ಕಮಲದ ಹೂ ಅರಳಿರುವ ವಿಮಾನ ನಿಲ್ದಾಣಕ್ಕೆ ಇಂದಿನಿಂದ ವಿಮಾನ ಹಾರಾಟ.
( ಶಿವಮೊಗ್ಗ, ಆಗಸ್ಟ್ – 31 ) – ವಿಮಾನದಲ್ಲಿ ಹಾರಾಟ ನಡೆಸಬೇಕು ಎಂಬ ಮಲೆನಾಡಿನ ಜನರ ಕನಸು ನನಸಾಗಿದೆ. ಆಗಸ್ಟ್ 31ರಿಂದ ಶಿವಮೊಗ್ಗದ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲಿದೆ. ಬೆಂಗಳೂರಿನಿಂದ ಆಗಮಿಸುವ ಮೊದಲ ವಿಮಾನ ಸೋಗಾನೆಯಲ್ಲಿನ ವಿಮಾನ ನಿಲ್ದಾಣದಲ್ಲಿ ಗುರುವಾರ ಬೆಳಗ್ಗೆ 11 ಗಂಟೆಗೆ ಲ್ಯಾಂಡ್ ಆಗಲಿದೆ.
ಶಿವಮೊಗ್ಗ ನಗರದಿಂದ ಸುಮಾರು 15 ಕಿ. ಮೀ. ದೂರದಲ್ಲಿರುವ ಸೋಗಾನೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಈ ವರ್ಷದ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದ್ದರು. ಆಗಸ್ಟ್ 31ರಂದು ವಿಮಾನ ಹಾರಾಟ ಆರಂಭವಾಗುತ್ತಿದೆ.
ಇಂಡಿಗೋ ವಿಮಾನಯಾನ ಸಂಸ್ಥೆಯು ಆಗಸ್ಟ್ 31ರಿಂದ ಬೆಂಗಳೂರು-ಶಿವಮೊಗ್ಗ ನಡುವೆ ವಿಮಾನ ಸೇವೆ ಆರಂಭಿಸಲಿದೆ. ಗುರುವಾರ ಬೆಳಿಗ್ಗೆ 9.50ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ವಿಮಾನ 11.05ಕ್ಕೆ ಶಿವಮೊಗ್ಗ ತಲುಪಲಿದೆ. ಈ ಮೂಲಕ ಮಲೆನಾಡಿನಲ್ಲಿ ಲೋಹದ ಹಕ್ಕಿಗಳ ಕಲರವ ಆರಂಭವಾಗಲಿದೆ.
ಮೊದಲ ಹಂತದಲ್ಲಿ ಶಿವಮೊಗ್ಗ-ಬೆಂಗಳೂರು ನಡುವೆ ಮಾತ್ರ ವಿಮಾನ ಸೇವೆ ಆರಂಭವಾಗುತ್ತಿದೆ. ಶಿವಮೊಗ್ಗ ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರ ಉಡಾನ್ ಯೋಜನೆ ವ್ಯಾಪ್ತಿಯಲ್ಲಿ ಒಳಪಡಿಸುವ ಕುರಿತು ಈಗಾಗಲೇ ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿದೆ. ಇನ್ನೂ ಹಲವು ನಗರಗಳಿಗೆ ಶಿವಮೊಗ್ಗದಿಂದ ವಿಮಾನ ಸೇವೆ ಆರಂಭಿಸಲಾಗುತ್ತದೆ.
ಶಿವಮೊಗ್ಗ ವಿಮಾನ ನಿಲ್ದಾಣ ಕರ್ನಾಟಕದ 9ನೇ ವಿಮಾನ ನಿಲ್ದಾಣವಾಗಿದೆ. ಮಲೆನಾಡು ಭಾಗದಲ್ಲಿ ನಿರ್ಮಾಣವಾಗಿರುವ ಪ್ರಪ್ರಥಮ ವಿಮಾನ ನಿಲ್ದಾಣ. ಏರ್ ಬಸ್ ಮಾದರಿಯ ವಿಮಾನಗಳೂ ಬಂದಿಳಿಯುವ ಅನುಕೂಲಗಳು ಇಲ್ಲಿವೆ. ಶಿವಮೊಗ್ಗ ಮಾತ್ರವಲ್ಲ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳ ಜನರಿಗೆ ಸಹ ಈ ವಿಮಾನ ನಿಲ್ದಾಣದಿಂದ ಅನುಕೂಲವಾಗಲಿದೆ.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಇನ್ನೂ ಸಹ ಹೆಸರು ಅಂತಿಮಗೊಂಡಿಲ್ಲ. ಕರ್ನಾಟಕ ಸರ್ಕಾರ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೆಸರು ಇಡಲು ಮುಂದಾಗಿತ್ತು. ಆದರೆ ಯಡಿಯೂರಪ್ಪ ಅವರು ಅದನ್ನು ನಿರಾಕರಿಸಿದರು. ರಾಷ್ಟ್ರಕವಿ ಕುವೆಂಪು ಅವರ ಹೆಸರು ಇಡಬೇಕು ಎಂದು ಒತ್ತಾಯಿಸಲಾಗುತ್ತಿದೆ. ಆದರೆ ಸದ್ಯಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣವಾಗಿಯೇ ಇದು ಕಾರ್ಯ ನಿರ್ವಹಣೆ ಮಾಡಲಿದೆ.
ಶಿವಮೊಗ್ಗ ವಿಮಾನ ನಿಲ್ದಾಣದ ವಿನ್ಯಾಸ ಎಲ್ಲರ ಗಮನ ಸೆಳೆಯುತ್ತಿದೆ. ಕಮಲದ ಹೂವಿನ ಮಾದರಿಯಲ್ಲಿ ವಿಮಾನ ನಿಲ್ದಾಣದ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಮೇಲಿನಿಂದ ನೋಡಿದರೆ ಕಮಲದ ಹೂ ಅರಳಿರುವ ಮಾದರಿಯಲ್ಲಿ ವಿಮಾನ ನಿಲ್ದಾಣ ಕಾಣುತ್ತದೆ.