ನ್ಯೂಸ್ಶಿವಮೊಗ್ಗ

ಬೆಳೆ ಸಂಗ್ರಹಾಲಯ ಉದ್ಘಾಟನೆ  – ಹರಿದು ಬಂದ ಜನಸಾಗರ

ಬೆಳೆ ಸಂಗ್ರಹಾಲಯ ಉದ್ಘಾಟನೆ  – ಹರಿದು ಬಂದ ಜನಸಾಗರ

(SHIVAMOGA): ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹಳೇ ಮುಗಳಗೆರೆ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿಯ ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಪ್ರಮುಖ ಘಟ್ಟ ವಾದ ಮಾಹಿತಿ ಕೇಂದ್ರ , ಬೆಳೆ ಸಂಗ್ರಹಾಲಯ ಮತ್ತು ಸಸ್ಯ ಆರೋಗ್ಯ ಚಿಕಿತ್ಸಾಲಯದ ಉದ್ಘಾಟನೆ ಈಚೆಗೆ ನಡೆಯಿತು.

ಹಳೇಮುಗಳಗೆರೆ ಗ್ರಾಮದಲ್ಲಿ ಉದ್ಘಾಟನಾ ಸಮಾರಂಭಕ್ಕೆ ನೂರಾರು ಸಂಖ್ಯೆಯಲ್ಲಿ ರೈತರು ಪಾಲ್ಗೊಂಡಿದ್ದು, ಮಿನಿ ಕೃಷಿ ಮೇಳದಂತೆ ಗೋಚರಿಸಿತು.

ಮುಖ್ಯ ಅತಿಥಿಗಳಾಗಿ ತಿಪ್ಪಾಯಿಕೊಪ್ಪದ ಮಹಾಂತ ಮಹಾ ಸ್ವಾಮಿಗಳು, ವಿಶ್ವವಿದ್ಯಾಲಯ ಕುಲಸಚಿವರು ಮತ್ತು ವಿಶೇಷ ಅಧಿಕಾರಿಗಳಾದ ಕೆ ಸಿ ಶಶಿಧರ್ ಆಗಮಿಸಿದ್ದರು. ಕೃಷಿ ವಿಸ್ತರಣಾಧಿಕಾರಿಗಳಾದ ಕೆ ಟಿ ಗುರುಮೂರ್ತಿ ಉದ್ಘಾಟಕರಾಗಿ ಪಾಲ್ಗೊಂಡರು.

ವಿಶೇಷವಾಗಿ ಮೆರವಣಿಗೆಯಲ್ಲಿ ಊರಿನ ಅನೇಕ ಮಹಿಳೆಯರು ಕುಂಭ ಹೊತ್ತು ನಡೆದರು, ಡೊಳ್ಳು ಮುಂದೆ ನಂತರ ಹೋರಿ ಹಬ್ಬದಲ್ಲಿ ಹೆಸರು ಮಾಡಿದ ಹೋರಿಗಳಾದ ಅರಶಿನಗೆರೆ ಗೂಳಿ, ಹಂಟರ್ ಕಲ್ಲೇಶ,ಹೈ ಸ್ಪೀಡ್ ಭಗವತಿ, ಕಂಸ, ವೀರಭದ್ರ, ಶಿವನಂದಿ, ಹುಲಿಬೆಂಕಿ, ಹೈ ಸ್ಪೀಡ್ ದೇವರಮಗ, ಜೈ ಹನುಮ, ಚಿನ್ನ, ಶ್ರೀ ನಂದಿ ಇನ್ನು ಪ್ರಮುಖ ಹೋರಿಗಳು ಮೆರವಣಿಗೆಯಲ್ಲಿ ಅದ್ದೂರಿ ಮೆರಗು ತಂದವು. ಎತ್ತಿನಗಾಡಿಯಲ್ಲಿ ಗಣ್ಯರು ಆಗಮಿಸಿ ಬೆಳೆ ಸಂಗ್ರಹಾಲಯ, ಮಾಹಿತಿ ಕೇಂದ್ರ ಮತ್ತು ಸಸ್ಯ ಆರೋಗ್ಯ ಚಿಕಿತ್ಸಾಲಯದ ಉದ್ಘಾಟನೆ ಮಾಡಿದರು.

ಕೃಷಿಯ ಯಂತ್ರೋಪಕರಣಗಳ ಪ್ರದರ್ಶನ, ವಿವಿಧ ತಳಿಗಳ ರಾಸುಗಳ ಪ್ರದರ್ಶನ ಮತ್ತು ಬೆಳೆ ಸಂಗ್ರಹಾಲಯದಲ್ಲಿ ವಿವಿಧ ತಳಿಗಳ ಬೆಳೆಗಳನ್ನು ಪ್ರದರ್ಶಿಸಲಾಯಿತು.

ಸಮಗ್ರ ಕೃಷಿ ಪದ್ಧತಿ, ಸಾವಯುವ ಕೃಷಿ, ಅಡಕೆಯಲ್ಲಿ ಅಂತರ ಬೆಳೆ, ಪುರಾತನ ತಳಿ ಚಿನ್ನಿ ಪೊನ್ನಿ, ವಿದೇಶಿ ತಳಿಗಳ ತರಕಾರಿ ಮತ್ತು ಹೂವಿನ ಬೆಳೆ, ಕಾರಂಜಿ, ಕೃಷಿ ಹೊಂಡದಲ್ಲಿ ಮೀನು ಸಾಕಾಣಿಕೆ, ಅಜೋಲ್ಲ ಕೃಷಿ, ಮೇವು ಬೆಳೆ ಪ್ರಮುಖ ಆಕರ್ಷಣೆಗಳಾಗಿದ್ದವು. ಮಾಹಿತಿ ಕೇಂದ್ರದಲ್ಲಿ ಊರಿನ ಕೃಷಿ ಮತ್ತು ರೈತರಿಗೆ ಬೇಕಾಗುವ ಸಂಪೂರ್ಣ ಮಾಹಿತಿ ತಾಣ ಮಾಡಲಾಗಿತ್ತು, ಸಸ್ಯ ಆರೋಗ್ಯ ಚಿಕಿತ್ಸಾಲಯದಲ್ಲಿ ಈ ಭಾಗದ ಪ್ರಮುಖ ರೋಗ ಮತ್ತು ಕೀಟಗಳ ಮಾದರಿಗಳನ್ನು ಇಡಲಾಗಿತ್ತು.

ಕಾರ್ಯಕ್ರಮಕ್ಕೆ ಸುತ್ತಮುತ್ತಲ ಗ್ರಾಮಸ್ಥರು ಸೇರಿದಂತೆ ಇನ್ನೂ ಅನೇಕ ಕಡೆಯಿಂದ ಜನಸಾಗರವೇ ಹರಿದುಬಂದಿತ್ತು. ಹೋರಿ ಮಾಲೀಕರಿಗೆ ಗಣ್ಯರು ಸನ್ಮಾನಿಸಿದರು.

ಕಾರ್ಯಕ್ರಮದ ಸಂಯೋಜಕ ಡಾ. ಅರುಣ್ ಕುಮಾರ್, ಮಣ್ಣು ವಿಜ್ಞಾನಿ ಡಾ. ಗಣಪತಿ, ರೋಗಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ನರಸಿಂಹ ಮೂರ್ತಿ, ಅರಣ್ಯ ಸಹಾಯಕ ಪ್ರಾಧ್ಯಾಪಕ ಸೂರಜ್ ಇನ್ನು ಪ್ರಮುಖರು ಇದ್ದರು.

ವರದಿ: ಮಧು ರಾಮ್ ಸೊರಬ

Leave a Reply

Your email address will not be published. Required fields are marked *

Scan the code