ರಿಸರ್ಚ್ ಡಾಟ್ ಕಾಂ ವಿಶ್ವವಿಜ್ಞಾನಿಗಳ ಪಟ್ಟಿಯಲ್ಲಿ ಕುವೆಂಪು ವಿವಿಯ ಪ್ರಾಧ್ಯಾಪಕ ಗಿರೀಶ್ ಬಿ. ಜೆ.
(SHIVAMOGA): ಶಂಕರಘಟ್ಟ:ಅಂತರಾಷ್ಟ್ರೀಯ ಮನ್ನಣೆಯ ರಿಸರ್ಚ್ ಡಾಟ್ ಕಾಂ ವೆಬ್ತಾಣವು ಬಿಡುಗಡೆಗೊಳಿಸಿರುವ ಉತ್ತಮ ಸಂಶೋಧಕರ ವರದಿಯಲ್ಲಿ ಕುವೆಂಪು ವಿವಿಯ ಪ್ರಾಧ್ಯಾಪಕ ಡಾ. ಬಿ ಜೆ ಗಿರೀಶ್ ಭಾರತದಲ್ಲಿಯೇ ಅಗ್ರ ಮೂರನೇ ಸ್ಥಾನ ಹಾಗೂ ಜಾಗತಿಕವಾಗಿ 671 ಸ್ಥಾನ ಪಡೆದಿದ್ದಾರೆ.
ರಿಸಚ್ ಡಾಟ್ ಕಾಂ ಎಂಬ ಅಂತಾರಾಷ್ಟ್ರೀಯ ಸಂಸ್ಥೆಯು ಸಂಶೋಧನೆಗಳು ಮತ್ತು ವಿಜ್ಞಾನಿಗಳ ಕುರಿತಾಗಿ ಮಾಹಿತಿ ಪ್ರಕಟಿಸುವ ಖ್ಯಾತ ತಾಣವಾಗಿದೆ. ಸಂಸ್ಥೆಯು ಇತ್ತೀಚೆಗೆ ಪ್ರಕಟಿಸಿರುವ ವರದಿಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ಗಣಿತ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಬಿ. ಜೆ. ಗಿರೀಶ್ ಥರ್ಮೊಡೈನಾಮಿಕ್ಸ್, ಮೆಕ್ಯಾನಿಕಲ್ ಏರೋಸ್ಪೇಸ್ ಎಂಜಿನಿಯರಿoಗ್ ವಿಭಾಗದಲ್ಲಿ ಭಾರತದ ಉತ್ತಮ ಸಂಶೋಧಕರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಇವರು 240ಕ್ಕೂ ಅಧಿಕ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದು, 9೦೦೦ಕ್ಕೂ ಅಧಿಕ ಬಾರಿ ಅವು ಸಂಶೋಧಕರುಗಳಿoದ ಮರುಉಲ್ಲೇಖ, ಪರಾಮರ್ಶನ ಕಂಡಿವೆ. ಒಟ್ಟು ಡಿ-ಇಂಡೆಕ್ಸ್ನಲ್ಲಿ 55 ಅಂಕಗಳನ್ನು ಗಳಿಸಿದ್ದಾರೆ. ಜಾಗತಿಕವಾಗಿ ಕಳೆದ ವರ್ಷ 942ನೇ ಸ್ಥಾನದಲ್ಲಿದ್ದ ಅವರು ಈ ಬಾರಿ 671ನೇ ಸ್ಥಾನ ಪಡೆದಿದ್ದಾರೆ.
ಥರ್ಮೊಡೈನಾಮಿಕ್ಸ್, ಮೆಕ್ಯಾನಿಕಲ್ ಏರೋಸ್ಪೇಸ್ ಎಂಜಿನಿಯರಿoಗ್, ಶಾಖ ಪ್ರಸರಣೆ ವಿಷಯ ಮತ್ತು ಉಪವಿಷಯಗಳಲ್ಲಿನ ಅವರ ಸಂಶೋಧನಾ ಪ್ರಖರತೆಯನ್ನು ಗಮನಿಸಿ ಈ ಸ್ಥಾನವನ್ನು ನೀಡಿರುವುದಾಗಿ ರಿಸರ್ಚ್ ಡಾಟ್ ಕಾಂ ತಿಳಿಸಿದೆ. ಸಂಸ್ಥೆಯು ಸಂಶೋಧನೆಯ ಗುಣಮಟ್ಟ, ಕ್ಷೇತ್ರವೊಂದರಲ್ಲಿ ಸಂಶೋಧಕರು ಪ್ರಕಟಿಸಿರುವ ಲೇಖನಗಳು ಮತ್ತು ಪರಾಮರ್ಶನವನ್ನು ಗಮನಿಸಿ ರ್ಯಾಂಕಿoಗ್ ಹಾಗೂ ಹೊಸಮಾದರಿಯ ಡಿ-ಇಂಡೆಕ್ಸ್ ನೀಡುತ್ತದೆ. ಈ ವರದಿಯಲ್ಲಿ ಐಐಟಿ, ಐಐಎಂ, ತಾಂತ್ರಿಕ ವಿವಿಗಳ ಸಂಶೋಧಕರ ಹೆಸರುಗಳಿದ್ದು, ಜೊತೆಗೆ ಕುವೆಂಪು ವಿವಿಯ ಸಂಶೋಧಕ ಸೇರಿದ್ದಾರೆ.
ಕಳೆದ ಹಲವು ವರ್ಷಗಳಿಂದ ವಿವಿಯು ಸಂಶೋಧನೆಯಲ್ಲಿ ಉತ್ತಮ ಸಾಧನೆಗೈಯುತ್ತಿದ್ದು, ಡಾ. ಗಿರೀಶ್ ಬಿ ಜೆ ಸಾಧನೆ ಹೆಮ್ಮೆ ತಂದಿದೆ ಎಂದು ವಿವಿಯ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅಭಿನಂದಿಸಿದ್ದಾರೆ. ಇದೇ ಪಟ್ಟಿಯಲ್ಲಿ ಕರ್ನಾಟಕದ ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧಕರಾದ ಡಾ. ರಂಜನ್ ಗಂಗೂಲಿ, ಡಾ. ಶ್ರೀನಿವಾಸನ್ ಗೋಪಾಲಕೃಷ್ಣ ಗುರುತಿಸಿಕೊಂಡಿದ್ದಾರೆ.