರಿಡ್ ನಾಯಿ ಇತ್ತು.
ಆಕೆ ಹೇಳತೊಡಗಿದಳು…. ಈ ನಾಯಿಯನ್ನು ನಾನು ತುಂಬಾ ತುಂಬಾ ಹಚ್ಚಿಕೊಂಡಿದ್ದೇನೆ. ಇತ್ತೀಚಿಗೆ ಇದು ವಿಚಿತ್ರವಾಗಿ ಆಡುತ್ತಿದೆ, ನನ್ನ ಬಳಿ ತುಂಬಾ ಅವಿಧೇಯವಾಗಿದೆ, ನಾನು ಹತ್ತಿರ ಕರೆದರೆ ಅದು ಓಡಿಹೋಗುತ್ತದೆ. ಅದು ನನ್ನ ಬಗ್ಗೆ ತೋರುವ ಅಸಡ್ಡೆಯನ್ನು ನಾನು ಸಹಿಸಲಾರೆ. ದಯವಿಟ್ಟು ಏನಾದರೂ ಮಾಡೀ…. ಎಂದಳು.
ಆ ಪಶುವೈದ್ಯರು ನಾಯಿಯನ್ನು ಹತ್ತಿರದಿಂದ ನೋಡಿದರು, ಹದಿನೈದು ನಿಮಿಷಗಳ ಕಾಲ ನಾನಾ ರೀತಿಯಲ್ಲಿ ಪರೀಕ್ಷಿಸಿದ ಅನಂತರ ಹೇಳಿದರು ,
ಈ ನಾಯಿಯನ್ನು ಈ ಒಂದು ರಾತ್ರಿ ನನ್ನೊಂದಿಗೆ ಬಿಡಿ. ನಾನು ಅದನ್ನು ಚನ್ನಾಗಿ ಗಮನಿಸಿ ಪರೀಕ್ಷಿಸಿ ಚಿಕಿತ್ಸೆ ನೀಡುತ್ತೇನೆ ಎಂದರು. ಅದಕ್ಕೆ ಆ ಮಹಿಳೆ ಒಪ್ಪಿಕೊಂಡಳು.
ಆಕೆ ತೆರಳಿದ ಅನಂತರ ಆ ಪಶುವೈದ್ಯರು ತಮ್ಮ ಸಹಾಯಕರನ್ನು ಕೂಗಿದರು, ಆ ನಾಯಿಯನ್ನು ಅಲ್ಲಿರುವ ಎಮ್ಮೆಗಳೊಂದಿಗೆ ಕಟ್ಟಿ, ಪ್ರತಿ ಅರ್ಧ ಗಂಟೆಗೊಮ್ಮೆ ನೀರನ್ನು ಮಾತ್ರ ಕೊಡಿ, ಬೇರೇ ಯಾವುದೇ ಆಹಾರ ನೀಡಬೇಡಿ ಮತ್ತು ಆಗಾಗ್ಗೆ ಚರ್ಮದ ಬಾರುಕೋಲಿನಿಂದ ಬಿಡದೇ ಚನ್ನಾಗಿ ಬಾರಿಸುತ್ತಿರಬೇಕು ಎಂದು ಹೇಳಿದರು.
ಆ ಪಶುವೈದ್ಯರ ಸಹಾಯಕ ಬಲವಾದ ವ್ಯಕ್ತಿಯಾಗಿದ್ದ, ಆ ವೈದ್ಯರು ಹೇಳಿದಂತೆಯೇ ರಾತ್ರಿಯಿಡೀ ನಾಯಿಗೆ ಚನ್ನಾಗಿ ಬಾರಿಸುತ್ತಲೇ ಇದ್ದ.
ಮರುದಿನ ಆ ಮಹಿಳೆ ಆಗಮಿಸಿದಳು,
ಡಾಕ್ಟರೇ , ನನ್ನ ನಾಯಿಮರಿ ಬಗ್ಗೆ ಹೇಳೀ… ಅದು ಏನು ಮಾಡುತ್ತಿದೆ?
ವೈದ್ಯರು ಹೇಳಿದರು – ಬಹುಷಃ ನಿಮ್ಮ ನಾಯಿ ನೀವು ಇಲ್ಲದ್ದು ನೋಡಿ ಸಂಕಟಪಡುತ್ತಿದೆ ಎಂದು ಭಾವಿಸುತ್ತೇನೆ ಎಂದರು!
ವೈದ್ಯರ ಸಹಾಯಕನು ಆ ನಾಯಿಯನ್ನು ತಂದು ಬಿಟ್ಟನು.
ಆ ನಾಯಿ ಆ ಕೋಣೆಯನ್ನು ಪ್ರವೇಶಿಸಿದ ತಕ್ಷಣವೇ ಜಿಗಿದು ಆ ಮಹಿಳೆಯ ಮಡಿಲಲ್ಲಿ ಕುಳಿತು ಕೊಂಡಿತು!
ತನ್ನ ಬಾಲ ಅಲುಗಾಡಿಸುತ್ತಿತ್ತು,
ತನ್ನ ಬಾಯಿ ಚಪ್ಪರಿಸುತ್ತಿತ್ತು!!
ಆ ಮಹಿಳೆಗೆ ತುಂಬಾ ಸಂತೋಷವಾಯಿತು.
ಆಕೆ ಕೇಳತೊಡಗಿದರು-
ಡಾಕ್ಟರೇ , ಅಕಸ್ಮಾತ್ ಇಂತಹಾ ಸ್ಥಿತಿ ಬಂದಾಗ ತಾವು ಯಾವ ಚಿಕಿತ್ಸೆ ಮಾಡ್ತೀರಾ ಸಾರ್? ಎಂದಳು.
ವೈದ್ಯರು ಹೇಳಿದರು : ಈ ನಾಯಿಗೆ ನೀವು ದೊಡ್ಡ ಏರ್ ಕಂಡಿಷನರ್ ಕೊಠಡಿ, ಪ್ರತಿದಿನ ತುಂಬಾ ರುಚಿಕರವಾದ ಆಹಾರವನ್ನು ನೀಡುತ್ತಿದ್ದಿರಿ, ಅದನ್ನು ತಿಂದ ಅನಂತರ, ಅದು ತನ್ನನ್ನು ತಾನೇ ಈ ಮನೆಯ ಯಜಮಾನ ಎಂದು ಭಾವಿಸಿಕೊಂಡುಬಿಟ್ಟಿದೆ ಮತ್ತು ತನ್ನ ಮಾಲೀಕನ ಗುರುತನ್ನೇ ಮರೆತುಬಿಟ್ಟಿತ್ತು ಎಂದರು.
ಆ ನಾಯಿಯ ಈ ಭ್ರಮೆಯನ್ನು ಮೊದಲು ಇಳಿಸಬೇಕಾಗಿತ್ತು, ಅದಕ್ಕಾಗಿ ರಾತ್ರಿಯಿಡೀ ಸ್ವಲ್ಪ ಮಾನಸಿಕ ಮತ್ತು ದೈಹಿಕ ಚಿಕಿತ್ಸೆಯನ್ನು ನೀಡಿದ್ದೇನೆ ಈಗ ಅದು ಎಲ್ಲ ರೀತಿಯಲ್ಲೂ ಸರಿಯಾಗಿದೆ ತಗೊಂಡು ಹೋಗಿ ಎಂದರು.