‘ನಿನ್ನ ಸಾಧನೆ ಇತರರಿಗೂ ಸ್ಪೂರ್ತಿಯಾಗಲಿ ಎಂಬುದೇ ನಮ್ಮೆಲ್ಲರ ಆಸೆ’
(ARTICLE): ಕಣ್ಣಮುಂದೆ ಬೆಳೆದ ಮಗು ‘ಚಿನ್ನದ ಪದಕ’ ‘ಮೊದಲ RANK’ ಪಡೆಯುವ ಮಟ್ಟಿಗೆ ಸಾಗಿಬಂದ ಪರಿಯನ್ನು, ಪ್ರತಿಯೊಂದು ಹಂತದಲ್ಲೂಬೆಳವಣಿಗೆ ಹೊಂದಿದ ರೀತಿ, ಈಗ ಪ್ರತಿಷ್ಠಿತ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವುದನ್ನು ಕಂಡಾಗ ಅದೊಂದು ಹೆಮ್ಮೆಯ ಸಮಯ. ಎಷ್ಟೇ ದೊಡ್ಡವರಾದರೂ ತಾವು ಬೆಳೆದು ಬಂದ ಹಾದಿಯನ್ನು ಮರೆಯದೇ ಎಲ್ಲವನ್ನೂ, ಎಲ್ಲರನ್ನೂ ನೆನಪಿಸಿಕೊಂಡಾಗ ಆಗುವ ಸಂತೋಷಕ್ಕೆ ಕೊನೆ ಎಂಬುದೇ ಇರುವುದಿಲ್ಲ.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಮಲ್ನಾಡ್ ಓಪನ್ ಗ್ರೂಪ್ ನಲ್ಲಿ ಸದಸ್ಯನಾಗಿದ್ದ ಸಮಯ. ವಿವಿಧ ಶಾಲೆಯ/ಕಾಲೇಜಿನ ವಿದ್ಯಾರ್ಥಿಗಳು ಇಲ್ಲಿ ಸದಸ್ಯರಾಗಿ ತಮ್ಮ ಸ್ಕೌಟಿಂಗ್ ಜೀವನವನ್ನು ಮುಂದುವರೆಸುತ್ತಿದ್ದರು. ದುರ್ಗಿಗುಡಿ ಶಾಲೆಯ ನಾಲ್ವರು ವಿದ್ಯಾರ್ಥಿನಿಯರು ಶಾಲಾದಳದಲ್ಲಿದ್ದರೂ ಮಲ್ನಾಡ್ ಓಪನ್ ಗ್ರೂಪ್ ನ ವತಿಯಿಂದ ಹೆಚ್ಚಿನದನ್ನು ಕಲಿಯುವ ಆಸಕ್ತಿಯನ್ನು ತೋರಿದ ಪ್ರತಿಮಾ, ಭಾವನಾ, ಅಮೃತ ಮತ್ತು ಸೌಜನ್ಯ. ಇವರು ಹೇಳಿದ ಕೆಲಸವನ್ನು ಚಾಚೂ ತಪ್ಪದೇ ಮಾಡುತ್ತಿದ್ದರು. ದುರ್ಗಿಗುಡಿ ಶಾಲೆಯ ಚಿತ್ರಕಲಾ ಶಿಕ್ಷಕರಾದ ದೀಪುಸರ್ ಈ ಮಕ್ಕಳ ಬೆಳವಣಿಗೆಗೆ ಸರಿಯಾದ ಸ್ಥಳವೆಂದು ನಮ್ಮ ಗ್ರೂಪ್ ಗೆ ಪರಿಚಯಿಸಿದರು. ಗ್ರೂಪ್ ನ ರಾಜೇಶ್ ಅವಲಕ್ಕಿಸರ್ ಅವರ ಮಾರ್ಗದರ್ಶನದಲ್ಲಿ ಹಲವಾರು ಪದಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿ ಎಲ್ಲದರಲ್ಲೂ ಸೈ ಎನಿಸಿಕೊಂಡವರು. ಗ್ರೂಪ್ ನ ಎಲ್ಲ ಶಿಕ್ಷಕರ ಮಾರ್ಗದರ್ಶನದಲ್ಲಿ ಪ್ರಾವೀಣ್ಯತಾ ಪದಕವನ್ನು ಗಳಿಸಲು ನಿರಂತರ ಅಭ್ಯಾಸವನ್ನು ಮಾಡತೊಡಗಿದರು.
ಒಮ್ಮೆ ಹಳ್ಳಿಯ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ, ನೀರಿನ ಸಂಗ್ರಹಣೆ, ಸುತ್ತಮುತ್ತಲೂ ಸೊಳ್ಳೆಗಳು ಹರಡದಂತೆ ನೋಡಿಕೊಳ್ಳಲು ಏನೇನು ಮಾಡಬೇಕು? ಎಂಬುದನ್ನು ತಿಳಿಸಲು ಯೋಚಿಸುತ್ತಿದ್ದಾಗ ಸೌಜನ್ಯ, ತಮ್ಮ ಮನೆಯ ಸಮೀಪ ಇರುವ ಹಕ್ಕಿಪಿಕ್ಕಿ ಕ್ಯಾಂಪ್ ಇದ್ದು ಅವರಿಗೆ ಈ ವಿಷಯದ ಬಗ್ಗೆ ತಿಳಿಸಬಹುದು ಜೊತೆಗೆ ತನ್ನ ತಾಯಿಯು ಗ್ರಾಮಪಂಚಾಯಿತಿ ಸದಸ್ಯರಾಗಿರುವ ಕಾರಣ ಈ ಕೆಲಸಕ್ಕೆ ಗ್ರಾಮಪಂಚಾಯಿತಿಯವರು ಕೈ ಜೋಡಿಸುತ್ತಾರೆ ಎಂಬ ಸಲಹೆ ನೀಡಿದಳು. ಕಡೆಯದಾಗಿ ಅವಳ ಮಾತಿಗೆ ಒಪ್ಪಿ ಅಲ್ಲಿಗೆ ಹೋಗಿ ಎಲ್ಲರಿಗೂ ವಿಷಯವನ್ನು ತಿಳಿಸಿ, ಜಾಗ್ರತೆಯಿಂದ ಇರಲು ಏನೇನು ಮಾಡಬೇಕು? ಯಾವ ಕೆಲಸವನ್ನು ಮಾಡಬಾರದು ಎಂಬೆಲ್ಲಾ ಮಾಹಿತಿಯನ್ನು ಮಕ್ಕಳು ನೀಡತೊಡಗಿದರು. ಇದರ ಒಂದಿಷ್ಟು ಫೋಟೋಗಳನ್ನು ತೆಗೆದುಕೊಂಡೆವು. ಎಲ್ಲಾ ಮುಗಿಸಿ ಹೊರಡುವಾಗ ಸೌಜನ್ಯಳಿಗೆ ‘ಹಕ್ಕಿಪಿಕ್ಕಿ’ ಎಂದೇ ಕರೆಯತೊಡಗಿದರು. ಅದನ್ನು ಪರಿಚಯಿಸಿದ್ದೇ ತಾನು ಎಂಬುದು ಎಂದಿಗೂ ಮರೆತು ಹೋಗದಂತೆ ಮರುನಾಮಕರಣವಾಗಿತ್ತು. ಹಂತಹಂತವಾಗಿ ಜಿಲ್ಲಾ ಪುರಸ್ಕಾರ, ರಾಜ್ಯ ಪುರಸ್ಕಾರವನ್ನು ಪಡೆದರು. ಮುಂದಿನ ಹಂತ ರಾಷ್ಟ್ರಪತಿ ಪುರಸ್ಕಾರ. ಅದೇ ಸಮಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯೂ ಇದ್ದ ಕಾರಣ ಈ ವಿದ್ಯಾರ್ಥಿನಿಯರು ಬಹುತೇಕ ಸ್ಕೌಟಿಂಗ್ ಪರೀಕ್ಷೆಯನ್ನು ತೆಗೆದುಕೊಳ್ಳುವುದಿಲ್ಲ ಎಂದುಕೊಂಡಿದ್ದೆವು. ಆದರೆ ಅದನ್ನು ಸುಳ್ಳಾಗಿಸಿ, ಆ ಕಡೆ ಶಾಲಾ ಪರೀಕ್ಷೆ, ಈ ಕಡೆ ಸ್ಕೌಟಿಂಗ್ ಪರೀಕ್ಷೆ ಎರಡನ್ನೂ ನಿಭಾಯಿಸುವೆವು ಎಂದರು. ಹಾಗೆಯೇ ಅಭ್ಯಾಸವನ್ನು ಮಾಡಿದರು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲೂ ಉತ್ತಮ ಅಂಕಗಳನ್ನು ಪಡೆದುಕೊಂಡ ಇವರು ಸ್ಕೌಟಿಂಗ್ ನಲ್ಲಿ ದುರ್ಗಿಗುಡಿ ಶಾಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಈ ವಿದ್ಯಾರ್ಥಿನಿಯರು ಒಟ್ಟಿಗೆ ‘ರಾಷ್ಟ್ರಪತಿ ಪುರಸ್ಕಾರ’ವನ್ನು ಪಡೆದರು.
ಶಾಲೆಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಅಂದಿನ ಶಿವಮೊಗ್ಗ ವಿಧಾನಸಭಾ ಸದಸ್ಯರಾಗಿದ್ದ ಪ್ರಸನ್ನಕುಮಾರ್ ಅವರು, ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರು ಈ ಮಕ್ಕಳನ್ನು ಗೌರವಿಸಿದರು. ಆ ವರದಿ ಪತ್ರಿಕೆಯಲ್ಲಿ ಬಂದಾಗ ಇವರಿಗೆ ಹಿಗ್ಗೋಹಿಗ್ಗು. ನಂತರ ಪಿ.ಯು.ಸಿ ಸಮಯ ಹೆಚ್ಚಿನ ಓದು ಇದ್ದೇ ಇರುತ್ತದೆ. ಹಾಗಾಗಿ ಸ್ಕೌಟಿಂಗ್ ಚಟುವಟಿಕೆಗಳಿಗೆ ಬನ್ನಿ ಎಂದು ಯಾರಿಗೂ ಒತ್ತಾಯ ಮಾಡಲಿಲ್ಲ. ಬಿಡುವಿದ್ದಾಗ ,ರಾಷ್ಟ್ರೀಯ ಹಬ್ಬಗಳಿದ್ದಾಗ ಪ್ರತಿಮಾ, ಭಾವನ ತಪ್ಪದೇ ಬರುತ್ತಿದ್ದರು. ಎಲ್ಲರೂ ಮತ್ತೆ ಸೇರಿದ್ದೇ ಪಿ.ಯು.ಸಿ ಪರೀಕ್ಷೆ ಮುಗಿಸಿದ ನಂತರ. ಅಷ್ಟರಲ್ಲಿ ಒಬ್ಬೊಬ್ಬರು ಒಂದೊಂದು ಕಾಲೇಜ್ ಬೇರೆಬೇರೆ ಕೋರ್ಸ್ ಗಳಲ್ಲಿ ಅಭ್ಯಾಸ ಮಾಡಲು ಸಿದ್ಧರಾಗಿದ್ದ ಸಮಯ. ಇದೇ ಸಮಯದಲ್ಲಿ ಶಿವಮೊಗ್ಗದಲ್ಲಿ ಮೊದಲ ಬಾರಿಗೆ ಮಾನಸ ಸಮೂಹ ಸಂಸ್ಥೆಗಳ ವತಿಯಿಂದ ‘ಕಟೀಲು ಅಶೋಕ್ ಪೈ ಸ್ಮಾರಕ ಸಂಸ್ಥೆ’ಯನ್ನು ಡಾ.ಅಶೋಕ್ ಪೈ ಅವರ ಹೆಸರನ್ನ ಚಿರಸ್ಥಾಯಿಯಾಗಿಸುವ ಸಲುವಾಗಿ ಡಾ.ರಜನಿಪೈ, ಡಾ.ವಾಮನ್ ಶಾನ್ ಭಾಗ್ ಮತ್ತು ಡಾ.ಪ್ರೀತಿಪೈ ಇವರ ಮಾರ್ಗದರ್ಶನದಲ್ಲಿ ಆರಂಭಿಸಲಾಯಿತು. ಡಾ.ಸಂಧ್ಯಾಕಾವೇರಿ ಅವರ ಪ್ರಾಚಾರ್ಯರಾಗಿದ್ದರು. ಗೆಳೆಯ ಮಂಜುನಾಥ ಸ್ವಾಮಿ ಸಮಾಜಕಾರ್ಯ ವಿಭಾಗದ ಉಪನ್ಯಾಸಕರಾಗಿ, ನಾನು ಗ್ರಂಥಪಾಲಕನಾಗಿದ್ದಾಗ ಸೌಜನ್ಯ ಇದೇ ಸಂಸ್ಥೆಗೆ ಸೇರಿದಳು. ಆಗ ಈ ಸಂಸ್ಥೆಯು ಮಲ್ಲಿಕಾರ್ಜುನ ಚಿತ್ರಮಂದಿರದ ಸಮೀಪವಿತ್ತು. ಮೊದಲವರ್ಷವಾದ್ದರಿಂದ ಹೇಗೆ ಸಾಗುವುದು? ಎಂಬುದೊಂದು ಎಲ್ಲರ ಯೋಚನೆಯಾಗಿತ್ತು. ಮೊದಲ ವರ್ಷದ ಕಾಲೇಜ್ ಆದರೂ ೩೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು.
ಇದೇ ಸಮಯದಲ್ಲಿ ಮಲ್ನಾಡ್ ಓಪನ್ ಗ್ರೂಪ್ ವತಿಯಿಂದ ‘ಗೀತಭಾರತಿ’ ಎಂಬ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು. ನಗರದ ಹಲವಾರು ಶಾಲೆಯ ವಿದ್ಯಾರ್ಥಿ ಸಮೂಹವೇ ಈ ಕಾರ್ಯಕ್ರಮದ ಭಾಗವಾಗಿರುತ್ತಿತ್ತು. ಒಮ್ಮೆ ಗೆಳೆಯ ಮಂಜುನಾಥಸ್ವಾಮಿ, ‘ಗೀತಭಾರತಿಯಲ್ಲಿ ನಮ್ಮ ಕಾಲೇಜಿಗೂ ಅವಕಾಶ ಸಿಗಬಹುದೇ?’ ಎಂದನು. ಈ ವಿಷಯವನ್ನು ವರ್ಮಾಸರ್, ರಾಜೇಶ್ ಸರ್, ಪರಮೇಶ್ವರಸರ್ ಇವರಿಗೆ ತಿಳಿಸಿದಾಗ, ‘ಕಾಲೇಜ್ ನವರು ತಾವಾಗಿ ಬರಲು ಆಸಕ್ತಿ ತೋರಿಸುತ್ತಿದ್ದಾರೆ ಎಂದರೆ ಬರಲಿ. ನಮ್ಮದೇನು ಅಭ್ಯಂತರವಿಲ್ಲ’ ಎಂದರು. ಒಮ್ಮೆ ಗೀತಭಾರತಿಗೆ ಪೂರ್ವ ಸಭೆಗೆ ಸಂಗೀತ ಶಿಕ್ಷಕರು ಜೊತೆಗೆ ಸಂಗೀತದಲ್ಲಿ ಆಸಕ್ತಿ ಇರುವ ಇಬ್ಬರು ವಿದ್ಯಾರ್ಥಿಗಳನ್ನು ಕರೆದುಕೊಂಡು ಬನ್ನಿ, ಹಾಡನ್ನು ಆಯ್ಕೆ ಮಾಡಿಕೊಳ್ಳಲು ಎಂದು ತಿಳಿಸಿದಾಗ. ನಮ್ಮ ಕಾಲೇಜ್ ನಿಂದ ಕುಮಾರಿ ಸೌಜನ್ಯಗಳನ್ನು ಕರೆದುಕೊಂಡು ಬಂದರು. ಬಂದವರಿಗೆ ಕಾಫಿ-ಟೀ, ಬಿಸ್ಕೇಟ್ ಗಳನ್ನು ನೀಡುವುದಿತ್ತು. ಒಂದಿಬ್ಬರು ಈ ಕೆಲಸವನ್ನು ಮಾಡುವಾಗ ಕಾಲೇಜ್ ಪ್ರತಿನಿಧಿಯಾಗಿದ್ದ ಸೌಜನ್ಯ ನಮ್ಮಗಳ ಜೊತೆ ಸೇರಿ ಎಲ್ಲರಿಗೂ ಕಾಫಿ-ಟೀ ವಿತರಿಸುವಲ್ಲಿ ನೆರವಾದಳು. ‘ನೀನೀಗ ಕಾಲೇಜ್ ಪ್ರತಿನಿಧಿ’ ಎಂದರೆ, ‘ನಾನು ಬೆಳೆದ ಜಾಗ ಇದು. ಇಲ್ಲಿ ಸುಮ್ಮನೆ ಕುಳಿತು ಅಭ್ಯಾಸವೇ ಇಲ್ಲ. ಏನಾದರೂ ಕೆಲಸ ಮಾಡುತ್ತಲೇ ಇದ್ದೆವು. ಈಗಲೂ ಇದು ನನ್ನ ಕೆಲಸ’ ಎಂದಳು.
ಕಾಲೇಜ್ ನ ಇತರ ಕಾರ್ಯಕ್ರಮಗಳಲ್ಲಿ ಆಕೆ ಭಾಗವಹಿಸುತ್ತಿದ್ದ ರೀತಿ, ಇತರರಿಗೆ ಹೇಳಿಕೊಡುವ, ಜೊತೆಗಿದ್ದು ಕಲಿಯುವುದು ಎಲ್ಲವೂ ಅಲ್ಲಿನ ಎಲ್ಲಾ ಉಪನ್ಯಾಸಕರಿಗೂ ಇಷ್ಟವಾಗಿತ್ತು. ಅನೇಕ ಬಾರಿ ಸಂಧ್ಯಾಕಾವೇರಿ ಮೇಡಂ’ ಸ್ಕೌಟಿಂಗ್ ನಲ್ಲಿ ಕಲಿಸಿರುವ ಶಿಸ್ತು ಈಕೆಯ ನಡೆನುಡಿಗಳಲ್ಲೂ ಕಾಣಬಹುದು’ ಎಂದು ಹೇಳಿದ್ದರು. ಇತರ ಚಟುವಟಿಕೆಗಳಲ್ಲೂ ಮುಂದಿದ್ದ ಸೌಜನ್ಯ ಪದವಿಯನ್ನು ಮುಗಿಸುವ ಹಂತಕ್ಕೆ ಬಂದಾಗ ಆಕೆಯ ಮೇಲೆ ನಿರೀಕ್ಷೆಯೊಂದಿತ್ತು. ಪ್ರತೀ ಬಾರಿಯೂ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುತ್ತಿದ್ದಳು. ಕುವೆಂಪು ವಿಶ್ವವಿದ್ಯಾಲಯದ ಬಿ.ಎಸ್.ಡಬ್ಲ್ಯು ವಿಭಾಗದಲ್ಲಿ ಹೆಚ್ಚಿನ ಅಂಕ ಇವಳದ್ದೇ ಆಗಿತ್ತು. ಹಾಗಾಗಿ ಈ ಬಾರಿ RANK ಬರಬಹುದು, ನಮ್ಮ ಕಾಲೇಜಿಗೊಂದು ಚಿನ್ನದ ಪದಕ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದೆವು. ಆ ನಿರೀಕ್ಷೆ ಹುಸಿಯಾಗಲಿಲ್ಲ. ಆಕೆಯ ಶ್ರಮಕ್ಕೆ, ಇದೇ ಮೊದಲ ಬಾರಿ ಆರಂಭವಾದ ಕಾಲೇಜ್ ಒಂದರ, ಮೊದಲ ಬ್ಯಾಚ್ ನ ವಿದ್ಯಾರ್ಥಿ ‘ಚಿನ್ನದ ಪದಕ’ ಪಡೆಯುವ ಸಾಧನೆ ಮಾಡುತ್ತಾಳೆ ಎಂದರೆ ಎಲ್ಲರೂ ಒಮ್ಮೆ ಇತ್ತ ತಿರುಗಿ ನೋಡುವಂತೆ ಮಾಡಿತು.
ನಮ್ಮ ಮಲ್ನಾಡ್ ಓಪನ್ ಗ್ರೂಪ್ ನಲ್ಲಿ ಬೆಳೆದ ಹುಡುಗಿ ಈ ಮಟ್ಟಕ್ಕೆ ಸಾಧನೆ ಮಾಡಿದ್ದಾಳೆಂದರೆ ಅದು ಎಲ್ಲರಿಗೂ ಹೆಮ್ಮೆಯ ಸಂಗತಿಯಾಗಿತ್ತು. ಕುವೆಂಪು ವಿಶ್ವವಿದ್ಯಾಲಯದ ೧೯ನೇ ಘಟಿಕೋತ್ಸವದಲ್ಲಿ ‘ಅನಿಕೇತನ ಚಿನ್ನದ ಪದಕ’ ಪಡೆದಿದ್ದ ನನಗೆ, ನನ್ನ ಜೊತೆಗಿದ್ದ ಸ್ಕೌಟಿಂಗ್ ಸಹೋದರಿ, ಕಾಲೇಜ್ ವಿದ್ಯಾರ್ಥಿನಿ ಚಿನ್ನದಪದಕ ಪಡೆಯುತ್ತಾಳೆ ಎಂದರೆ ನನಗೂ ಅದೊಂತರ ಹೆಮ್ಮೆ. ಒಟ್ಟಿಗೆ ಎಲ್ಲಾದರೂ ಇದ್ದಾಗ ಅಲ್ಲಿದ್ದವರಿಗೆ, ‘ಎರಡು ಚಿನ್ನದ ಪದಕಗಳು ಒಟ್ಟಿಗೆ ಇದೇ ನೋಡಿ’ ಎಂದು ತಮಾಷೆಯಾಗಿ ಹೇಳುತ್ತಿದ್ದೆವು. ಸೌಜನ್ಯ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಮಂಗಳೂರಿಗೆ ತೆರಳಿದಳು. ಆಗಸ್ಟ್ ಬಂತೆಂದರೆ ‘ಗೀತಭಾರತಿ’ ಯ ಸಮಯ. ಈ ಸಮಯದಲ್ಲೂ ಕಟೀಲ್ ಅಶೋಕ್ ಪೈ ಸ್ಮಾರಕ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದರು. ಇದೇ ಸಮಯದಲ್ಲಿ ಮಲ್ನಾಡ್ ಓಪನ್ ಗ್ರೂಪ್ ವತಿಯಿಂದ ಸೌಜನ್ಯಳಿಗೊಂದು ಅಭಿನಂದನೆ ಸಲ್ಲಿಸಬೇಕು ಎಂದು ತೀರ್ಮಾನಿಸಲಾಯಿತು. ಕಾಲೇಜ್ ಗೂ ಮಾಹಿತಿ ನೀಡಿದೆವು. ಸೌಜನ್ಯಳಿಗೂ ಬರುವಂತೆ ಎರಡೂ ಸಂಸ್ಥೆಯ ಕಡೆಯಿಂದಲೂ ಕೇಳಿದಾಗ ಇಲ್ಲವೆನ್ನದೆ ಬರಲು ಒಪ್ಪಿದಳು. ನಾವು ಸುಮ್ಮನೆ ಇರದೇ, ‘ನಿಮ್ಮ ಕಾಲೇಜ್ ಜೊತೆಗೆ ಹಾಡನ್ನು ಹಾಡಬೇಕು. ಅದಕ್ಕೂ ಅಭ್ಯಾಸ ಮಾಡ್ಕೋ’ ಎಂದೆವು. ‘ಅಣ್ಣಾ ಅವರೆಲ್ಲ ಚೆನ್ನಾಗಿ ಅಭ್ಯಾಸ ಮಾಡಿರ್ತಾರೆ. ಅದರ ಮಧ್ಯೆ ನಾನು ಅವರ ಜೊತೆಗೆ ಒಂದು ಸಲವೂ ಪ್ರಾಕ್ಟೀಸ್ ಮಾಡದೇ ನೇರವಾಗಿ ಬಂದು ಹಾಡೋದು ಸರಿ ಅನ್ನಿಸಲ್ಲ.’ ಎಂದಳು. ‘ನಿನಗೆ ಹಾಡು, ಅದರ್ ಟ್ರ್ಯಾಕ್ ಎರಡನ್ನೂ ಕಳಿಸುವೆ. ಅಲ್ಲಿಯೇ ಬಿಡುವಿದ್ದಾಗ ಅಭ್ಯಾಸ ಮಾಡು. ಸಮಸ್ಯೆ ಇಲ್ಲ ‘ಎಂದಾಗ ‘ಸರಿ ಆಗಲಿ’ ಎಂದು ಒಪ್ಪಿದಳು.
ಅಂದು ಗೀತಭಾರತಿಗೆ ಬಂದಳು. ತಮ್ಮ ಕಾಲೇಜ್ ಜೊತೆ ಸೇರಿ ಹಾಡಿದಳು. ಸಮವಸ್ತ್ರ ಧರಿಸಿದ ಕಾಲೇಜ್ ವಿದ್ಯಾರ್ಥಿಗಳ ಮಧ್ಯೆ ಭಿನ್ನವಾಗಿದ್ದ ಈಕೆಯನ್ನು ಮುಂದಕ್ಕೆ ಕರೆದು ನಮ್ಮ ಗ್ರೂಪ್ ನ ಹುಡುಗಿ, ಈ ಕಾಲೇಜ್ ನ ಮೊದಲ ಬ್ಯಾಚ್, ಮೊದಲ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ. ಅದೇ ನಮ್ಮ ಹೆಮ್ಮೆ’ ಎಂದು ಆಕೆಯ ಪೋಷಕರನ್ನು, ಕಾಲೇಜ್ ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯರನ್ನು ಕರೆದು ಅವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಎನ್ನುವ ವಿಷಯವನ್ನು ಆಕೆಗೆ ತಿಳಿಸಿಯೇ ಇರಲಿಲ್ಲ. ಆಕೆಗೆ ಸಂತೋಷದ ಜೊತೆಗೆ ಸಣ್ಣ ಮುಜುಗರವು ಆಯಿತು. ಸಂತೋಷ ಸನ್ಮಾನವನ್ನು ನಿರೀಕ್ಷಿಸಿರಲಿಲ್ಲ, ಮುಜುಗರ ತನಗೆ ಮಾರ್ಗದರ್ಶನ ಮಾಡಿದವರ ಎದುರಲ್ಲಿ ಕುಳಿತು, ಅವರಿಂದಲೇ ಸನ್ಮಾನ ಸ್ವೀಕರಿಸುವುದು. ಕಡೆಯದಾಗಿ ಆಕೆಗೆ ‘ನಿನ್ನ ಈ ಸಾಧನೆ ಇತರರಿಗೂ ಸ್ಪೂರ್ತಿಯಾಗಲಿ ಎಂಬುದೇ ನಮ್ಮೆಲ್ಲರ ಆಸೆ. ವಿದ್ಯೆ-ವಿನಯವಿದ್ದಲ್ಲಿ ಎಲ್ಲವೂ ಅರಸಿಕೊಂಡು ಬಂದೇ ಬರುತ್ತದೆ ಎನ್ನುವುದಕ್ಕೆ ಸೌಜನ್ಯಳೇ ಸಾಕ್ಷಿ’ ಎಂದು ವೇದಿಕೆಯಲ್ಲಿ ಹೇಳಿದಾಗ ಜೋರಾದ ಚಪ್ಪಾಳೆ. ನಮ್ಮೆಲ್ಲರಿಗೂ ಹಿಗ್ಗೋಹಿಗ್ಗು. ಅಂದು ಆಕೆಯ ಪೋಷಕರಲ್ಲಿ ಕಂಡದ್ದು ಸಾರ್ಥಕತೆಯ ಭಾವ.
ರಾಷ್ಟ್ರಪತಿ ಪುರಸ್ಕಾರ, ಚಿನ್ನದ ಪದಕ ಪಡೆದರೂ ಎಲ್ಲೂ ಅಹಂಕಾರದ ಗುಣ ತನ್ನಲ್ಲಿ ಮನೆ ಮಾಡದಂತೆ, ಯಾರಾದರೂ ಈಕೆಯ ಸಾಧನೆಯನ್ನು ಪರಿಚಯ ಮಾಡಿಕೊಟ್ಟಾಗ ಹುಬ್ಬೇರುವಂತೆ ಮಾಡುವ ಸರಳವಾಗಿರುವ, ಹೆಸರಿಗೆ ತಕ್ಕಂತೆ ಸೌಜನ್ಯಯುತವಾಗಿ ಎಲ್ಲರೊಂದಿಗೆ ಬೆರೆಯುವ, ಸ್ಕೌಟ್ ಭವನ್ ಗೆ ಭೇಟಿ ನೀಡಿದಾಗ ಅಲ್ಲಿದ್ದವರು ಅಷ್ಟೇ ಅಕ್ಕರೆಯಿಂದ ಮಾತನಾಡಿಸುವ, ಗುರು-ಹಿರಿಯರನ್ನು ಗೌರವಭಾವದಿಂದ ಕಾಣುವ ಸೌಜನ್ಯ ಇತರರಿಗೆ ಮಾದರಿ ಎಂದರೆ ತಪ್ಪಿಲ್ಲ.
ಇಂದು ಉನ್ನತ ಶಿಕ್ಷಣವನ್ನು ಮುಗಿಸಿ ಮಂಗಳೂರಿನ ಪ್ರತಿಷ್ಠಿತ ಶಿಕ್ಷಕ ಸಂಸ್ಥೆಯಲ್ಲಿ ಉಪನ್ಯಾಸಕಿಯಾಗಿ ಕಾರ್‍ಯ ನಿರ್ವಹಿಸುತ್ತಿದ್ದಾಳೆ. ಇತ್ತೀಚೆಗೆ ಅವಳ ಗೆಳತಿಯ ಮದುವೆಗೆಂದು ಬಂದಾಗ, ಆಗ ಹೇಗಿದ್ದಳೋ ಈಗಲೂ ಅದೇ ಗುಣ, ಮಿತ ಮಾತು. ಏನಮ್ಮ ಸೌಜು ಎಂದರೆ ಮುಗುಳುನಗೆ, ‘ಹಕ್ಕಿಪಿಕ್ಕಿ’ ಎಂದರೆ ಜೋರಾಗಿ ನಕ್ಕು, ‘ಅದು ಯಾವುದೋ ಕಾಲದ್ದು, ಈಗ ನಾನು ಉಪನ್ಯಾಸಕಿ. ಇರಲಿ. ಹೀಗೆ ಕರೆಸಿಕೊಳ್ಳದೇ ಬಹಳ ದಿನವಾಗಿತ್ತು. ಇವೆಲ್ಲ ಕೇಳಿದಾಗ ನನಗೆ ನಾನಿನ್ನು ಗೈಡ್ ಹುಡುಗಿ, ಸ್ಕೌಟ್
ಭವನ್ ತುಂಬಾ ಓಡಾಡುತ್ತಿದ್ದ ಘಟನೆಗಳೇ ಕಣ್ಣಮುಂದೆ ಬರುತ್ತವೆ’ ಎಂದಾಗ ಮೂಡುವ ಕಿರುನಗೆ ಆಗಿಹೋದ ಎಲ್ಲ ಸಂಗತಿಗಳನ್ನು ಒಮ್ಮೆ ನೆನಪಿಸುತ್ತವೆ. ತಮ್ಮ ಜೊತೆಗೆ ಆಡಿ ಬೆಳೆದ ಗೆಳತಿಯರಿಗೆ ಈಕೆಯ ಸಾಧನೆಯ ಬಗ್ಗೆ ಹೆಮ್ಮೆಯಿದೆ. ಶಿಕ್ಷಕರು-ಮಾರ್ಗದರ್ಶಕರಿಗೂ ಸರಿಯಾದ ದಾರಿಯಲ್ಲಿ ಸಾಗುತ್ತಿರುವುದಕ್ಕೆ ತೃಪ್ತಿಯಿದೆ. ಜೊತೆಗಿದ್ದ ಸಹೋದರಿಯೊಬ್ಬಳ ಸಾಧನೆ ಇತರರಿಗೆ ತಿಳಿಸುತ್ತ, ಬೆಳವಣಿಗೆ ಎಂದರೇ ಈ ರೀತಿಯಲ್ಲಿರಲಿ ಎಂದು ಹೇಳಿದ್ದೇವೆ. ಎಲ್ಲೋ ಕಾಣದ ಘಟನೆಗಳಿಗಿಂತ ಕಣ್ಣ ಮುಂದಿರುವ ಉದಾಹರಣೆಗಳನ್ನು ನೀಡಿ, ‘ಬೆಳೆದರೆ ಹೀಗೆ ಬೆಳೆಯಿರಿ’ ಎಂದು ಈಕೆಯ ಸಾಧನೆ ತಿಳಿಸಿದ್ದೇವೆ. ಎಲ್ಲರೂ ಹೀಗಾಗಬಹುದೆಂದಲ್ಲ, ಒಬ್ಬರಾದರೂ ಇದೇ ರೀತಿಯ ದಾರಿಯಲ್ಲಿ ಸಾಗಿದಲ್ಲಿ ಅದೇ ಸಾರ್ಥಕ ಎಂದೆನಿಸುತ್ತದೆ…