ರಾಜ್ಯದ ಹೆಸರಾಂತ ಎಲ್ ಬಿ ಕಾಲೇಜಿನಲ್ಲಿ ಇರುವ ಅವ್ಯವಸ್ಥೆ ವಿರುದ್ಧ ವಿದ್ಯಾರ್ಥಿಗಳಿಂದ ಪ್ರತಿಭಟನೆ.
(SHIVAMOGA): ಸಾಗರ- ಸೋರುವ ಮೇಲ್ಛಾವಣಿ, ಧೂಳು ತುಂಬಿದ ಕೊಠಡಿಯಲ್ಲಿ ಕಲಿಯಬೇಕು? ಎಲ್‌ಬಿ ಕಾಲೇಜು ಕಲಾ ವಿಭಾಗದವರ ಗೋಳನ್ನು ಆಡಳಿತ ಮಂಡಳಿ ಆಗ್ಲಿ ಯಾರು ಕೇಳುವವರಿಲ್ಲ. ಕಾಲೇಜಿನ ಬಿ.ಎ. ತರಗತಿಯ ಕೊಠಡಿಯಲ್ಲಿ ಸಾಕಷ್ಟು ಅವ್ಯವಸ್ಥೆ ಇದ್ದು, ಹಲವು ಬಾರಿ ಪ್ರಾಚಾರ್ಯರು, ಪ್ರಾಧ್ಯಾಪಕರ ಗಮನಸೆಳೆದಿದ್ದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಅವುಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಕಲಾವಿಭಾಗದ ವಿದ್ಯಾರ್ಥಿಗಳು ಶುಕ್ರವಾರ ದಿಡೀರ್ ಪ್ರತಿಭಟನೆ ನಡೆಸಿದ್ದಲ್ಲದೆ, ಆಡಳಿತ ಮಂಡಳಿ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇಷ್ಟಕ್ಕೆ ಸುಮ್ಮನಾಗದ ಕಲಾ ವಿಭಾಗದ ವಿದ್ಯಾರ್ಥಿಗಳು ಆಡಳಿತ ಮಂಡಳಿ ಪ್ರಮುಖರನ್ನು ತರಗತಿಗಳಿಗೆ ಕರೆದೊಯ್ದು, ಅಲ್ಲಿರುವ ಲೋಪಗಳನ್ನು ತೋರಿಸಿ ತರಾಟೆಗೆ ತೆಗೆದುಕೊಂಡರು. ಕಲಾ ವಿಭಾಗದ ಹಲವು ತರಗತಿಯಲ್ಲಿರುವ ತೊಂದರೆಗಳ ಕುರಿತು ಹತ್ತಾರು ಬಾರಿ ಪ್ರಾಚಾರ್ಯರು, ಆಡಳಿತ ಮಂಡಳಿ ಗಮನ ಸೆಳೆಯಲಾಗಿತ್ತು. ಇತರ ವಿಭಾಗದ ತರಗತಿಗಳಲ್ಲಿ ಗುಣಮಟ್ಟದ ಸೌಲಭ್ಯವಿದ್ದು, ಕಲಾ ವಿಭಾಗವನ್ನು ಕಡೆಗಣಿಸುತ್ತಿರುವುದು ಕಂಡುಬoದಿದೆ. ತರಗತಿಯಲ್ಲಿನ ಫ್ಯಾನ್ ಸರಿಯಿಲ್ಲದಿರುವುದು, ಸ್ವಿಚ್ ಮುಟ್ಟಿದರೆ ಶಾಕ್ ಹೊಡೆಯುವುದು, ಮೇಲ್ಛಾವಣಿ ಹಂಚು ಒಡೆದು ಹೋಗಿದ್ದು, ಮಳೆ ಬಂದರೆ ಸೋರುತ್ತದೆ. ಮುಖ್ಯವಾಗಿ ತರಗತಿಯಲ್ಲಿ ಧೂಳು ತುಂಬಿದ್ದು, ಸ್ವಚ್ಛತೆಯನ್ನೂ ಮಾಡುತ್ತಿಲ್ಲ. ಇಂಥ ಕೆಟ್ಟಸ್ಥಿತಿಯಲ್ಲಿ ಕಲಿಯಬೇಕಾದ ಅನಿವಾರ್ಯತೆಯಿದೆ ಎಂದು ವಿದ್ಯಾರ್ಥಿಗಳು ದೂರಿದರು.
ಆಡಳಿತ ಮಂಡಳಿ ಕೇಳಿದಷ್ಟು ಹಣವನ್ನು ಎಲ್ಲ ವಿದ್ಯಾರ್ಥಿಗಳಂತೆಯೇ ನಾವೂ ಕಟ್ಟಿದ್ದೇವೆ. ಆದರೂ ಉಳಿದವರಿಗೆ ಸಿಗುವ ಸೌಲಭ್ಯ ನಮಗ್ಯಾಕಿಲ್ಲ? ಕೂಡಲೇ ಕಲಾ ವಿಭಾಗದ ತರಗತಿಗಳಿಗೆ ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸಬೇಕು. ಇಲ್ಲವಾದಲ್ಲಿ ನಮ್ಮ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದರು.
ಆಡಳಿತ ಮಂಡಳಿ ಪರವಾಗಿ ಪ್ರಧಾನ ಕಾರ್ಯದರ್ಶಿ ಡಾ.ಎಚ್.ಎಂ.ಶಿವಕುಮಾರ್ ವಿದ್ಯಾರ್ಥಿಗಳ ಅಹವಾಲು ಸ್ವೀಕರಿಸಿ ಸೋಮವಾರದೊಳಗೆ ಅಗತ್ಯ ಸೌಲಭ್ಯ ಒದಗಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಕಲಾವಿಭಾಗದ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ