ಸಾಹಿತ್ಯ ಅಧ್ಯಯನ ಜ್ಞಾನವೃದ್ಧಿಗೆ ಸಹಕಾರಿ
(CHIKKAMAGALURU): ನಿರಂತರವಾಗಿ ಸಾಹಿತ್ಯ ಅಧ್ಯಯನ ಮಾಡುವುದರಿಂದ ಜ್ಞಾನ ವೃದ್ಧಿಯಾಗಲು ಪೂರಕವಾಗಲಿದೆ ಎಂದು ರೋಟರಿ ಕ್ಲಬ್ ಕಾರ್ಯದರ್ಶಿ ಬಿ.ಎಸ್.ಸಾಗರ್ ಹೇಳಿದರು.
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಪಟ್ಟಣದ ರೇಣುಕನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳ ವಿವಿಧ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ, ಪಠ್ಯೇತರ ಚಟುವಟಿಕೆಗಳು ಸಹ ಅಗತ್ಯವಾಗಿದ್ದು, ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಅಪಾರ ಜ್ಞಾನ, ಸಾಹಿತ್ಯದ ಅರಿವೂ ಆಗಲಿದೆ ಎಂದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಯಜ್ಞಪುರುಷಭಟ್ ಮಾತನಾಡಿ, ಕನ್ನಡದ ಮೂಲ ಕಾಗುಣಿತವಾಗಿದ್ದು, ಇಂದಿನ ವಿದ್ಯಾರ್ಥಿಗಳು ಆಂಗ್ಲ ಭಾಷೆಯ ವ್ಯಾಮೋಹದಲ್ಲಿ ಕನ್ನಡದ ಮೂಲವನ್ನೇ ಮರೆಯುತ್ತಿದ್ದಾರೆ. ಕನ್ನಡ ಕಾಗುಣಿತವನ್ನು ಕಲಿತರೆ ಕನ್ನಡದ ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯವಿದೆ.
ಪ್ರತಿಯೊಬ್ಬರೂ ಸಹ ಮಾತೃಭಾಷೆಯನ್ನು ಪೂಜಿಸಿ ಅನ್ಯ ಭಾಷೆಯನ್ನು ಪ್ರೀತಿಸಬೇಕಿದೆ. ಕನ್ನಡವನ್ನು ನಿತ್ಯ ಬಳಸುವ ಮೂಲಕ ಕನ್ನಡದ ಸೇವೆಯನ್ನು ಮಾಡಬೇಕಿದೆ. ಪುಸ್ತಕಗಳ ಅಧ್ಯಯನದಿಂದ ಜ್ಞಾನವೃದ್ಧಿಯಾಗಲಿದದ್ದು, ವಿದ್ಯಾರ್ಥಿಗಳು ದಿನನಿತ್ಯವೂ ದಿನಪತ್ರಿಕೆಗಳನ್ನು ಓದಬೇಕಿದೆ. ಪತ್ರಿಕೆಗಳು ಒಂದು ವಿಶ್ವ ವಿದ್ಯಾನಿಲಯವಾಗಿದ್ದು ಅದರಲ್ಲಿ ಹಲವು ವಿಶ್ವಜ್ಞಾನ ಅಡಗಿರುತ್ತದೆ ಎಂದರು.
ಸರ್ಕಾರಿ ಪಿಯು ಕಾಲೇಜು ಪ್ರಾಚಾರ್ಯ ಬಿ.ಎಚ್.ಕೃಷ್ಣಮೂರ್ತಿ ಮಾತನಾಡಿ, ಚುಟುಕು ಸಾಹಿತ್ಯವು ಜೀವನದ ಅವಿಭಾಜ್ಯ ಅಂಗವಾಗಿದ್ದು, ಇದು ಬದುಕನ್ನು ರೂಪಿಸುತ್ತದೆ. ವಿದ್ಯಾರ್ಥಿಗಳು ಜೀವನದಲ್ಲಿ ಸಂಪ್ರದಾಯಕ, ಸಂಸ್ಕಾರ, ಪರಂಪರೆಯನ್ನು ಅಳವಡಿಸಿಕೊಂಡು ಛಲ, ಬಲದಿಂದ ಗುರಿ ಸಾಧನೆ ಮಾಡಿಕೊಳ್ಳಬೇಕು ಎಂದರು.
ಕಸಾಪ ತಾಲೂಕು ಪೂರ್ವಾಧ್ಯಕ್ಷ ಕೆ.ಟಿ.ವೆಂಕಟೇಶ್ ಮಾತನಾಡಿ, ದೇಶದಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ ಕನ್ನಡವಾಗಿದ್ದು, ವಿಶ್ವದೆಲ್ಲೆಡೆ ಮಾನ್ಯತೆ ಪಡೆದ ಭಾಷೆಯಾಗಿದೆ. ಕನ್ನಡ ರಾಜ್ಯೋತ್ಸವ ನವೆಂಬರ್ ತಿಂಗಳಿಗೆ ಸೀಮಿತವಾಗದೆ ನಿತ್ಯವೂ ಆಚರಣೆಯಾಗಬೇಕಿದೆ.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಕಳೆದ ಹಲವಾರು ವರ್ಷಗಳಿಂದ ಕನ್ನಡಪರವಾಗಿ ಕೆಲಸ ಮಾಡುತ್ತಿದ್ದು, ಪ್ರತೀ ವರ್ಷವೂ ರಾಜ್ಯೋತ್ಸವದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ವಿಶೇಷ ಸ್ಪರ್ಧೆಗಳನ್ನು ಆಯೋಜಿಸಿ ಪ್ರೋತ್ಸಾಹಿಸುತ್ತಿದೆ ಎಂದರು.
ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಚರ್ಚಾ ಸ್ಪರ್ಧೆಯ ಪರ ವಿಭಾಗದಲ್ಲಿ ಪಿ.ಕೀರ್ತಿನಾ ಪ್ರಥಮ, ಸುದರ್ಶಿನಿ ದ್ವಿತೀಯ, ಯೋಗಿನಿ ತೃತೀಯ, ವಿರೋಧ ವಿಭಾಗದಲ್ಲಿ ರಶ್ಮಿತಾ ಪ್ರಥಮ, ರೇಚಲ್ ದ್ವಿತೀಯ, ಆಶುಭಾಷಣ ಸ್ಪರ್ಧೆಯಲ್ಲಿ ಫಾತಿಮಾ ನೆಹರು ಬಾನು ಪ್ರಥಮ, ಅಂಜಲಿ ದ್ವಿತೀಯ ಸ್ಥಾನ ಪಡೆದರು. ಛದ್ಮವೇಷ ಸ್ಪರ್ಧೆಯಲ್ಲಿ ಮೆಲ್ವಿನಾ ಪ್ರಥಮ, ಬಿ.ಎಸ್. ಅಗಸ್ತ್ಯ ದ್ವಿತೀಯ, ಪ್ರತೀಕ್ಞಾ ತೃತೀಯ ಸ್ಥಾನ ಪಡೆದರು.
ಐಟಿಐ ಕಾಲೇಜು ಪ್ರಾಚಾರ್ಯ ಎಚ್.ಆರ್.ಆನಂದ್, ಚುಸಾಪ ಖಜಾಂಚಿ ರಾ.ವೆಂಕಟೇಶ್, ಹಾಸ್ಯ ಕಲಾವಿದ ಶ್ರೀಕೃಷ್ಣಭಟ್, ಹಿರಿಯ ಕ್ರೀಡಾಪಟು ಓ.ಡಿ.ಸ್ಟೀಫನ್, ಪತ್ರಕರ್ತ ಪ್ರವೀಣ್‌ಕುಮಾರ್, ಮುಖ್ಯಶಿಕ್ಷಕಿ ರಜನಿ ದೇವಯ್ಯ, ಭರತನಾಟ್ಯ ಕಲಾವಿದೆ ನಯನ ಪ್ರಸಾದ್, ಪತ್ರಿಕಾ ವಿತರಕ ಅಕ್ಷಯ್, ಉಪನ್ಯಾಸಕರಾದ ಚಂದ್ರಶೇಖರ್, ಉಮೇಶ್, ರವಿರಾಜು, ಶ್ರೀವತ್ಸ, ಅಶೋಕ್, ಪ್ರಕಾಶ್, ಉಮಾಶಂಕರ್, ಜರ‍್ರಿ ಜೇಮ್ಸ್ ಮತ್ತಿತರರು ಹಾಜರಿದ್ದರು.