ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ.
(SHIVAMOGA): ಸಾಗರ: ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ. ಪಠ್ಯದ ಜೊತೆ ಮಕ್ಕಳ ಆಸಕ್ತಿದಾಯಕ ಕ್ಷೇತ್ರ ಗುರುತಿಸಿ ಅದಕ್ಕೆ ಬೆಂಬಲಿಸಬೇಕು ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಲ್ಲಿನ ನಗರಸಭೆ ರಂಗಮಂದಿರದಲ್ಲಿ ಸರ್ಕಾರಿ ಸ್ವತಂತ್ರ ಬಾಲಕಿಯರ ಪದವಿಪೂರ್ವ ಕಾಲೇಜಿನ ಸಾಂಸ್ಕೃತಿಕ ಕ್ರೀಡಾ ವಿವಿಧ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ರ‍್ಯಾಂಕ್ ವಿಜೇತ ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.
ಪದವಿಪೂರ್ವ ಶಿಕ್ಷಣ ಅತ್ಯಂತ ಮಹತ್ವದ ಘಟ್ಟವಾಗಿರುತ್ತದೆ. ಇಲ್ಲಿ ಓದಿಗೆ ಎಷ್ಟು ಆದ್ಯತೆ ನೀಡುತ್ತೀರೋ ಅಷ್ಟೇ ಆದ್ಯತೆಯನ್ನು ಪಠ್ಯೇತರ ಚಟುವಟಿಕೆಗಳಾದ ಎನ್.ಎಸ್.ಎಸ್., ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಒತ್ತು ನೀಡಬೇಕು. ಯಾವ ಮಕ್ಕಳು ಯಾವ ರೀತಿ ಭವಿಷ್ಯ ರೂಪಿಸಿಕೊಳ್ಳುತ್ತಾರೆ ಎಂದು ಹೇಳಲು ಬರುವುದಿಲ್ಲ. ಆದರೆ ಪಿಯುಸಿ ಹಂತದಲ್ಲಿಯೆ ಭವಿಷ್ಯಕ್ಕೆ ಬೇಕಾದ ಭದ್ರ ಬುನಾದಿ ಹಾಕಿಕೊಳ್ಳಬೇಕು ಎಂದು ಹೇಳಿದರು.
ಈಗಾಗಲೆ ಬಾಲಕಿಯರ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿಯರಿಗೆ ಉತ್ತಮ ಶಿಕ್ಷಣ ನೀಡುತ್ತಿದೆ. ಸರ್ಕಾರ ಶಿಕ್ಷಣಕ್ಕೆ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುತ್ತಿದೆ. ಸರ್ಕಾರದ ಅನುದಾನ ಸದ್ಭಳಕೆಯಾಗಬೇಕು. ಮಕ್ಕಳು ದ್ವಿತೀಯ ಪಿಯುಸಿಯಲ್ಲಿ ರ‍್ಯಾಂಕ್ ಪಡೆಯುವ ಮೂಲಕ ಪೋಷಕರ ಕನಸು ಈಡೇರಿಸಬೇಕು ಎಂದು ಸಲಹೆ ನೀಡಿದರು.
ಹಿರಿಯ ಉಪನ್ಯಾಸಕ ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷೆ ಸುಮಂಗಲ ರಾಮಕೃಷ್ಣ, ಸದಸ್ಯರಾದ ವೀಣಾ ನಾಯ್ಡು, ತ್ಯಾಗಮೂರ್ತಿ, ಅಬ್ದುಲ್ ರೆಹಮಾನ್, ಪ್ರಮುಖರಾದ ಮರಿಯಾ ಲೀಮಾ, ಗಣಪತಿ ಮಂಡಗಳಲೆ, ರವಿ ಲಿಂಗನಮಕ್ಕಿ ಕೆ.ಹೊಳೆಯಪ್ಪ, ಕಲಸೆ ಚಂದ್ರಪ್ಪ ಇನ್ನಿತರರು ಹಾಜರಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ