Newsಚಿಕ್ಕಮಗಳೂರುಮಲೆನಾಡು

ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಿ.

ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಿ.


(CHIKKAMAGALURU): ಮಲೆನಾಡು ಭಾಗದಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಅರಣ್ಯ ಇಲಾಖೆ ಶೀಘ್ರವಾಗಿ ಮುಂದಾಗಬೇಕು ಎಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಟಿ.ಎಂ.ಉಮೇಶ್ ಕಲ್ಮಕ್ಕಿ ಒತ್ತಾಯಿಸಿದ್ದಾರೆ.


ಮಲೆನಾಡಿನ ಚಿಕ್ಕಮಗಳೂರು, ಮೂಡಿಗೆರೆ, ಎನ್.ಆರ್.ಪುರ ತಾಲೂಕು ಭಾಗಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಕಾಡಾನೆ ಹಾವಳಿಯು ಮಿತಿ ಮೀರಿದ್ದು, ರೈತರನ್ನು ಸಂಕಷ್ಟಕ್ಕೆ ಈಡು ಮಾಡಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಕಾಡಾನೆಗಳು ಜನ ವಸತಿ ಪ್ರದೇಶಗಳಲ್ಲಿಯೇ ವಾಸ ಮಾಡುತ್ತಿದ್ದು ಹಾಗೂ ನಿರಂತರವಾಗಿ ಗ್ರಾಮಗಳಿಗೆ ಲಗ್ಗೆ ಇಡುತ್ತಿದ್ದು, ಇದಕ್ಕೆ ಅರಣ್ಯ ಇಲಾಖೆಯ ಮಾರಕ ಕಾನೂನು, ಕಾಯ್ದೆಗಳೇ ಕಾರಣವಾಗಿದೆ. ಅರಣ್ಯ ಭಾಗದಲ್ಲಿ ಆನೆಗಳಿಗೆ ಅಗತ್ಯವಿರುವ ಬಿದಿರು, ಬೈನೆ, ಹಲಸು ಸೇರಿದಂತೆ ವಿವಿಧ ಕಾಡು ಜಾತಿಯ ಹಣ್ಣಿನ ಗಿಡಗಳನ್ನು ನೆಟ್ಟರೆ ಆನೆಗಳು ನಾಡಿಗೆ ಬರುವ ಪ್ರಮೇಯವೇ ಇರುವುದಿಲ್ಲ.
ಅರಣ್ಯ ಇಲಾಖೆಯ ಕೆಲವು ಹಿರಿಯ ಅಧಿಕಾರಿಗಳು ಹವಾನಿಯಂತ್ರಿತ ಕಚೇರಿಗಳಲ್ಲಿ ಕುಳಿತು ಜನರಿಗೆ ಮಾರಕವಾದ ಕಾನೂನುಗಳನ್ನು ರೂಪಿಸಿ, ಕಾಡಿನಲ್ಲಿ ಪ್ರಾಣಿಗಳು ಇರದಂತೆ ಮಾಡಿ ನಾಡಿಗೆ ಲಗ್ಗೆ ಇಡುವಂತೆ ಮಾಡಿದ್ದಾರೆ.
ಎನ್.ಆರ್.ಪುರ ತಾಲೂಕಿನ ಸೀತೂರಿಲ್ಲಿ ಕಾಡಾನೆ ಕಾರ್ಯಾಚರಣೆ ವೇಳೆ ಆನೆ ದಾಳಿಯಲ್ಲಿ ರೈತರೊಬ್ಬರು ಮೃತಪಟ್ಟ ಘಟನೆ ತೀವ್ರ ನೋವಿನ ಸಂಗತಿಯಾಗಿದ್ದು, ಇಂತಹ ಹಲವು ಘಟನೆಗಳು ನಮ್ಮ ಕಣ್ಣ ಮುಂದೆಯೇ ಇವೆ. ಮೂಡಿಗೆರೆ, ಆಲ್ದೂರು ಭಾಗಗಳಲ್ಲಿ ಕಾಡಾನೆ ದಾಳಿಯಿಂದ ಕೆಲವರು ಮೃತಪಟ್ಟ ಘಟನೆಗಳು ಸಹ ನಡೆದಿವೆ.
ಆದರೂ ಸಹ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತು ಕ್ರಮವಹಿಸದೇ ಇರುವುದು ಬೇಸರದ ಸಂಗತಿಯಾಗಿದೆ. ಕಾಡಾನೆ, ಕಾಡು ಕೋಣ ಸೇರಿದಂತೆ ಹಲವು ಕಾಡು ಪ್ರಾಣಿಗಳು ಮಲೆನಾಡು ಭಾಗದಲ್ಲಿ ನಿರಂತರವಾಗಿ ರೈತರ ಜಮೀನು, ಮನೆ, ಗ್ರಾಮಗಳಿಗೆ ದಾಳಿ ಮಾಡಿ ಅಪಾರ ಆಸ್ತಿಪಾಸ್ತಿ, ಪ್ರಾಣ ಹಾನಿ ಮಾಡುತ್ತಿರುವುದು ಹೊಸದೇನಲ್ಲ.

ಈ ಬಗ್ಗೆ ಸರ್ಕಾರ ಹಾಗೂ ಅರಣ್ಯ ಇಲಾಖೆ ಶಾಶ್ವತ ಪರಿಹಾರಗಳನ್ನು ಕ್ರಮಕೈಗೊಳ್ಳಬೇಕು. ಅವೈಜ್ಞಾನಿಕವಾದ ಯೋಜನೆಗಳನ್ನು ರೂಪಿಸದೆ, ಹೊರ ರಾಜ್ಯ, ವಿದೇಶಗಳಲ್ಲಿ ಕಾಡು ಪ್ರಾಣಿಗಳ ಹಾವಳಿಗಳನ್ನು ತಡೆಯಲು ಯಾವ ವಿನೂತನ ಯೋಜನೆಗಳನ್ನು ರೂಪಿಸಿದ್ದಾರೆ ಎಂಬುದನ್ನು ಅಧ್ಯಯನ ಮಾಡಿ ಅದನ್ನು ಅಳವಡಿಸಿಕೊಳ್ಳಬೇಕು.
ಮಲೆನಾಡು ಭಾಗದ ಎಲ್ಲಾ ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಸಂಸದರು ಮುಖ್ಯಮಂತ್ರಿಗಳು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳನ್ನು ನಿಯೋಗದೊಂದಿಗೆ ಭೇಟಿ ನೀಡಿ ಮಲೆನಾಡಿನ ಜನರಿಗೆ ಕಾಡುಪ್ರಾಣಿಗಳ ಹಾವಳಿ ನಡೆಯದಂತೆ ಕ್ರಮಕೈಗೊಳ್ಳಲು ಒತ್ತಾಯಿಸಬೇಕಿದೆ.
ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿಕೊಳ್ಳದಿದ್ದಲ್ಲಿ ರೈತರ ಜೀವನ ಮೂರಾಬಟ್ಟೆಯಾಗಲಿದೆ. ಈಗಾಗಲೇ ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರ ಫಸಲು ಹಾನಿ ಹೆಚ್ಚಾಗಿದ್ದು, ತೀವ್ರ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಡುಪ್ರಾಣಿಗಳ ದಾಳಿ ಬಗ್ಗೆ ಶಾಶ್ವತ ಪರಿಹಾರ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.



 

Leave a Reply

Your email address will not be published. Required fields are marked *

Scan the code