ವಿದ್ಯಾರ್ಥಿ ಬ್ಯಾಗ್ ನಲ್ಲಿ ನಾಗರಹಾವು :
( ಶಿವಮೊಗ್ಗ -ಸೆ-03 ) ವಿದ್ಯಾರ್ಥಿಯೋರ್ವನ ಶಾಲಾ ಬ್ಯಾಗ್ ನಲ್ಲಿ ನಾಗರ ಹಾವೊಂದು ಅಡಗಿದ್ದ ಘಟನೆ, ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಬಾಳೂರುಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಶುಕ್ರವಾರ ನಡೆದಿದೆ. ಬಾಲಕ ಭುವನ್ ಎಂಬ ವಿದ್ಯಾರ್ಥಿಯ ಬ್ಯಾಗ್ ನಲ್ಲಿಯೇ ಹಾವು ಅಡಗಿಕೊಂಡಿದ್ದು ಬೆಳಕಿಗೆಬಂದಿದೆ. ಎಂದಿನಂತೆ ವಿದ್ಯಾರ್ಥಿಯು ಬೆಳಿಗ್ಗೆ ಮನೆಯಿಂದ ಬ್ಯಾಗ್ ನೊಂದಿಗೆ ಶಾಲೆಗೆ ಆಗಮಿಸಿದ್ದಾನೆ. ಶಿಕ್ಷಕರು ಪಾಠ ಮಾಡುವ ವೇಳೆ ಪುಸ್ತಕ ತೆಗೆದುಕೊಳ್ಳಲು ವಿದ್ಯಾರ್ಥಿ ಬ್ಯಾಗ್ ಜಿಪ್‌ತೆರೆದಿದ್ದು, ಈ ವೇಳೆ ಬ್ಯಾಗ್ ನಲ್ಲಿ ಹಾವು ಗಮನಿಸಿ ಭಯಭೀತನಾಗಿದ್ದಾನೆ. ಪಕ್ಕದಲ್ಲಿದ್ದ ಸಹಪಾಠಿ ಮಣಿಕಂಠ ಎಂಬ ವಿದ್ಯಾರ್ಥಿಯು, ಭುವನ್ ಬ್ಯಾಗ್ ನ ಜಿಪ್‌ಮುಚ್ಚಿ ಶಿಕ್ಷಕರ ಬಳಿ ಬ್ಯಾಗ್ ತೆಗೆದುಕೊಂಡು ಬಂದು ಹಾವಿರುವುದನ್ನು ತಿಳಿಸಿದ್ದಾನೆ. ಗಾಬರಿಗೊಂಡ ಶಿಕ್ಷಕರು ತಕ್ಷಣವೇ ಬ್ಯಾಗ್ ನ್ನು ಕೊಠಡಿಯಿಂದ ಹೊರತಂದಿದ್ದಾರೆ. ನಂತರಶಾಲೆಯ ಸಮೀಪದಲ್ಲಿಯೇ ಇದ್ದ ಭುವನ್ ಪೋಷಕರನ್ನು ಕರೆಯಿಸಿ ವಿಷಯ ತಿಳಿಸಿದ್ದಾರೆ. ನಂತರ ಪಕ್ಕದಲ್ಲೇ ಇದ್ದ ಕಾಡಿನಲ್ಲಿ ಹಾವನ್ನು ಸುರಕ್ಷಿತವಾಗಿ ಬಿಟ್ಟು ಬಂದಿದ್ದಾರೆ.