ಮನೆಯಲ್ಲೂ ಮಕ್ಕಳು ಇಂಗ್ಲಿಷ್ ಮಾತನಾಡುವಂತೆ ಪೋಷಕರು ಒತ್ತಡ ಹಾಕುತ್ತಾರೆ. ಇಂಥ ಮನಸ್ಥಿತಿ ಬದಲಾಗಬೇಕಿದೆ.
(SHIVAMOGA): ಸಾಗರ ಮನೆಯಲ್ಲೂ ಮಕ್ಕಳು ಇಂಗ್ಲಿಷ್ ಮಾತನಾಡುವಂತೆ ಪೋಷಕರು ಒತ್ತಡ ಹಾಕುತ್ತಾರೆ. ಇಂಥ ಮನಸ್ಥಿತಿ ಬದಲಾಗಿ, ಕನ್ನಡ ಭಾಷೆ ಬೆಳೆಸಲು ನಮ್ಮ ಜವಾಬ್ದಾರಿ ಏನೆಂಬುದನ್ನು ನಾವೆಲ್ಲರೂ ಅರಿತುಕೊಳ್ಳಬೇಕು ಎಂದು ಪ್ರಧಾನ ಹಿರಿಯ ವ್ಯವಹಾರ ನ್ಯಾಯಾಧೀಶರಾದ ಎಸ್. ನಟರಾಜ್ ತಿಳಿಸಿದರು.
ತಾಲೂಕಿನ ಕೊಪ್ಪ-ಮಳ್ಳ ಗ್ರಾಮದಲ್ಲಿ ಬುಧವಾರ ವಕೀಲರ ಸಂಘ, ತಾಲೂಕು ಕಾನೂನು ಸೇವಾ ಸಮಿತಿ, ಕೊಪ್ಪ ಕಾಗೋಡುದಿಂಬ ಮಳ್ಳ ನಾರಗೋಡು ಗ್ರಾಮಸ್ಥರ ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಮತ್ತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬೆಂಗಳೂರಿನoತಹ ದೊಡ್ಡ ನಗರಗಳಲ್ಲಿ ಕನ್ನಡ ಮಾತನಾಡುವುದೇ ತಪ್ಪು ಎಂಬoತೆ ಬಿಂಬಿಸಲಾಗುತ್ತದೆ. ಅದೇ ಪದ್ಧತಿಯನ್ನು ಹಲವು ಶಾಲೆಯಲ್ಲೂ ಅನುಸರಿಸಲಾಗುತ್ತಿದ್ದು, ಕನ್ನಡದಲ್ಲಿ ಮಾತನಾಡಿದರೆ ದಂಡ ಹಾಕುವ ಕೆಟ್ಟ ಸಂಸ್ಕೃತಿ ಬೆಳೆಯುತ್ತಿದೆ. ಇದನ್ನು ನಾವೆಲ್ಲರೂ ಖಂಡಿಸಬೇಕು. ಆಂಗ್ಲ ಭಾಷೆಯನ್ನು ವ್ಯವಹಾರಕ್ಕೆ ಸೀಮಿತಗೊಳಿಸಿ, ಮಕ್ಕಳಿಗೆ ಕನ್ನಡ ಭಾಷೆ ಉಳಿಸಿ, ಬೆಳೆಸುವಂತೆ ಪ್ರೋತ್ಸಾಹಿಸಬೇಕು. ಜತೆಯಲ್ಲಿ ಪ್ರತಿಯೊಬ್ಬರೂ ಕಾನೂನಿನ ಅರಿವು ಹೊಂದಿರಬೇಕು ಎಂದರು.
ಹಿರಿಯ ನ್ಯಾಯವಾದ ಎಂ.ಎಸ್.ಗೌಡರ್ ಮಾತನಾಡಿ, ಪ್ರಸ್ತುತ ತಾಲೂಕಿನ ಕೆಲವು ಭಾಗಗಳಲ್ಲಿ ಬಹಿಷ್ಕಾರ ಪದ್ಧತಿ ಜೀವಂತವಾಗಿದೆ. ಇದು ಒಂದರ್ಥದ ಸಿವಿಲ್ ಡೆತ್ ಇದ್ದಂತೆ. ಮಲೆನಾಡಿನ ಹಳ್ಳಿಗಳಲ್ಲಿ ಇಂದಿಗೂ ಕೊಟ್ಟು ಕೊಡುವ ಪದ್ದತಿ ಜಾರಿಯಲ್ಲಿರುವುದು ನಾಗರೀಕ ಸಮಾಜ ನಾಚಿಕೆಪಡುವಂಥ ಸಂಗತಿ. ಇದು ನಿಲ್ಲಬೇಕು. ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದವರು ಕಾನೂನು ಸೇವಾ ಸಮಿತಿಗೆ ದೂರು ನೀಡಿದರೆ ನ್ಯಾಯ ದೊರಕಿಸಿಕೊಡುವ ಪ್ರಯತ್ನ ನಡೆಸಲಾಗುತ್ತದೆ ಎಂದರು.
ವೇದಿಕೆಯಲ್ಲಿ ಪ್ರಧಾನ ವ್ಯವಹಾರ ನ್ಯಾಯಾಧೀಶ ಎಂ.ವಿ. ಮಾದೇಶ್, ಸರಕಾರಿ ಅಭಿಯೋಜಕ ಎಚ್.ಎಸ್. ಚಂದ್ರಶೇಖರ್, ವಕೀಲರ ಸಂಘದ ಅಧ್ಯಕ್ಷ ಈ. ನಾಗರಾಜ್, ನ್ಯಾಯವಾದಿ ಕೆ.ವಿ.ಪ್ರವೀಣ್, ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ.ಸ್ವಾಮಿ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಷ್ಪಾಕ್ ಅಹ್ಮದ್ ಹಾಜರಿದ್ದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಹಾಗೂ ಮದ್ಯ ಸೇವನೆ ನಿಲ್ಲಿಸಿದವರನ್ನು ಸನ್ಮಾನಿಸಲಾಯಿತು. ಕುಮಾರಸ್ವಾಮಿ ಕೊಪ್ಪ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ರಾಜೇಂದ್ರ ಆವಿನಹಳ್ಳಿ ನಿರೂಪಿಸಿದರು.
ವರದಿ: ರಾಘವೇಂದ್ರ ತಾಳಗುಪ್ಪ