ಅಂತೂ ಉದ್ಘಾಟನೆಗೊಂಡ ಪಟ್ಟಣದ ಬಸ್ ತಂಗುದಾಣ
(CHIKKAMAGALURU): ಬಾಳೆಹೊನ್ನೂರು ಗ್ರಾಮದಲ್ಲಿ ಪಕ್ಷಾತೀತವಾಗಿ ಸಹಕಾರ ನೀಡಿದಾಗ ಊರಿನ ಅಭಿವೃದ್ಧಿ ಸಾಧ್ಯವೆಂದು ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕರಾದ ಟಿ.ಡಿ ರಾಜೇಗೌಡ ತಿಳಿಸಿದರು. ಬಿ.ಕಣಬೂರು ಗ್ರಾಮ ಪಂಚಾಯಿತಿ ನವೀಕರಿಸಿದ ಕಟ್ಟಡ ಹಾಗೂ ಪಟ್ಟಣದ ಬಸ್ ತಂಗುದಾಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದರು.
ಊರಿನ ಅಭಿವೃದ್ಧಿ ದೃಷ್ಠಿಯಿಂದ ಕೆಲವೊಮ್ಮೆ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ.
ಪಟ್ಟಣದ ರಸ್ತೆ ಅಗಲೀಕರಣ ಹಾಗೂ ಬಸ್ಟ್ಯಾಂಡ್ ನಲ್ಲಿದ್ದ ತಾ.ಪಂ ಮಳಿಗೆಯನ್ನು ತೆರವು ಮಾಡಿಸುವಲ್ಲಿ ವಿಳಂಬವಾಗಿದ್ದ ಹಿನ್ನಲೆಯಲ್ಲಿ ಬಸ್ಟ್ಯಾಂಡ್ ಕಾಮಗಾರಿ ವಿಳಂಬವಾಯಿತು. 1 ಕೋಟಿ 20 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ತಂಗುದಾಣ ನಿರ್ಮಿಸಿದೆ ಹಾಗೂ ಪಂಚಾಯಿತಿಯ ಹೆಚ್ಚುವರಿ ಕೊಠಡಿಯನ್ನು ಸಹಾ 35 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಜಿಲ್ಲೆಯಲ್ಲಿ ಅತೀ ದೊಡ್ಡ ತಂಗುದಾಣ ನಿರ್ಮಿಸಿದ ಹೆಮ್ಮೆ ಪಂಚಾಯಿತಿಗೆ ಇದೆ. ಬೈರೇಗುಡ್ಡ ಹಾಜಿ ಕೆ. ಅಬ್ದುಲ್ ಹಮೀದ್‌ರವರು 18 ವರ್ಷ ಹಾಗೂ ಕೆ.ಟಿ ಚಿನ್ನೇಗೌಡರು 25 ವರ್ಷಗಳಿಗೂ ಹೆಚ್ಚು ಕಾಲ ಪಂಚಾಯಿತಿ ಅಧ್ಯಕ್ಷರಾಗಿ ಊರಿನ ಅಭಿವೃದ್ಧಿಗೆ ಶ್ರಮಿಸಿದ್ದನ್ನು ಸ್ಮರಿಸಿದರು.
ಮಳೆ ನಿಂತ ಕೂಡಲೆ ರಸ್ತೆಗಳ ಗುಂಡಿ ಮುಚ್ಚಲು ಪ್ರಾರಂಭಿಸಲಾಗುವುದು. ಒತ್ತುವರಿ ಹಾಗೂ ಕಸ್ತೂರಿ ರಂಗನ್ ವರದಿಯ ಬಗ್ಗೆ ಈಗಾಗಲೇ ಸರ್ಕಾರದ ಗಮನಕ್ಕೆ ತರಲಾಗಿದೆ. ಯಾರು ಆತಂಕಪಡುವ ಅಗತ್ಯವಿಲ್ಲವೆಂದು ತಿಳಿಸಿದರು.
ಮಲೆನಾಡು ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷೆ ಬಿ.ಸಿ ಗೀತಾ ಮಾತನಾಡಿ ನಮ್ಮ ತಂದೆಯವರು 25ಕ್ಕೂ ಹೆಚ್ಚು ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಪಟ್ಟಣದಲ್ಲಿ ಪ್ರೌಢಶಾಲೆ ಪ್ರಾರಂಭಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿರುವುದನ್ನು ನೆನಪಿಸಿದರು.
ಭದ್ರಾ ಕಾಡ ಅಧ್ಯಕ್ಷ ಡಾ. ಕೆ.ಪಿ ಅಂಶುಮಂತ್ ಮಾತನಾಡಿ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನಗೊಳಿಸಿದ್ದು ಕೋಟ್ಯಾಂತರ ಮಹಿಳೆಯರಿಗೆ ಆರ್ಥಿಕ ಸಬಲೀಕರಣಕ್ಕೆ ಸಹಕರಿಯಾಗಿದೆ. ಈ ಸಂಬಂಧ ವಿರೋಧ ಪಕ್ಷಗಳು ಟೀಕೆ ಮಾಡುವುದನ್ನು ಖಂಡಿಸಿದರು. ಜಿ.ಪಂ ಮಾಜಿ ಸದಸ್ಯ ಮಹಮ್ಮದ್ ಇಫ್ತಿಕಾರ್ ಆದಿಲ್ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಎಂ ಉಮೇಶ್ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷ ಸದಾಶಿವ ಆಚಾರ್ಯ ಅಧ್ಯಕ್ಷತೆ ವಹಿಸಿ ಅಭಿವೃದ್ಧಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಷತೆ ಸಲ್ಲಿಸಿದರು.
ಹೋಬಳಿ ಅಧ್ಯಕ್ಷ ಮಹಮ್ಮದ್ ಹನೀಫ್, ಟಿ.ಎಂ ನಾಗೇಶ್ ಗ್ರಾ.ಪಂ ಉಪಾಧ್ಯಕ್ಷೆ ರಂಜಿತಾ, ತಾ.ಪಂ ಕಾರ್ಯನಿರ್ವಾಹಕಾಧಿಕಾರಿ ಹೆಚ್.ಡಿ ನವೀನ್ ಕುಮಾರ್, ಜಿ.ಎಂ ನಟರಾಜ್, ಕೆ.ಎನ್ ರುದ್ರಪ್ಪಗೌಡ, ಚಂದ್ರಮ್ಮ, ಹೇಮಲತಾ, ಗ್ರಾ.ಪಂ ಸದಸ್ಯರಾದ ಎಂ.ಎಸ್ ಅರುಣೇಶ್, ಶಶಿಕಲಾ ಉಮೇಶ್, ಅಂಬುಜಾ, ಸದಸ್ಯರು ಪಿಡಿಒ ಕಾಶಪ್, ರಾಮಪ್ಪ ಸೇರಿದಂತೆ ಮಾಜಿ ಅಧ್ಯಕ್ಷರು, ಮಾಜಿ ಸದಸ್ಯರು , ಗ್ರಾಮಸ್ಥರು ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ವರ್ಷಿಣಿ ಪ್ರಾರ್ಥಿಸಿ, ಇಬ್ರಾಹಿಂ ಶಾಫಿ ಸ್ವಾಗತಿಸಿ, ರವಿಚಂದ್ರ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ತಮನ್ನಾ ನಿರೂಪಿಸಿ ಹಿರಿಯಣ್ಣ ವಂದಿಸಿದರು.