ಫೆಂಗಲ್ ಚಂಡಮಾರುತದಿಂದ ಕೆಸರು ಗದ್ದೆದ ರಸ್ತೆಯಲ್ಲಿ ಪೈರು ನಾಟಿ ಮಾಡಿ ಪ್ರತಿಭಟನೆ.
(KOLARA): ಬಂಗಾರಪೇಟೆ:ತಾಲ್ಲೂಕಿನ ಎ ಮತ್ತು ಬಿ ಹೊಸಮನೆಗಳು ಹಾಗೂ ತಂಗೇಡಿಮಿಟ್ಟೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಫೆಂಜಲ್ ಚಂಡಮಾರುತದಿಂದ ಕೆಸರು ಗದ್ದೆಯಂತಾದ ರಸ್ತೆಯಲ್ಲಿ ಪೈರು ನಾಟಿ ಮಾಡುವ ಮೂಲಕ ಪ್ರತಿಭಟನೆ ಮಾಡಿ ರಸ್ತೆಯನ್ನು ಅಭಿವೃದ್ದಿಪಡಿಸಲು ಒತ್ತಾಯಿಸಿದರು.
ತಾಲ್ಲೂಕಿನ ಕಾಮಸಮುದ್ರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಎ ಹೊಸಮನೆಗಳು, ಬಿ ಹೊಸಮನೆಗಳು ಮತ್ತು ತಂಗಾಡಿಮಿಟ್ಟೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅವ್ಯವಸ್ಥೆಯಿಂದ ಕೂಡಿದ್ದು, ಮಳೆ ಬಂದರೆ ಈ ಮಾರ್ಗದ ರಸ್ತೆಯು ಕೆಸರು ಗದ್ದೆಯಂತಾಗಿ ಜನ ಹಾಗೂ ವಾಹನ ಸವಾರರು ಪರದಾಡುವಂತಾಗಿದೆ.,ಪ್ರತಿ ಚುನಾವಣೆ ಸಮಯದಲ್ಲಿ ರಸ್ತೆಯನ್ನು ಅಭಿವೃದ್ದಿಪಡಿಸುತ್ತೇವೆ ಮತ್ತು ಗ್ರಾಮಗಳ ಅಭಿವೃದ್ದಿ ಮಾಡುತ್ತೇವೆ ಎಂದು ಗ್ರಾಮಗಳಿಗೆ ಬರುವಂತಹ ಜನಪ್ರತಿನಿಧಿಗಳು ಹಾಗೂ ಮುಖಂಡರು ಮತ ವನ್ನು ಪಡೆದ ನಂತರ ನಾಪತ್ತೆಯಾಗುತ್ತಾರೆ ಹೊರೆತು ಕಳೆದ 25 ವರ್ಷಗಳಿಂದ ಯತಾವುದೇ ಅಭಿವೃದ್ದಿ ಮಾಡಿಲ್ಲ. ಇದರ ಜೊತೆಗೆ ಪಂಚಾಯಿತಿ ಮೂಲಕ ತಿಂಗಳಿಗೊಮ್ಮೆ ರಸ್ತೆಯ ಎರಡೂ ಬದಿಯ ಗಿಡಗಂಟೆಗಳನ್ನು ತೆರವು ಮಾಡಿ ನರೇಗಾ ಯೋಜನೆಯಲ್ಲಿ ಎನ್.ಎಂ.ಆರ್ ತೆಗೆದು ಹೋಗುತ್ತಾರೆ ಹೊರೆತೂ ಪಂಚಾಯಿತಿ ಮೂಲಕ ಸಹ ರಸ್ತೆಯನ್ನು ಅಭಿವೃದ್ದಿ ಮಾಡಿಲ್ಲ ಇದರಿಂದಾಗಿ ನಾಲ್ಕೈದು ಗ್ರಾಮಗಳ ಜನರು ಸಂಚರಿಸಲು ಸಮಸ್ಯೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಕೆಸರುಗದ್ದೆಯನ್ನೇ ಎ ಹೊಸಮನೆಗಳು, ಬಿ ಹೊಸಮನೆಗಳು ಮತ್ತು ತಂಗಾಡಿಮಿಟ್ಟೆ ಗ್ರಾಮಗಳ ನೂರಾರು ಮಂದಿ ಆಶ್ರಯಿಸಿದ್ದಾರೆ. ಇದೇ ಮಾರ್ಗದಲ್ಲಿ ಪ್ರತಿದಿನ ಮೂಗನಹಳ್ಳಿ ಗ್ರಾಮದ ಹಾಲಿನ ಡೇರಿಗೆ ಉತ್ಪಾದಕರು ಹಾಲು ತೆಗೆದುಕೊಂಡು ಹೋಗುತ್ತಾರೆ. ಇನ್ನು ಶಾಲೆಗೆ ಹೋಗುವಂತಹ ಮಕ್ಕಳು ಕೆಸರುಗದ್ದೆಯ ರಸ್ತೆಯಲ್ಲಿಯೇ ನಡೆದು ಶಾಲೆಗೆ ಹೋಗಬೇಕು. ಕೆಲವು ಮಕ್ಕಳು ಶಾಲೆಗೆ ಹೋಗಲು ಹಿಂದೇಟು ಹಾಕುತ್ತಾರೆ. ಇದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗಿದ್ದು, ಯಾವೊಬ್ಬ ಗ್ರಾಮ ಪಂಚಾಯಿತಿ ಸದಸ್ಯರು ಸಹ ರಸ್ತೆ ಅಭಿವೃದ್ದಿಗೆ ಮುಂದಾಗಿಲ್ಲ ಎಂದು ಪ್ರತಿಭಟನಾಕಾರರು ಕಿಡಿ ಕಾರಿದರು.
ಬೇಸಿಗೆ ಕಾಲದಲ್ಲಿ ರಸ್ತೆಯು ಗುಂಡಿಮಯವಾದರೆ ಮಳೆಗಾಲದಲ್ಲಿ ಕೆಸರು ಗದ್ದೆಯಂತಾಗುತ್ತದೆ. ಪ್ರತಿನಿತ್ಯ ಈ ರಸ್ತೆಯಲ್ಲಿ ಸಂಚರಿಸುವಂತಹ ಬೈಕ್ ಸವಾರರು ಹಲವು ಬಾರಿ ಜಾರಿ ಬಿದ್ದು ಕೈಕಾಲುಗಳಿಗೆ ಗಾಯ ಮಾಡಿಕೊಂಡಿರುವ ಘಟನೆಗಳು ನಡೆದಿವೆ. ಈ ಮಾರ್ಗದ ರಸ್ತೆಯನ್ನು ಅಭಿವೃದ್ದಿಪಡಿಸುವಂತೆ ಹಲವು ಬಾರಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಆದರೆ, ಯಾವುದೇ ಮನವಿ ಪ್ರಯೋಜನವಾಗಿಲ್ಲ. ಕೆಲವು ಅಧಿಕಾರಿಗಳು ಕಾಟಾಚಾರಕ್ಕೆ ಬಂದು ಸ್ಥಳ ಪರಿಶೀಲನೆ ಮಾಡಿ ಹೋಗಿದ್ದಾರೆ ಹೊರೆತು ರಸ್ತೆ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಮುಂದಾಗಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಈ ಮಾರ್ಗದ ರಸ್ತೆ ಒತ್ತುವರಿಯಾಗಿದ್ದು, ಅದರಿಂದಾಗಿ ರಸ್ತೆ ಅಭಿವೃದಿಪಡಿಸಲು ಆಗುತ್ತಿಲ್ಲ ಎಂದು ಅಧಿಕಾರಿಗಳು ಸಬೂಬು ಹೇಳುತ್ತಾರೆ. ಅದು ಬಿಟ್ಟು ಒತ್ತುವರಿಯಾಗಿರುವ ರಸ್ತೆ ತೆರವಿಗೆ ಯಾರೂ ಮುಂದಾಗುತ್ತಿಲ್ಲ. ಆದ್ದರಿಂದ ರಸ್ತೆ ಅಭಿವೃದ್ದಿಗಾಗಿ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಮತ್ತು ಸಂಸದ ಮಲ್ಲೇಶ್ ಬಾಬುರನ್ನು ಸಹ ಒತ್ತಾಯಿಸಲಾಗಿದೆ. ಸಂಸದರು ಜಿಲ್ಲಾಧಿಕಾರಿಗಳನ್ನು ಕೇಳಿ ಎಂಬ ಉತ್ತರ ನೀಡುತ್ತಿದ್ದಾರೆ. ಆದ್ದರಿಂದ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ, ರಸ್ತೆ ದುರಸ್ತಿಗೊಳಿಸಬೇಕು ಇಲ್ಲವಾದರೆ ಮುಂಬರುವಂತಹ ಜಿಲ್ಲಾ ಮತ್ತು ತಾಲ್ಲೂಕು .ಪಂಚಾಯಿತಿಯ ಚುನಾವಣೆಗಳಲ್ಲಿ ಮತದಾನವನ್ನು ಬಹಿಷ್ಕರಿಸುತ್ತೇವೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಶಾಸಕ ಮತ್ತು ಸಂಸದರ ವಿರುದ್ಧ ಘೋಷಣೆಗಳನ್ನು ಕೂಗುವುದರ ಮೂಲಕ ರಸ್ತೆಯಲ್ಲಿ ಪೈರನ್ನು ನಾಟಿ ಮಾಡುವುದರ ಮೂಲಕ ಪ್ರತಿಭಟಿಸಿದರು.
ಈ ವೇಳೆ ಗ್ರಾಮಸ್ಥರಾದ ಗೋವಿಂದರಾಜುಲು, ಚಂದ್ರಮೂರ್ತಿ, ವಿಜಯಕುಮಾರ್, ಮಂಜುನಾಥ, ಪೆದ್ದಣ್ಣ, ನಾಗರಾಜ್, ವೆಂಕಟೇಶಪ್ಪ, ಶೇಖರ್, ಲಕ್ಷ್ಮಣ್, ವೆಂಕಟರಾಜ್, ಕಿಚ್ಚಣ್ಣ,ಹರೀಶ್ , ಹಾಜರಿದ್ದರು.
ವರದಿ: ವಿಷ್ಣು ಕೋಲಾರ