ಪ್ರೇಕ್ಷಕರ ಮನಗೆದ್ದ ನಾಗರಹಾವು- ಭೂ ಲೋಕದ ನಾಗಯಾನ ನಾಟಕ
(CHIKKAMAGALURU): ಬಾಳೆಹೊನ್ನೂರು: ಪಟ್ಟಣದ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯ ಶರನ್ನವರಾತ್ರಿ ಮಹೋತ್ಸವದಲ್ಲಿ ಭಾನುವಾರ ರೇಣುಕನಗರದ ವಿಘ್ನೇಶ್ವರ ಕಲಾಬಳಗದ ಹವ್ಯಾಸಿ ಕಲಾವಿದರು ಪ್ರದರ್ಶಿಸಿದ ನಾಗರಹಾವು- ಇದು ಭೂಲೋಕದ ನಾಗಯಾನ ನಾಟಕವು ಪ್ರೇಕ್ಷಕರ ಮನಗೆದ್ದಿತು.
ನಿರ್ದೇಶಕ ಬಿ.ಜಗದೀಶ್ಚಂದ್ರ ನೇತೃತ್ವದಲ್ಲಿ ವಿಭಿನ್ನ ಕಲ್ಪನೆಯಲ್ಲಿ ನಡೆದ ನಾಗರಹಾವು ನಾಟಕದಲ್ಲಿ ವಿವಿಧ ದೃಶ್ಯಗಳನ್ನು ನೋಡುಗರ ಮನಮುಟ್ಟುವಂತೆ ಪ್ರದರ್ಶಿಸಲಾಯಿತು.
ಭರತ ಖಂಡದ ಮಹಾರಾಜ ರವಿವರ್ಮನ ಕುಟುಂಬ ಹಾಗೂ ಸದ್ಗುರು ನೇತೃತ್ವದಲ್ಲಿ ಮುನ್ನಡೆಯುವ ನಾಗ ಸಹಿತ ಶಿವಾಲಯದ ಕಲ್ಪನೆಯಲ್ಲಿ ನಾಟಕವನ್ನು ಪ್ರದರ್ಶಿಸಿದ್ದು, ರಾಜ ರವಿವರ್ಮನ ಕುಟುಂಬದಲ್ಲಿ ಮಕ್ಕಳಿಲ್ಲದೆ ಕೊರಗುವುದನ್ನು, ರಾಜನ ಕುಟುಂಬದಲ್ಲಿ ಮಕ್ಕಳಿಲ್ಲದೇ ರಾಜನ ಪತ್ನಿಗೆ ಸಮಾಜ ಬಂಜೆ ಎಂದು ಹೀಗಳೆಯುವುದನ್ನು ಮನಮುಟ್ಟುವಂತೆ ತೋರಿಸಲಾಯಿತು.
ಮಕ್ಕಳಿಲ್ಲದ ರಾಜ ಮತ್ತು ಆತನ ಪತ್ನಿ ಶಿವಾಲಯಕ್ಕೆ ಭೇಟಿ ನೀಡಿ ಆಚಾರ್ಯ ಸದ್ಗುರು ಬಳಿ ತಮ್ಮ ಸಂಕಷ್ಟ ನಿವೇದನೆ ಮಾಡಿಕೊಂಡು ನಾಗ, ಶಿವನಲ್ಲಿ ಪ್ರಾರ್ಥನೆ ಮಾಡಿಕೊಂಡು ಪ್ರಸಾದ ತೆಗೆದುಕೊಳ್ಳುವುದು. ಬಳಿಕ ರಾಜನ ಪತ್ನಿ ಗರ್ಭವತಿಯಾಗಿ ಮಗು ಪಡೆಯುವುದು, ಶಿವಾಲಯದಲ್ಲಿ ನೀಡಿದ ಪ್ರಸಾದವನ್ನು ಅರ್ಧಂಬರ್ದ ಸ್ವೀಕರಿಸಿ ನಾಗದೋಷವುಳ್ಳ ನಾಗರಹಾವಿನ ಹಾಗೆ ಇರುವ ಮಗು ಜನಿಸುವುದನ್ನು ನಾಟಕದಲ್ಲಿ ತೋರಿಸಲಾಗಿದೆ.
ದೋಷವುಳ್ಳ ಮಗು ದೊಡ್ಡವನಾದ ಬಳಿಕ ಮದುವೆ ವಯಸ್ಸಿಗೆ ಬಂದಾಗ ವಿರೂಪ ಇರುವ ಮಗನಿಗೆ ಹೆಣ್ಣು ಕೊಡಿಸಿ ಎಂದು ಶಿವಾಲಯದಲ್ಲಿರುವ ಆಚಾರ್ಯರ ಬಳಿ ಬೇಡುವುದು, ಕೊನೆಗೆ ಆಚಾರ್ಯರ ಮಗಳನ್ನೇ ತನ್ನ ಮಗನಿಗೆ ಮದುವೆ ಮಾಡಿಕೊಡುವಂತೆ ರಾಜ, ರಾಣಿ ಬೇಡಿಕೊಂಡು ರಾಜನ ಮಗನನ್ನು ತೋರಿಸದೆ ವಿವಾಹ ಪ್ರಕ್ರಿಯೆಗಳನ್ನು ಪೂರೈಸುವುದು.
ಬಳಿಕ ಆಚಾರ್ಯರ ಮಗಳು ವಿವಾಹದ ಮೊದಲ ರಾತ್ರಿಯಲ್ಲಿ ತನ್ನ ವಿರೂಪವಾದ ಪತಿಯನ್ನು ನೋಡಿ ಹಾವಿನ ರೂಪವುಳ್ಳವನನ್ನು ಮದುವೆ ಆಗಿರುವ ಬಗ್ಗೆ ತಿಳಿಯುತ್ತದೆ. ಬಳಿಕ ಆಕೆ ಶಿವಾಲಯಕ್ಕೆ ತನ್ನ ತಂದೆಯ ಬಳಿಬಂದು ತಾನು ಹಾವನ್ನು ವಿವಾಹವಾಗಿರುವ ಬಗ್ಗೆ ತಿಳಿಸುತ್ತಾಳೆ. ಆಗ ಆಚಾರ್ಯರು ರಾಜ ರವಿವರ್ಮನ ಪತ್ನಿ ನಾಗನ ಪ್ರಸಾದವನ್ನು ಅರ್ಧಂಬರ್ದ ಪ್ರಸಾದವನ್ನು ಸ್ವೀಕರಿಸಿ ನಾಗ ದೋಷವುಳ್ಳ ನಾಗರಹಾವಿನ ಹಾಗಿರುವ ಮಗು ಜನಿಸಿದ್ದನ್ನು ತಿಳಿಸುತ್ತಾರೆ.
ಇದರ ಪರಿಹಾರಕ್ಕೆ ನಾಗಮಂಡಲವನ್ನು ನಡೆಸಿ ನಾಗಪಾತ್ರಿಗಳ ಹೇಳಿಕೆಯಂತೆ ನಾಗದೋಷವನ್ನು ನಿವಾರಿಸಿಕೊಂಡು ರಾಜನ ಪುತ್ರ ಪುನಃ ಮನುಷ್ಯ ರೂಪವನ್ನು ಪಡೆಯುವುದನ್ನು ನೈಜ ರೀತಿಯಾಗಿ ಬರುವಂತೆ ನಾಟಕದಲ್ಲಿ ತೋರಿಸಲಾಗಿದೆ.
ಇದರೊಂದಿಗೆ ಇಬ್ಬರು ಹಾವಾಡಿಗರು ಹಾವಿನ ರೂಪದಲ್ಲಿರುವ ರಾಜನ ಮಗನನ್ನು ಹಿಡಿಯಲು ಬರುವುದು, ಹಾವು ಬೃಹತ್ ಆಗಿ ಬೆಳೆದು ಹಾವಾಡಿಗರನ್ನು ಸಾಯಿಸುವುದನ್ನು ವಿಶೇಷ ಸನ್ನಿವೇಶದ ಮೂಲಕ ಪ್ರದರ್ಶಿಸಲಾಯಿತು. ನಾಟಕದಲ್ಲಿ ಆಚಾರ್ಯರ ಶಿವಾಲಯದಲ್ಲಿ ಇಬ್ಬರು ದಡ್ಡ ಶಿಷ್ಯಂದಿರು ಶಿವಾಲಯಕ್ಕೆ ಬರುವ ಭಕ್ತರನ್ನು ಗೋಳಾಡಿಸುವ ದೃಶ್ಯವನ್ನು ಹಾಸ್ಯಭರಿತವಾಗಿ ಪ್ರದರ್ಶಿಸಲಾಯಿತು.
ಇದರೊಂದಿಗೆ ನಾಟಕದ ಆರಂಭದಲ್ಲಿ ಸನಾತನ ಧರ್ಮ ಬೆಳೆದು ಬಂದ ಬಗೆ, ಚಂದ್ರಯಾನದ ಘಟನೆಗಳನ್ನು ವಾಸ್ತವ ರೀತಿಯಲ್ಲಿ ತೋರಿಸಲಾಯಿತು. ಪುಟಾಣಿಗಳನ್ನು ಅದ್ಭುತ ನೃತ್ಯ ಪ್ರದರ್ಶನವನ್ನು ಮಾಡಿ ನೋಡುಗರ ಗಮನಸೆಳೆದರು.
ನಾಟಕದಲ್ಲಿ ಆರ್.ಡಿ.ಮಹೇಂದ್ರ (ಶಿವಾಲಯದ ಆಚಾರ್ಯ), ಜಗದೀಶ್ಚಂದ್ರ, ಮಹೇಶ್ಚಂದ್ರ (ಹಾವಾಡಿಗರು, ನಾಗಪಾತ್ರಿ), ರವೀಂದ್ರಾಚಾರ್, ಅರುಣ್‌ಭಂಡಾರಿ (ದಂಡ ಪಿಂಡ ಶಿಷ್ಯಂದಿರು), ಪ್ರಕಾಶ್ ಬನ್ನೂರು (ರಾಜ ರವಿವರ್ಮ), ಚಂದನಾ ಪ್ರಸಾದ್ (ರಾಣಿ ಸುಲೋಚನ), ಕಿರಣ್‌ಕುಮಾರ್ (ರಾಜನ ಮಗ ನಾಗವರ್ಮ), ಮಂಜು ಹೊಳೆಬಾಗಿಲು, ಸಚಿನ್‌ಕುಮಾರ್ (ಶಿವಾಲಯದ ಭಕ್ತರು), ಭೂಮಿಕಾ, ಇಂದುಜ, ಇಶಾನ್ (ಆಚಾರ್ಯನ ಮಕ್ಕಳು), ನಿಶ್ಚಿತ, ಶ್ರೀಗೌರಿ (ನೃತ್ಯಗಾರ್ತಿ), ಭುವನ (ಸೂಲಗಿತ್ತಿ), ಆನಂದ್ (ಕಾವಲುಗಾರ) ಪಾತ್ರ ನಿರ್ವಹಿಸಿದರು.
ಆರಂಭಿಕ ಸ್ವಾಗತ ನೃತ್ಯದಲ್ಲಿ ಪ್ರಜ್ಞಾ ಸತೀಶ್, ಇಂದುಜಾ, ಸಮೃದ್ಧಿಭಟ್, ಸಾನಿಧ್ಯ ಭಟ್, ಸನ್ಮಿತ, ಸ್ಫೂರ್ತಿ, ಹರ್ಷಿತಾ, ಕೃತಿಕಾ, ಪ್ರತೀಕ್, ಸಾತ್ವಿಕ್‌ಭಟ್ ಭಾಗವಹಿಸಿದ್ದರು. ಶಿಕ್ಷಕಿ ಕಲಾವತಿ ಸತೀಶ್ ನೃತ್ಯ ನಿರ್ದೇಶನ ಮಾಡಿದ್ದರು.