ಮರು ಮತ ಎಣಿಕೆ: ನ್ಯಾಯಾಲಯದಲ್ಲಿ ಶ್ರೀನಿವಾಸಗೌಡಗೆ ಜಯ.
(CHIKKAMAGLURU): ಸಮೀಪದ ಆಡುವಳ್ಳಿ ಗ್ರಾಮ ಪಂಚಾಯಿತಿಯ ಕೊಳಲೆ ಕ್ಷೇತ್ರಕ್ಕೆ 2021 ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಸ್ಪರ್ಧಿಸಿ 3 ಮತಗಳ ಅಂತರದಿಂದ ಸೋಲುಂಡಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂ.ವಿ.ಶ್ರೀನಿವಾಸಗೌಡ ಅವರಿಗೆ ಮರು ಮತ ಎಣಿಕೆಯಲ್ಲಿ ನ್ಯಾಯಾಲಯದ ಮೂಲಕ ಜಯ ಲಭಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಆಡುವಳ್ಳಿ ಗ್ರಾಪಂನ ಕೊಳಲೆ ವಾರ್ಡ್ನ ಸಾಮಾನ್ಯ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರಾಗಿ ಎಂ.ವಿ.ಶ್ರೀನಿವಾಸಗೌಡ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಚನ್ನಪ್ಪಗೌಡ ಸ್ಪರ್ಧಿಸಿದ್ದರು.
ಮತ ಎಣಿಕೆ ನಡೆದಾಗ ಎಂ.ವಿ.ಶ್ರೀನಿವಾಸಗೌಡಗೆ 379, ಚನ್ನಪ್ಪಗೌಡ ಅವರಿಗೆ 383 ಮತಗಳು ಲಭಿಸಿದ್ದವು. ಚುನಾವಣಾಧಿಕಾರಿಗಳು 3 ಮತಗಳ ಅಂತರದಲ್ಲಿ ಅಭ್ಯರ್ಥಿ ಚನ್ನಪ್ಪಗೌಡ ಜಯ ಸಾಧಿಸಿದ್ದಾರೆ ಎಂದು ಘೋಷಿಸಿದ್ದರು.
ಆದರೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂ.ವಿ.ಶ್ರೀನಿವಾಸಗೌಡ ಚುನಾವಣಾ ಮತ ಎಣಿಕೆಯಲ್ಲಿ ಲೋಪವಾಗಿದ್ದು, ಮರು ಮತ ಎಣಿಕೆ ನಡೆಸಿ ತೀರ್ಪು ನೀಡಬೇಕು ಎಂದು ಎನ್.ಆರ್.ಪುರ ನ್ಯಾಯಾಲಯದ ಮೊರೆ ಹೋಗಿದ್ದರು.
ಕಳೆದ ಮೂರು ವರ್ಷಗಳಿಂದ ಸತತ ವಾದ, ವಿವಾದ, ವಿಚಾರಣೆ ನಡೆದು ಚಲಾವಣೆಗೊಂಡ ಮತಗಳನ್ನು ಮರು ಎಣಿಕೆ ಮಾಡಿದಾಗ, ತಿರಸ್ಕೃತಗೊಂಡ ಮತಗಳ ಪೈಕಿ 3 ಮತಗಳನ್ನು ಸ್ಕೇಲ್ ಮೂಲಕ ಅಳತೆ ಮಾಡಿದಾಗ ಅಭ್ಯರ್ಥಿ ಎಂ.ವಿ.ಶ್ರೀನಿವಾಸಗೌಡ ಅವರ ಚಿಹ್ನೆಯ ಕಡೆಗೆ ಹೆಚ್ಚುವರಿಯಾಗಿ ಮತ ಚಲಾವಣೆಗೊಂಡಿರುವುದು ಕಂಡು ಬಂದಿದೆ.
ಈ ಹಿಂದೆ ತಿರಸ್ಕೃತಗೊಂಡ ಈ ಮತಗಳನ್ನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಚನ್ನಪ್ಪಗೌಡ ಅವರಿಗೆ ನೀಡಲಾಗಿತ್ತು. ಇದೀಗ ಮರು ಮತ ಎಣಿಕೆಯಲ್ಲಿ ಎಂ.ವಿ.ಶ್ರೀನಿವಾಸಗೌಡಗೆ 383, ಚನ್ನಪ್ಪಗೌಡ ಅವರಿಗೆ 379 ಮತಗಳು ಲಭಿಸಿದೆ ಎಂದು ನ್ಯಾಯಾಲಯ ತೀರ್ಪು ನೀಡಿದ್ದು, 3 ಮತಗಳ ಅಂತರದಲ್ಲಿ ಎಂ.ವಿ.ಶ್ರೀನಿವಾಸಗೌಡ ವಿಜಯಿಯಾಗಿದ್ದಾರೆ. ಆಡುವಳ್ಳಿ ಗ್ರಾಪಂನ ಸದಸ್ಯರಾಗಲು ಅರ್ಹತೆಯನ್ನು ಎಂ.ವಿ.ಶ್ರೀನಿವಾಸಗೌಡ ಅವರು ಪಡೆದಿದ್ದಾರೆ ಎಂದು ಘೋಷಿಸಿದೆ.
ಈ ಹಿನ್ನೆಲೆಯಲ್ಲಿ ಎನ್.ಆರ್.ಪುರ ತಾಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿ ಧನಂಜಯ ಮೇಧೂರ್ ಶುಕ್ರವಾರ ನ್ಯಾಯಾಲಯದ ಆದೇಶದಂತೆ ಬಿಜೆಪಿ ಬೆಂಬಲಿತ ಶ್ರೀನಿವಾಸಗೌಡ ಅವರಿಗೆ ಅಧಿಕೃತವಾದ ಚುನಾವಣಾ ಪ್ರಮಾಣ ಪತ್ರ ನೀಡಿ, ಕೊಳಲೆ ಕ್ಷೇತ್ರದಿಂದ ಕ್ರಮಬದ್ಧವಾಗಿ ಆಯ್ಕೆಯಾಗಿ, ಆಡುವಳ್ಳಿ ಗ್ರಾಪಂನ ಸದಸ್ಯರಾಗಲು ಅರ್ಹರಾಗಿದ್ದಾರೆ ಎಂದು ಘೋಷಿಸಿದ್ದಾರೆ.
ವಿಜಯೋತ್ಸವ: ಗ್ರಾಪಂ ಸದಸ್ಯರಾಗಿ ಕೊಳಲೆ ವಾರ್ಡ್ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂ.ವಿ.ಶ್ರೀನಿವಾಸಗೌಡ ಅವರು ಆಯ್ಕೆಯಾದ ಪ್ರಮಾಣ ಪತ್ರ ಚುನಾವಣಾಧಿಕಾರಿಗಳಿಂದ ಅಧಿಕೃತವಾಗಿ ದೊರೆಯುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಆಡುವಳ್ಳಿ ಗ್ರಾಪಂ ಮುಂಭಾಗದಲ್ಲಿ ಸೇರಿ ವಿಜಯೋತ್ಸವ ಆಚರಿಸಿದರು.
ವಿಜೇತ ಅಭ್ಯರ್ಥಿ ಎಂ.ವಿ.ಶ್ರೀನಿವಾಸ ಅವರನ್ನು ಅಭಿನಂದಿಸಿ ಸಂಭ್ರಮಿಸಿದರು. ಹೋಬಳಿ ಬಿಜೆಪಿ ಅಧ್ಯಕ್ಷ ಪ್ರದೀಪ್ ಕಿಚ್ಚಬ್ಬಿ ಮಾತನಾಡಿ, ನ್ಯಾಯಾಲಯದ ತೀರ್ಪನ್ನು ಬಿಜೆಪಿ ಪಕ್ಷ, ಅಭ್ಯರ್ಥಿ ಗೌರವಿಸುತ್ತಿದ್ದು, ಚುನಾವಣೆ ಎಣಿಕೆ ವೇಳೆ ಆದ ಲೋಪಕ್ಕೆ ತಡವಾಗಿಯಾದರೂ ನ್ಯಾಯ ದೊರಕಿದೆ.
ನೂತನ ಸದಸ್ಯರಾಗಿರುವ ಎಂ.ವಿ.ಶ್ರೀನಿವಾಸಗೌಡ ಅವರಿಗೆ ಇನ್ನು ಕೆಲವು ತಿಂಗಳುಗಳ ಸದಸ್ಯತ್ವದ ಅಧಿಕಾರ ಲಭ್ಯವಾಗಲಿದ್ದು, ಈ ಸಂದರ್ಭದಲ್ಲಿ ತಮ್ಮ ವಾರ್ಡ್ನ ಅಭಿವೃದ್ಧಿಗಾಗಿ ಅವರು ಶ್ರಮಿಸುವ ಭರವಸೆಯಿದೆ. ನಿಷ್ಠಾವಂತ ಬಿಜೆಪಿಯ ನಾಯಕರಾಗಿರುವ ಅವರಿಗೆ ತಡವಾಗಿಯಾದರೂ ನ್ಯಾಯಾಲಯದ ಆದೇಶದಂತೆ ಜನಪ್ರತಿನಿಧಿಯಾಗುವ ಆಯ್ಕೆ ದೊರೆತಿದೆ ಎಂದರು ಹೇಳಿದರು.
ಆಡುವಳ್ಳಿ ಗ್ರಾಪಂ ಅಧ್ಯಕ್ಷ ಯು.ಸಿ.ಪ್ರದೀಪ್, ಉಪಾಧ್ಯಕ್ಷೆ ರಾಧಾ, ಸದಸ್ಯರಾದ ಗಣೇಶ್, ಪ್ರತಿಮಾ, ಕವಿತ, ಮುಖಂಡರಾದ ಸುಭಾಶ್ ಕಿಚ್ಚಬ್ಬಿ, ರಮೇಶ್, ವೇಣು, ಸತೀಶ್ ಮತ್ತಿತರರು ಇದ್ದರು.