ಗೃಹರಕ್ಷಕ ದಳದಲ್ಲಿ ಸೇವೆ ಸಲ್ಲಿಸುವುದು ಅಮೂಲ್ಯ ಅವಕಾಶ.
(SHIVAMOGA): ಸೊರಬ: ಗೃಹರಕ್ಷಕ ದಳದಲ್ಲಿ ಸೇವೆ ಸಲ್ಲಿಸುವುದು ಅಮೂಲ್ಯ ಅವಕಾಶವಾಗಿದ್ದು, ಜೀವ ರಕ್ಷಣೆ, ಆಸ್ತಿ ರಕ್ಷಣೆ ಹಾಗೂ ಕಾನೂನು ಸುವ್ಯವಸ್ಥೆ ಪಾಲಿಸಲು ದಳದ ಕೊಡುಗೆ ಮಹತ್ತರವಾಗಿದೆ ಎಂದು ರಾಷ್ಟ್ರಪತಿ ಪದಕ ಪುರಸ್ಕೃತ ಗೃಹರಕ್ಷಕ ದಳದ ನಿವೃತ್ತ ಡಿವಿಜನಲ್ ಕಮಾಂಡರ್ ಡಾ. ಎಂ.ಕೆ. ಭಟ್ ಹೇಳಿದರು.
ಶನಿವಾರ ಪಟ್ಟಣದ ಖಾಸಗಿ ಬಸ್ ನಿಲ್ದಾಣ ಮುಂಭಾಗದ ಗೃಹರಕ್ಷಕ ದಳದ ಕಚೇರಿಯಲ್ಲಿ ಹಮ್ಮಿಕೊಂಡ ಗೃಹರಕ್ಷಕ ದಳ ದಿನಾಚರಣೆ, ರಾಷ್ಟ್ರಪತಿ ಪದಕ ಪುರಸ್ಕೃತ, ನಿವೃತ್ತ ಮತ್ತು ಅತ್ಯುತ್ತಮ ಸೇವೆ ಸಲ್ಲಿಸಿದ ಗೃಹ ರಕ್ಷಕರಿಗೆ ಹಮ್ಮಿಕೊಂಡ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಗೃಹರಕ್ಷಕರು ಖಾಕಿ ಸಮವಸ್ತ್ರದಲ್ಲಿ ಭಿನ್ನವಾಗಿ ಕಾಣಿಸುತ್ತಾರೆ. ಸಮವಸ್ತ್ರದಲ್ಲಿದ್ದಾಗ ಶಿಸ್ತಿನಿಂದ ವರ್ತಿಸುವುದು, ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವ ಜೊತೆಗೆ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವುದು ಮುಖ್ಯವಾಗುತ್ತದೆ. ಗೃಹರಕ್ಷಕರು ನಿಸ್ವಾರ್ಥವಾಗಿ ಮತ್ತು ನಿಷ್ಕಾಮವಾಗಿ ಸೇವೆ ಸಲ್ಲಿಸುತ್ತಾರೆ. ಆದರೆ, ನಿವೃತ್ತಿ ನಂತರ ಯಾವುದೇ ಪಿಂಚಣಿ ಯೋಜನೆಯೂ ಇರುವುದಿಲ್ಲ. ಕರ್ತವ್ಯದ ವೇಳೆಯಲ್ಲಿ ನೀಡುವ ಗೌರವ ಭತ್ಯೆಗೆ ಜೀವವನ್ನೇ ಪಣಕ್ಕಿಟ್ಟು ಕಾರ್ಯನಿರ್ವಹಿಸುತ್ತಾರೆ. ಗೃಹರಕ್ಷಕರಲ್ಲಿ ಅನೇಕರು ಕರ್ತವ್ಯ ನಿರತವೇಳೆ ಹುತಾತ್ಮರಾಗಿದ್ದಾರೆ. ಅವರನ್ನು ಗೌರವಿಸುತ್ತಾ ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಅಭಿನಂದನೆ ಸ್ವೀಕರಿಸಿದ ರಾಷ್ಟ್ರಪತಿ ಪದಕ ಪುರಸ್ಕೃತ ನಿವೃತ್ತ ಘಟಕಾಧಿಕಾರಿ ಬಿ. ರೇವಣಪ್ಪ ಮಾತನಾಡಿ, ತಮ್ಮ 34 ವರ್ಷದ ಸೇವೆಯಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ ಆತ್ಮತೃಪ್ತಿ ಇದೆ. ಘಟಕದ ಸದಸ್ಯರು ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಸೇವೆಯನ್ನು ಮೆಚ್ಚಿ ರಾಷ್ಟ್ರಪತಿ ಪದಕ ಬಂದಿರುವುದು ಸಂತಸ ತಂದಿದೆ. ಗೃಹರಕ್ಷಕ ದಳದ ದಿನಾಚರಣೆಯ ಸಂದರ್ಭದಲ್ಲಿ ಅಭಿನಂದಿಸುತ್ತಿರುವುದು ಬದುಕಿನ ಅವಿಸ್ಮರಣೀಯ ದಿನವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಘಟಕಾಧಿಕಾರಿ ಎಚ್.ಎಂ. ಪ್ರಶಾಂತ್ ಮಾತನಾಡಿ, ಹಿರಿಯ ಅಧಿಕಾರಿಗಳು ಸೂಚಿಸಿದ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರು ಪೊಲೀಸ್ ಇಲಾಖೆಯ ಒಂದು ಪ್ರಮುಖ ಅಂಗವಾಗಿದ್ದಾರೆ. ದಕ್ಷತೆ, ಪ್ರಾಮಾಣಿಕತೆ, ಬದ್ಧತೆಯನ್ನು ತೋರುವ ಮೂಲಕ ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದಂತೆ ಕರ್ತವ್ಯ ನಿರ್ವಹಿಸುವ ಸಂಸ್ಥೆ ಗೃಹರಕ್ಷಕ ದಳವಾಗಿದೆ ಎಂದ ಅವರು, ಸ್ಥಳೀಯ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಸಹಕಾರದಿಂದ ಕಚೇರಿಗೆ ಸ್ಥಳಾವಕಾಶ ದೊರೆತಿದೆ. ಕೆಲ ಸಮಾಜ ಸೇವಕರು ಕಚೇರಿಗೆ ಅಗತ್ಯವಿರುವ ಪೀಠೋಪಕರಣ ಒದಗಿಸುವುದಾಗಿ ಮುಂದೆ ಬಂದಿರುವುದಕ್ಕೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪದಕ ಪುರಸ್ಕೃತ ನಿವೃತ್ತ ಘಟಕಾಧಿಕಾರಿ ಬಿ. ರೇವಣಪ್ಪ, ಗೃಹರಕ್ಷಕ ದಳದ ನಿವೃತ್ತ ಸದಸ್ಯ ಎಂ.ಬಿ. ನಾಗರಾಜ್, ಅತ್ಯುತ್ತಮ ಸೇವೆ ಸಲ್ಲಿಸಿದ ಹಿರಿಯ ಸದಸ್ಯರಾದ ಬಿ.ಎನ್. ಗೋಪಾಲ, ಸಿ.ಆರ್. ದುರ್ಗಪ್ಪ, ಜರಿಕೋತ, ಆರ್.ಬಿ. ಸಾಂಗ್ಲಿಯಾನ, ಎಚ್. ಶೇಷಪ್ಪ ಅವರನ್ನು ಅಭಿನಂದಿಸಲಾಯಿತು.
ಗೃಹರಕ್ಷಕ ದಳದ ನಿವೃತ್ತ ಸದಸ್ಯ ಷಡಾಕ್ಷರಿ, ಸದಸ್ಯರಾದ ಎನ್.ಕೆ. ಪರಶುರಾಮ, ಪರಶುರಾಮ ಕಕ್ಕರಸಿ, ಮಂಜುನಾಥ್, ಷಣ್ಮುಖ, ಸಮಾಜ ಸೇವಕ ನಾಗರಾಜ ಗುತ್ತಿ, ಕಸಾಪ ಅಧ್ಯಕ್ಷ ಎನ್. ಷಣ್ಮುಖಾಚಾರ್, ಮೋಹನ್ ಸುರಭಿ, ರೇವಣಪ್ಪ ಬಿದರಗೇರಿ, ಲಿಂಗರಾಜ ಗೌಡ ಸೇರಿದಂತೆ ಗೃಹರಕ್ಷಕ ದಳದ ಸರ್ವ ಸದಸ್ಯರು ಉಪಸ್ಥಿತರಿದ್ದರು. ಈ. ಕೆರಿಯಪ್ಪ ಸ್ವಾಗತಿಸಿ, ಬಿ.ಎನ್. ಗೋಪಾಲ್ ವಂದಿಸಿ, ಎಂ. ಸೋಮಪ್ಪ ಕಾರೆಕೊಪ್ಪ ನಿರೂಪಿಸಿದರು.
ವರದಿ: ಮಧು ರಾಮ್ ಸೊರಬ