Newsಚಿಕ್ಕಮಗಳೂರು

ಮಾನವನ ವ್ಯಕ್ತಿತ್ವಕ್ಕೆ ಯಾರಿಂದಲೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದು ಅಸಾಧ್ಯವಾದ ವಿಚಾರವಾಗಿದೆ.

ಮಾನವನ ವ್ಯಕ್ತಿತ್ವಕ್ಕೆ ಯಾರಿಂದಲೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದು ಅಸಾಧ್ಯವಾದ ವಿಚಾರವಾಗಿದೆ.


(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಬಾಳೆಹೊನ್ನೂರು, ಮಾನವನ ವ್ಯಕ್ತಿತ್ವಕ್ಕೆ ಯಾರಿಂದಲೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದು ಅಸಾಧ್ಯವಾದ ವಿಚಾರವಾಗಿದೆ ಎಂದು ಜೇಸಿಐ ಸ್ಥಾಪಕ ಅಧ್ಯಕ್ಷ ಸೈಯ್ಯದ್ ಫಾಜಿಲ್ ಹುಸೇನ್ ಹೇಳಿದರು. ಪಟ್ಟಣದ ಜೇಸಿ ಭವನದಲ್ಲಿ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆಯು ಸೋಮವಾರ ಆಯೋಜಿಸಿದ್ದ ಜೇಸಿ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಒಂದೊಂದು ವಿಶಿಷ್ಟವಾದ ವ್ಯಕ್ತಿತ್ವಗಳಿದ್ದು, ಅವುಗಳಿಗೆ ಅದರದ್ದೇ ಆದ ಮೌಲ್ಯಗಳು ಇರುತ್ತವೆ. ಅದಕ್ಕೆ ಯಾರಿಂದಲೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಸ್ವತಃ ಅವರುಗಳೇ ಅವರ ಮೌಲ್ಯವನ್ನು ನಿರ್ಧರಿಸಿಕೊಳ್ಳಬೇಕಿದೆ. ಜೇಸಿ ಸಂಸ್ಥೆಯು ಯುವಜನರಲ್ಲಿ ವ್ಯಕ್ತಿತ್ವ ವಿಕಸನವನ್ನು ಮೂಡಿಸಲಿದ್ದು, ಜೇಸಿ ಸಂಸ್ಥೆಯಲ್ಲಿ ಸದಸ್ಯರಾಗುವ ಮೂಲಕ ಸದಸ್ಯರುಗಳು ಸಕ್ರಿಯವಾಗಿ ವಿವಿಧ ತರಬೇತಿಗಳನ್ನು ಪಡೆದು ತಮ್ಮ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದರು.
ಜೇಸಿಐ ಪೂರ್ವಾಧ್ಯಕ್ಷ ಸತೀಶ್ ಅರಳೀಕೊಪ್ಪ ಮಾತನಾಡಿ, ಬಾಳೆಹೊನ್ನೂರು ಪಟ್ಟಣದಲ್ಲಿ 2002ರಲ್ಲಿ ಆರಂಭಗೊಂಡ ಜೇಸಿ ಸಂಸ್ಥೆಯು ತನ್ನದೇ ಆದ ವಿಶಿಷ್ಟ ಕಾರ್ಯ ಚಟುವಟಿಕೆಗಳ ಮೂಲಕ ಸಮಾಜದಲ್ಲಿ ಗಮನಸೆಳೆದಿದ್ದು, ಯುವಜನರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಣೆ ನೀಡುತ್ತಿದೆ ಎಂದರು.
ಜೇಸಿ ಅಧ್ಯಕ್ಷ ಎನ್.ಶಶಿಧರ್ ಮಾತನಾಡಿ, ಜೇಸಿ ಸಂಸ್ಥೆಯು ಯುವಜನರ ವ್ಯಕ್ತಿತ್ವ ವಿಕಸನದೊಂದಿಗೆ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸಮಾಜದಲ್ಲಿ ಆರೋಗ್ಯ, ಶಿಕ್ಷಣ, ಕ್ರೀಡೆ, ಕಲೆ, ಸಂಸ್ಕೃತಿ, ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರದಲ್ಲಿಯೂ ನಿರಂತರವಾಗಿ ತೊಡಗಿಕೊಂಡು ಕಾರ್ಯಕ್ರಮ ಮಾಡುವ ಮೂಲಕ ಸಕ್ರಿಯವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ.


ಜೇಸಿ ಸಪ್ತಾಹದ ಅಂಗವಾಗಿ ಸೆ.9ರಿಂದ 15ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಒಂದು ವಾರಗಳ ಕಾಲ ಎಲ್ಲಾ ಕ್ಷೇತ್ರದಲ್ಲೂ ಕಾರ್ಯಕ್ರಮಗಳನ್ನು ಆಯೋಜಿಸಿ ಆರೋಗ್ಯ ತಪಾಸಣೆ, ಸಾಧಕರಿಗೆ ಸನ್ಮಾನ, ಸಾಮಾಜಿಕ ಕಾರ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಜೇಸಿ ಸಪ್ತಾಹದ ಅಂಗವಾಗಿ ಸಂಗಮೇಶ್ವರಪೇಟೆಯ ಪ್ರೀತಾಂಜಲಿ ವೃದ್ಧಾಶ್ರಮಕ್ಕೆ ಜೇಸಿ ವತಿಯಿಂದ ಮಧ್ಯಾಹ್ನದ ಊಟ, ಹಣ್ಣು ಹಾಗೂ ಸಿಹಿ ವಿತರಿಸಲಾಯಿತು.
ಜೇಸಿಐ ಪೂರ್ವಾಧ್ಯಕ್ಷರಾದ ಸುಧಾಕರ್, ಬಿ.ಎಚ್.ಮನುಕುಮಾರ್, ರಿಚರ್ಡ್ ಮಥಾಯಿಸ್, ಕಾರ್ಯದರ್ಶಿ ಎಚ್.ಟಿ.ಶೃಜಿತ್, ಸದಸ್ಯರಾದ ಕೆ.ಪ್ರಶಾಂತ್‌ಕುಮಾರ್, ಕೆ.ಪ್ರಸಾದ್, ಶಾಹಿದ್, ಚೇತನ್‌ಕುಮಾರ್, ಸುಜಿತ್, ಸುನೀಲ್, ಭರತ್‌ರಾಜ್, ಶರತ್ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *

Scan the code