ಮಕ್ಕಳ ದೈಹಿಕ ಕ್ಷಮತೆ ಹಾಗೂ ಕ್ರಿಯಾಶೀಲತೆಗಳಿಗೆ ಪೌಷ್ಟಿಕ ಆಹಾರಗಳು ಅಗತ್ಯ, ಮುಖ್ಯ ಶಿಕ್ಷಕ ಸಂಜೀವಪ್ಪ
(KOLARA): ಬಂಗಾರಪೇಟೆ :ಮಕ್ಕಳ ದೈಹಿಕ ಕ್ಷಮತೆ ಹಾಗೂ ಕ್ರಿಯಾಶೀಲತೆಗಳಿಗೆ ಪೌಷ್ಟಿಕ ಆಹಾರಗಳು ಅಗತ್ಯವಿದ್ದು, ಮಕ್ಕಳು ಅಪೌಷ್ಟಿಕತೆಯಿಂದ ಬಳಲದಂತೆ ಪೌಷ್ಟಿಕ ಆಹಾರಗಳನ್ನು ನೀಡುವುದರೊಂದಿಗೆ ಅದರ ಮಹತ್ವ ಕುರಿತು ಅರಿವು ಮೂಡಿಸಬೇಕಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ಸಂಜೀವಪ್ಪ ಹೇಳಿದರು.
ತಾಲೂಕಿನ ಹುಲಿಬೆಲೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪೋಷಣ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಹಿಂದೆ ಸಿರಿಧಾನ್ಯಗಳು, ತರಕಾರಿಗಳನ್ನು ಹೆಚ್ಚಾಗಿ ಬಳಸುವ ಮೂಲಕ ನಮ್ಮ ಹಿರಿಯರು ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಂಡಿದ್ದರು. ಹಳ್ಳಿಗಳಲ್ಲಿ ಅಕ್ಕಿಯನ್ನು ನೋಡುತ್ತಿದ್ದುದೇ ಅಪರೂಪವಾಗಿತ್ತು. ಆದರೆ ಈಗ ಅಕ್ಕಿ,ಸಕ್ಕರೆ ಮೊದಲಾದ ಪದಾರ್ಥಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ ಎಂದರು.
ಮಕ್ಕಳು ತರಕಾರಿಗಳನ್ನು ತೆಗೆದಿಟ್ಟು ಊಟ ಮಾಡುತ್ತಿರುವ ಬೆಳವಣಿಗೆ ಹೆಚ್ಚಾಗುತ್ತಿದೆ. ಸಜ್ಜೆ, ನವಣೆ, ರಾಗಿ, ಅರ್ಕ ಮೊದಲಾದ ಧಾನ್ಯಗಳ ಬಳಕೆ ಹೆಚ್ಚಾಗಬೇಕಿದೆ. ಮಕ್ಕಳು ಹಸಿವಿನಿಂದ ಬಳಲಬಾರದು ಎಂದು ಸರ್ಕಾರ ಮಧ್ಯಾಹ್ನದ ಬಿಸಿಯೂಟ ನೀಡುತ್ತಿದೆ. ಮಕ್ಕಳು ಪೌಷ್ಟಿಕಾಂಶ ಆಹಾರಗಳನ್ನು ಸೇವಿಸಬೇಕು. ಆಹಾರ ಪದಾರ್ಥಗಳನ್ನು ವ್ಯರ್ಥ ಮಾಡಬಾರದು ಎಂದು ಹೇಳಿದರು.
ಹುಲಿಬೆಲೆ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಮಂಜುಳಾ ರವರು ಮಾತನಾಡಿ,ಈ ಕಾರ್ಯಕ್ರಮದ ಉದ್ದೇಶ ಪೌಷ್ಟಿಕ ಆಹಾರದ ಬಗ್ಗೆ ಜನರಿಗೆ ಅರಿವು ಮೂಡಿಸುವುದಾಗಿದೆ. ಪೌಷ್ಟಿಕ ಆಹಾರ ನಮ್ಮ ದೈನಂದಿನ ಜೀವನದಲ್ಲಿ ತುಂಬಾ ಮುಖ್ಯವಾಗಿದೆ.ಆರೋಗ್ಯಕರ ಜೀವನ ನಡೆಸಲು ಇಂತಹ ಆಹಾರ ತುಂಬಾ ಅವಶ್ಯಕವಾಗಿದೆ.ಇಂತಹ ಆರೋಗ್ಯಕರ ಜೀವನ ನಡೆಸಲು ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದಲೇ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಇಲ್ಲಿ ಪಡೆದ ಮಾಹಿತಿ ತಿಳಿದುಕೊಂಡು ತಮ್ಮ ಜೀವನಕ್ಕೆ ಬೇಕಾದ ಆಹಾರ ಪದ್ಧತಿಯನ್ನು ಬದಲಾವಣೆ ಮಾಡಿಕೊಂಡು ಪೌಷ್ಟಿಕ ಆಹಾರ ಸೇವನೆ ಮಾಡಿ ಎಂದರು.
ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳು ಪೌಷ್ಟಿಕ ತರಕಾರಿ ಹಾಗೂ ಧಾನ್ಯಗಳ ಮೂಲಕ ವಿವಿಧ ಚಿತ್ತಾರಗಳನ್ನು ರಚಿಸಿ, ಪೌಷ್ಟಿಕ ಆಹಾರಗಳ ಬಗ್ಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಲಕ್ಷ್ಮೀನಾರಾಯಣ, ಸದಸ್ಯರದ ಭಾಗ್ಯಲಕ್ಷ್ಮಿ, ಕ್ಲಸ್ಟರ್ ಸಿ ಆರ್ ಪಿ ವಿಜಿ ಕುಮಾರ್, ಶಿಕ್ಷಕರಾದ ಸತೀಶ್, ಚಲಪತಿ, ಸಿಮ್ರಾನ್,ಶ್ವೇತಾ, ಅಡುಗೆ ಸಹಾಯಕರಾದ, ಲಲಿತಮ್ಮ,ಶಾರದಮ್ಮ,ಸಾವಿತ್ರಮ್ಮ ಇದ್ದರು.
ವರದಿ: ವಿಷ್ಣು ಕೋಲಾರ