ಮಗಳ ಮೇಲೆ ಅತ್ಯಾಚಾರ; ಕಾಮುಕ ತಂದೆ ವಶಕ್ಕೆ
(KOLARA): ಬಂಗಾರಪೇಟೆ: ಹೆತ್ತ ತಂದೆಯೇ ಮಗಳ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡಿ ಗರ್ಭಿಣಿಯಾಗಿಸಿರುವ ಘಟನೆ ಕಾಮಸಮುದ್ರ ಪೊಲೀಸ್ ಠಾಣಾ ವ್ಯಾಪ್ತಿಯ ಆರಮಾನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದ್ದು, ಈ ಪ್ರಕರಣದಿಂದ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ. ತಾಲೂಕಿನ ಆರಮಾನಹಳ್ಳಿ ಗ್ರಾಮದ ಅಪ್ಪಯ್ಯಪ್ಪ (52) ಎಂಬುವವರು ಈ ಕೃತ್ಯ ಎಸಗಿದ್ದು, 3 ಮಕ್ಕಳ ತಂದೆಯಾಗಿರುವ ಆರೋಪಿ ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. 11 ವರ್ಷಗಳ ಹಿಂದೆಯೇ ಹೆಂಡತಿಯನ್ನು ಕಳೆದುಕೊಂಡಿರುವ ಅಪ್ಪಯ್ಯಪ್ಪ 5 ತಿಂಗಳ ಹಿಂದೆ ತಾನು ಹೆತ್ತ 20 ವರ್ಷ ವಯಸ್ಸಿನ ಮಗಳ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ.
ಮಗಳು ಈಗ 5 ತಿಂಗಳ ಗರ್ಭಿಣಿಯಾಗಿರುವ ಕಾರಣಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಅತ್ಯಾಚಾರಕ್ಕೆ ಒಳಗಾದ ಯುವತಿ ಕೋಲಾರದ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ತಂದೆಯೇ ತನ್ನ ಮೇಲೆ ಅತ್ಯಾಚಾರ ಮಾಡಿರುವ ಬಗ್ಗೆ ತಮ್ಮ ಮನೆಯವರಿಗೆ ವಿಷಯ ತಿಳಿಸಿದ್ದರೂ ಸಹ ಯಾರೂ ನಂಬುವ ಸ್ಥಿತಿಯಲ್ಲಿರಲಿಲ್ಲ. ಈಗ 5 ತಿಂಗಳ ಗರ್ಭಿಣಿಯಾದಾಗ ಪ್ರಕರಣ ಬೆಳಕಿಗೆ ಬಂದಿದೆ. ಅತ್ಯಾಚಾರಕ್ಕೆ ತುತ್ತಾಗಿರುವ ಮಗಳು ನೀಡಿದ ದೂರಿನ ಮೇರೆಗೆ ಕಾಮಸಮುದ್ರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ವರದಿ: ವಿಷ್ಣು ಕೋಲಾರ