ಮಕ್ಕಳಿಗೆ ಶಾಲಾ ಕಲಿಕೆಯ ಹಂತದಲ್ಲಿಯೇ ಸಾಹಿತ್ಯಾಸಕ್ತಿ ಮೂಡಿಸಬೇಕು
(SHIVAMOGA): ಮಕ್ಕಳಿಗೆ ಶಾಲಾ ಕಲಿಕೆಯ ಹಂತದಲ್ಲಿಯೇ ಸಾಹಿತ್ಯಾಸಕ್ತಿ ಮೂಡಿಸಬೇಕು ಹಾಗೂ ಸ್ಪಷ್ಟವಾಗಿ ಓದುವ, ಬರೆಯುವ ಮತ್ತು ಮಾತನಾಡುವುದನ್ನು ರೂಢಿಸ ಬೇಕು ಎನ್ನುವ ನಿಟ್ಟಿನಲ್ಲಿ ಕಳೆದ ಹತ್ತೊಂಬತ್ತು ವರ್ಷಗಳಿಂದ ಸತತ ಪ್ರಯತ್ನದ ಭಾಗವಾಗಿ ಸಾಹಿತ್ಯ ಕಮ್ಮಟ ನಡೆಸಲಾಗುತ್ತಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣದ ಹಳೇಸೊರಬದ ಅಮರ ಜ್ಯೋತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಅಮರ ಜ್ಯೋತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಸಾಹಿತ್ಯ ರಚನಾ ಕಮ್ಮಟ ಉದ್ಘಾಟಿಸಿ ಅವರು ಮಾತನಾಡಿದರು.
ಮಾತೃಭಾಷೆಯನ್ನು ತಿರಸ್ಕಾರ ಮನೋಭಾವದಿಂದ ಕಂಡ ಪರಿಣಾಮವಾಗಿ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸದ ಕೊರತೆ ಎದ್ದುಕಾಣುತ್ತಿದೆ. ಶೈಕ್ಷಣಿಕ ಬದುಕು ಮಾತೃಭಾಷೆಯಿಂದ ಆರಂಭವಾಗಬೇಕು. ಕನ್ನಡವೇ ಪರಿಸರದ ಭಾಷೆಯಾಗಿದ್ದು, ಮಕ್ಕಳಿಗಾಗಿ ಶಾಲೆಗಳಲ್ಲಿ ಕಮ್ಮಟವನ್ನು ಏರ್ಪಡಿಸಲಾಗುತ್ತಿದೆ. ಬರೆಯುವ ಕಲೆ ಉತ್ತಮವಾಗಬೇಕೆಂದರೆ ಹೆಚ್ಚು ಓದುವ ಹವ್ಯಾಸವನ್ನು ಮಕ್ಕಳು ಬೆಳೆಸಿಕೊಳ್ಳಬೇಕು ಎಂದರು.
ಕನ್ನಡಕ್ಕೆ ಸುಮಾರು 2500 ವರ್ಷಗಳ ಇತಿಹಾಸ ಇರುವ ಹಿನ್ನೆಲೆಯಲ್ಲಿಯೇ ಶಾಸ್ತ್ರೀಯ ಭಾಷಾ ಸ್ಥಾನಮಾನ ದೊರೆತಿದೆ. ಭಾಷಾ ಕಲಿಕೆ ಅತ್ಯಂತ ಜವಾಬ್ದಾರಿಯುತವಾಗಿದ್ದು, ರಾಜ್ಯೋತ್ಸವದ ಸಂದರ್ಭದಲ್ಲಿ ಸಂಭ್ರಮಿಸಿದರೆ ಸಾಲದು. ಮಕ್ಕಳಿಗೆ ಪಠ್ಯದ ಜೊತೆಗೆ ಸಾಹಿತ್ಯ ಅಭಿರುಚಿ ಮೂಡಿಸಲು ಕಥೆ, ಕವನ, ಪ್ರಬಂಧ ವಿಚಾರವಾಗಿ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಲಿದ್ದಾರೆ. ಅವುಗಳನ್ನು ಅರ್ಥೈಸಿಕೊಂಡು ಸಾಹಿತ್ಯ ಬರೆಯುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಡಿ.ಎಸ್. ಶಂಕರ್ ಶೇಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಹಿತ್ಯ ಕಮ್ಮಟದಿಂದ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಲು ಸಾಧ್ಯವಾಗುತ್ತದೆ. ಕನ್ನಡ ಸುಂದರ, ಸುಲಲಿತವಾದ ಭಾಷೆಯಾಗಿದ್ದು, ಅನ್ಯ ಭಾಷಿಕರನ್ನು ತನ್ನತ್ತ ಸೆಳೆಯುವ ಶಕ್ತಿಯನ್ನು ಹೊಂದಿದೆ. ಜಿಲ್ಲಾ ಕೇಂದ್ರಕ್ಕೆ ಸೀಮಿತವಾಗಿದ್ದ ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ ತಾಲೂಕು ಕೇಂದ್ರದಲ್ಲಿ ನಡೆದಿರುವುದು ನಮ್ಮೆಲ್ಲರ ಹೆಮ್ಮೆಯ ವಿಷಯವಾಗಿದೆ. ಸಂಘಟನೆಯಿಂದ ಸುಮಾರು 400 ಸಾಧಕರನ್ನು ಗುರುತಿಸಿ,a ಗೌರವಿಸುವ ಕೆಲಸವನ್ನು ಮಾಡಲಾಗಿದೆ. ಇಂತಹ ಕಮ್ಮಟಗಳು ನಿರಂತರವಾಗಿ ನಡೆಯಬೇಕು ಎನ್ನುವ ಉದ್ದೇಶ ಹೊಂದಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಸಿ. ಸಿಲ್ವಿಯಾ ಸಿಕ್ವೇರಾ ಮಾತನಾಡಿ, ಪ್ರತಿ ಮಕ್ಕಳಲ್ಲೂ ಕ್ರಿಯಾಶೀಲತೆ ಅಡಗಿರುತ್ತದೆ. ಅದನ್ನು ಗುರುತಿಸುವ ಹೊಣೆ ಸಂಘ-ಸಂಸ್ಥೆಗಳು, ಪೋಷಕರು ಮತ್ತು ಶಿಕ್ಷಕರ ಮೇಲಿದೆ. ಮಕ್ಕಳು ಶಿಕ್ಷಣದೊಂದಿಗೆ ಸಾಹಿತ್ಯಸಾಕ್ತಿ ಬೆಳೆಸಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳನ್ನು ಪರಿಪೂರ್ಣರನ್ನಾಗಿಸಲು ಸಾಧ್ಯವಾಗುತ್ತದೆ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾದ ಎಸ್. ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಸಾಹಿತಿ ಡಾ. ಶಾಂತಾರಾಮ್ ಪ್ರಭು, ಅಂಕಣ ಬರಹಗಾರ ಬಿ. ಚಂದ್ರೇಗೌಡ ಆಗಮಿಸಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಪುಷ್ಪಾ, ಶಿಕ್ಷಣ ಇಲಾಖೆಯ ಸಂಜೀವ ಕುಮಾರ್, ರವಿಕುಮಾರ್ ಸೇರಿದಂತೆ ಮತ್ತಿತರರಿದ್ದರು. ಎಚ್. ಅಶ್ವಿನಿ ಪ್ರಾರ್ಥಿಸಿ, ಪ್ರಜ್ವಲ್ ಚಂದ್ರಗುತ್ತಿ ಸ್ವಾಗತಿಸಿ, ಜಿ.ಡಿ. ಪ್ರಶಾಂತ್ ಕುಮಾರ್ ವಂದಿಸಿ, ಸುಬ್ರಾಯ ಜಿ. ಹಳ್ಳೇರ್ ಕಾರ್ಯಕ್ರಮ ನಿರೂಪಿಸಿದರು.
ವರದಿ: ಮಧು ರಾಮ್ ಸೊರಬ