‘ಸರ್ ನನಗೆ ಕೆಲಸ ಸಿಕ್ಕಿದೆ. ಸಂಬಳ ನಿಮಗಿಂತ ಜಾಸ್ತಿ’
(ARTICLE):ಪ್ರತೀ ವಿದ್ಯಾರ್ಥಿಯೂ ಭಿನ್ನ, ವಿಭಿನ್ನ. ಅದರಲ್ಲೂ ನಮ್ಮ ಮಾರ್ಗದರ್ಶನದಲ್ಲಿ ಬೆಳೆದ ಮಕ್ಕಳು ನಮ್ಮನ್ನು ಮೀರಿಸಿದಾಗ ಅದೊಂತರ ಹೆಮ್ಮೆ. ಶಾಲೆಯಲ್ಲಿದ್ದಾಗ ಹೇಗೇಗೋ ಇದ್ದವರು ಇಂದು ಒಳ್ಳೆಯ ಗುಣಗಳನ್ನು ಉಳಿಸಿಕೊಂಡಿದ್ದಾರೆ, ಇತರರಿಗೂ ಮಾದರಿಯಾಗಿದ್ದಾರೆ ಎಂಬುದು ತಿಳಿದಾಗ ಆಗುವ ಸಂತೋಷ ಅವಿಸ್ಮರಣೀಯವಾಗಿರುವುದರಲ್ಲಿ ಅನುಮಾನವೇ ಇಲ್ಲ.
ಬಹಳಷ್ಟು ವರ್ಷಗಳ ಹಿಂದೆ ೮ನೇ ತರಗತಿ ‘ಸಿ’ ವಿಭಾಗದಲ್ಲಿದ್ದ ಶಾರ್ವರಿ.ಆರ್.ಆರ್ ಆರಂಭದ ದಿನಗಳಲ್ಲಿ ಓದಿನಲ್ಲಿ ಹೇಳಿಕೊಳ್ಳುವಷ್ಟು ಚುರುಕಾಗಿ ಇರಲಿಲ್ಲ. ಎಲ್ಲರಿಗೂ ಆಕೆಯ ಪೋಷಕರು ಪರಿಚಿತರಿದ್ದರು. ನಮ್ಮ ಶಾಲೆಯ ಪ್ರವಾಸಗಳ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದವರು ಅವರ ತಂದೆ ಲಕ್ಷ್ಮೀ ಟ್ರಾವೆಲ್ಸ್ ನ ಮಾಲೀಕರಾದ ರುದ್ರೇಶ್ ರವರು. ಹಾಗಾಗಿ ಅವಳನ್ನು ಶಾರ್ವರಿ ಎಂದು ಕರೆದಿದ್ದಕ್ಕಿಂತಲೂ ‘ಸಂಚಾರಿ’ ಎಂದೇ ಕರೆಯುತ್ತಿದ್ದೆ. ಅದಕ್ಕೆ ಬೇಸರಿಸಿಕೊಳ್ಳದೇ ನಗುತ್ತ ಪ್ರತಿಕ್ರಿಯಿಸುತ್ತಿದ್ದಳು. ಶಿಕ್ಷಕರ ಬಳಿಯಲ್ಲಿ ಒಂದಿಷ್ಟು ಪೆಟ್ಟು ತಿಂದಿದ್ದಾಳೆ. ಸರಿಯಾದ ದಾರಿಯಲ್ಲಿ ಸಾಗಲು ಬಹಳ ಪ್ರಯತ್ನ ಪಟ್ಟಿದ್ದಾಳೆ. ದಿನದಿಂದ ದಿನಕ್ಕೂ ಓದಿನ ಬಗ್ಗೆ ಆಸಕ್ತಿ ವಹಿಸುತ್ತಿದ್ದರು ಹೇಳಿಕೊಳ್ಳುವ ಹಂತಕ್ಕೆ ಬರದಿದ್ದರೂ ಓದುವ ಪ್ರಯತ್ನವನ್ನು ಬಿಡಲಿಲ್ಲ.
ದಿನಗಳು ಕಳೆದಂತೆ ಓದಿನಲ್ಲಿ ತಾನು ಪಟ್ಟ ಪ್ರಯತ್ನಕ್ಕೆ ಒಳ್ಳೆಯ ಅಂಕಗಳನ್ನು ಪಡೆದುಕೊಂಡಳು. ನಂತರದ ಶಿಕ್ಷಣವನ್ನು ಕೂಡ ಉತ್ತಮ ಅಂಕಗಳಲ್ಲಿಯೇ ಪಡೆದುಕೊಂಡಳು. ಪದವಿಯನ್ನು ಓದುವ ಸಲುವಾಗಿ ಸಹ್ಯಾದ್ರಿ ಕಾಲೇಜ್ ಸೇರಿದಳು. ಈ ವಿಷಯ ತಿಳಿದಾಗ,’ನಮ್ಮ ಕಾಲೇಜ್ ಗೆ ಸೇರಿದಿಯಾ? ಒಳ್ಳೆಯದಾಗಲಿ’ ಎಂದೆ. ಕಾಲೇಜ್ ನಲ್ಲಿ ಇತರ ಕಾರ್ಯಕ್ರಮಗಳು ಇದ್ದೇ ಇರುತ್ತವೆ. ಸಾಧ್ಯವಾದರೆ ಅವುಗಳಲ್ಲಿ ಭಾಗವಹಿಸುತ್ತಿರು. ಓದಿನ ಜೊತೆಜೊತೆಗೆ ಇತರ ಸಾಂಸ್ಕೃತಿಕ, ಎನ್.ಎಸ್.ಎಸ್. ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಉತ್ತಮವಾಗುತ್ತಿದೆ. ಎಂಬ ಸಲಹೆಯನ್ನು ನೀಡಿದ್ದೆ. ಅದೆಷ್ಟು ಕೇಳಿಸಿಕೊಂಡಳೋ ತಿಳಿಯೇ.
ಶಾರ್ವರಿಯ ತಂಗಿ ಶರಣ್ಯ ಒಂದನೇ ತರಗತಿಯಿಂದ ನಮ್ಮ ಶಾಲೆಯಲ್ಲಿಯೇ ಓದತೊಡಗಿದ್ದಳು. ಮತ್ತೊಬ್ಬ ಕಿರಿಯ ಸಹೋದರಿ ಶಮಿತ ಕೂಡ ನಮ್ಮ ಶಾಲೆಯಲ್ಲಿಯೇ ಓದುತ್ತಿದ್ದಳು. ಈ ಸಮಯದಲ್ಲಿ ಇಡೀ ಜಗತ್ತನ್ನೇ ಆವರಿಸಿಕೊಂಡ ‘ಕೊರೋನಾ’ ಎಂಬ ಮಹಾಮಾರಿಯ ಹೊಡೆತಕ್ಕೆ ಸಿಕ್ಕ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದವರಿಗೆ ಕೆಲಸ ಕಳೆದುಕೊಳ್ಳುವಂತಾಯಿತು. ನಮ್ಮ ಶಿಕ್ಷಕರದ್ದು ಮತ್ತೊಂದು ರೀತಿಯ ಪಾಡಾಗಿತ್ತು. ಶಾಲೆಯೇ ನಡೆಯದಂತ ಸಮಯದಲ್ಲಿ ‘ಆನ್ ಲೈನ್’ ತರಗತಿಗಳು ಮಕ್ಕಳಿಗೆ ಪಾಠ ಹೇಳುವುದಾಗಿತ್ತು. ಅದೊಂತರ ಹೊಸ ರೀತಿಯದಾಗಿತ್ತು. ಶಿಕ್ಷಕರುಗಳು ಹೊಸದಾಗಿ ಮೊಬೈಲ್ ನಲ್ಲಿ ಪಾಠ ಮಾಡುವ ಬಗ್ಗೆ ಕಲಿತದ್ದು, ಅದರಿಂದ ಮಕ್ಕಳನ್ನು ಮತ್ತೆ ನೋಡುವಂತೆ ಆದದ್ದು ಹೊಸ ಬಗೆಯ ಅನುಭವವಾಗಿತ್ತು.
ನಮ್ಮ ಶಿಕ್ಷಕರದ್ದು ಒಂದು ಬಗೆಯದ್ದಾದರೆ ಇತರ ವರ್ಗಗಳ ಕಥೆಯೂ ಭಿನ್ನವಾಗಿತ್ತು. ಜನಗಳ ಓಡಾಟವೇ ಕಡಿಮೆಯಿದ್ದ ಸಂದರ್ಭದಲ್ಲಿ ಕೆಲವೊಂದು ಕ್ಷೇತ್ರಗಳಿಗೆ ಬಿದ್ದ ಹೊಡೆತ ಬೇರೆಯದೇ ಆಗಿತ್ತು. ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತವೇ ಬಿದ್ದಿತ್ತು. ವಾಹನಗಳ ಮಾಲೀಕರು ತಮ್ಮ ವಾಹನಗಳಿಗೆ ತೆರಿಗೆಯನ್ನು ಕಟ್ಟಬೇಕಿದ್ದರಿಂದ ಒಂದಿಷ್ಟು ಹಣಕಾಸಿನ ತೊಂದರೆ ಅವರಿಗೆ ಉಂಟಾಗಿದ್ದಂತೂ ಸತ್ಯ. ದಿನಕಳೆದಂತೆ ಒಂದೊಂದೇ ಕ್ಷೇತ್ರಗಳಲ್ಲಿ ಕಳೆದು ಹೋಗಿದ್ದ ಸುಂದರ ಕ್ಷಣಗಳು ನಿಧಾನವಾಗಿ ಮೂಡತೊಡಗಿದವು. ಶಾಲೆಗೆ ಮಕ್ಕಳು ಬರುವಂತಾಯಿತು. ದೂರದೂರ ಮಾಸ್ಕ್ ಧರಿಸಿರುವ ಮಕ್ಕಳನ್ನು ಕೂರಿಸಿ ಪಾಠ ಮಾಡುತ್ತಿದ್ದರು. ಮಕ್ಕಳನ್ನು ಕಾಣುವಂತಾಯಿತಲ್ಲ ಶಿಕ್ಷಕರಿಗೆ ಅದೇ ಸಂತೋಷ ಎನಿಸಿತು.
ಇದರ ಮಧ್ಯೆ ಶಿಕ್ಷಣವೂ ಕೂಡ ಆನ್ ಲೈನ್ ತರಗತಿಯ ಸ್ವರೂಪ ಪಡೆದುಕೊಂಡಿತ್ತು. ಇದೊಂದು ಹೊಸ ಬೆಳವಣಿಗೆ ಎನಿಸಿತು. ಇದರ ಮಧ್ಯೆ ಶಾರ್ವರಿ ಹೆಚ್ಚುವರಿ ಶಿಕ್ಷಣವನ್ನು ಪಡೆಯತೊಡಗಿದಳು. ಇದರ ಮಧ್ಯೆ ತಮ್ಮ ಮನೆಯಲ್ಲಿನ ಒಂದಿಷ್ಟು ಸಮಸ್ಯೆಗಳಿಂದಾಗಿ ಕುಟುಂಬದವರು ಅತ್ತ ಕಡೆಗೆ ಗಮನಹರಿಸುವಂತಾಯಿತು. ಇದರ ಮಧ್ಯೆ ಶಾರ್ವರಿಗೆ ಕೆಲಸ ಸಿಕ್ಕಿತು. ಇದನ್ನು ತಿಳಿಸಲೆಂದು ಶಾಲೆಗೆ ಸಿಹಿಯನ್ನು ತೆಗೆದುಕೊಂಡು ಬಂದಿದ್ದಳು. ಎಲ್ಲಾ ಶಿಕ್ಷಕರಿಗೂ ಸಿಹಿಯನ್ನು ವಿತರಿಸಿದಳು. ಈಕೆಯ ನೆಚ್ಚಿನ ಶಾಲೆಯ ಆಂಟಿ ಮೀನಾಳೊಂದಿಗೆ ಕೂತು ಬಹಳ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಳು. ಆಗ ಅಲ್ಲಿಗೆ ಬಂದ ನನ್ನನ್ನು ಕಂಡು ಆತ್ಮೀಯವಾಗಿ ಮಾತನಾಡಿಸಿದಳು. ಜೊತೆಗೆ ನನ್ನೊಂದಿಗಿದ್ದ ಸಲುಗೆಯಿಂದ ಮಾತನಾಡತೊಡಗಿದಳು. ‘ಸರ್ ನನಗೆ ಕೆಲಸ ಸಿಕ್ಕಿದೆ. ಸಂಬಳ ನಿಮಗಿಂತ ಜಾಸ್ತಿ’ ಎಂದಾಗ ‘ಓಹೋ ನಿಜವಾಗಿಯೂ… ಒಳ್ಳೆಯದಾಗಲಿ. ಇನ್ನು ಮುಂದಿನದಿನಗಳು ಸಂತೋಷದಿಂದನೇ ಇರಲಿ’ ಎಂದು ಹಾರೈಸಿದೆ. ಅಷ್ಟರಲ್ಲಿ ಮೀನಮ್ಮ, ‘ಸರ್ ಜೊತೆಗೆ ಹಾಗೇ ಮಾತಾಡೋದಾ? ಗೊತ್ತಾಗಲ್ವಾ ನಿನಗೆ?’ ಎಂದಳು. ನಾನೇ ಮಧ್ಯೆ ಪ್ರವೇಶಿಸಿ. ‘ಆಕೆ ಹೇಳಿದ್ದರಲ್ಲಿ ತಪ್ಪೇನಿದೆ. ನನಗಿಂತಲೂ ಸಂಬಳ ಹೆಚ್ಚು ಎನ್ನುವ ಆಕೆಯ ಮಾತಿನಲ್ಲಿ ಎಲ್ಲೂ ಅಹಂಕಾರದ ಭಾವ ಇರಲಿಲ್ಲ. ಅದರ ಬದಲಿಗೆ ತನಗನಿಸಿದ್ದನ್ನು ನನ್ನೊಂದಿಗೆ ಹೇಳಿಕೊಳ್ಳುವ ಮುಗ್ದತೆ ಇನ್ನೂ ಹಾಗೆಯೇ ಇದೇ ಅದೇ ಖುಷಿ ನನಗೆ’ ಎಂದಾಗ ಶಾರ್ವರಿ, ‘ಹೆಂಗೆ ನಮ್ಮ ಸರ್. ನನ್ನ ಬಿಟ್ಟು ಕೊಡಲ್ಲ. ನಾನು ಹೇಳಿದ ಮಾತು ನಮ್ಮ ಸರ್ ಗೆ ಬೇಜಾರು ಮಾಡೋಕಲ್ಲ. ಅದು ಅವರಿಗೂ ಗೊತ್ತು. ನಾನು ಕೂಡ ದುಡಿಯುವ ಸಮಯ ಶುರು ಆಗಿದೆ ಅಂತ ಹೇಳೋಕೆ ಹೋದೆ ಅಷ್ಟೇ…’ ಎಂದಳು ಆದರೂ ಮೀನಮ್ಮಳು ಈಕೆಯ ಮಾತಿನಿಂದ ತೃಪ್ತಳಾಗಲಿಲ್ಲ. ಆಕೆ ಗೊಣಗುತ್ತಲೇ ಇದ್ದಳು. ನಂತರ ಶಾರ್ವರಿಯನ್ನು ಕರೆದು, ‘ಹೇ ಲೂಜ್ ನನ್ನ ಜೊತೆಗೆ ಹೇಳಿದ ಹಾಗೇ ಉಳಿದಿರೋ ಟೀಚರ್ ಗಳ ಹತ್ರನೂ ಹೇಳಬೇಡ. ಎಲ್ಲರೂ ನನ್ನಂಗೆ ನಿನ್ನ ಸಹಿಸಿಕೊಳ್ಳಲ್ಲ ತಾಯಿ’ ಎಂದಾಗ. ‘ಅದು ಗೊತ್ತು. ಅದಕ್ಕೆ ನಿಮ್ಮ ಹತ್ರ ಮಾತ್ರ ಹಾಗೇ ಹೇಳಿದೆ. ಎಲ್ಲರ ಹತ್ರ ಹಾಗೇ ಹೇಳೋ ಅಷ್ಟು ಧೈರ್ಯ ನನಗಿಲ್ಲ ಬಿಡಿ’ ಎಂದು ನಕ್ಕಳು. ನಂತರ ಸಿಹಿಯನ್ನು ಕೊಡಲು ಮುಂದಾದಳು. ‘ಎಷ್ಟು ತಗೋಬೇಕು’ ಎಂದೆ. ‘ನಿಮ್ಮ ಇಷ್ಟ. ಎಷ್ಟಾದರೂ ತಗೊಳ್ಳಿ’ ಎಂದಳು. ಸಾಕು ಒಂದು ಎಂದಾಗ ಮತ್ತೊಂದನ್ನು ತಗೊಳಿ ಸರ್ ಎಂದು ನೀಡಿದಳು. ‘ಕೆಲಸ ಮಾಡೋ ಹತ್ರವೂ ಹೀಗೆ ಮಂಗನ ತರ ಆಡಬೇಡ. ಎಲ್ಲರೂ ನನ್ನ ಹಾಗೇ, ನಿನ್ನ ಮನೆಯವರ ಹಾಗೇ, ನಿನ್ನ ಅಲ್ಲೆಲ್ಲ ಸಹಿಸಿಕೊಳ್ಳಲ್ಲ. ಸ್ವಲ್ಪ ಗಂಭೀರವಾಗಿ ಇರು’ ಎಂದಾಗ ‘ಹೇ ಗೊತ್ತಿದೆ ಸರ್. ಇಲ್ಲೇನೋ ಆ ಸಲುಗೆ ಇದೆ ಹಾಗಾಗಿ ಹೀಗೆ ಆಡ್ತಿನಿ. ಆದರೆ ಅಲ್ಲಿ ಹೀಗೆ ಆಗಲ್ಲ. ಚೆನಾಗಿ ಕೆಲಸ ಮಾಡಿ ಒಳ್ಳೆಯ ಕೆಲಸಗಾರ್ತಿ ಅನಿಸಿಕೊಳ್ತಿನಿ ನೋಡಿ’ ಎಂಬ ಭರವಸೆಯನ್ನು ನೀಡಿದಳು. ಜೊತೆಗೆ ಎಲ್ಲಾ ಶಿಕ್ಷಕರುಗಳು ಹೇಳಿದಂತಹ ಒಂದಿಷ್ಟು ಬುದ್ಧಿಮಾತುಗಳು, ಸಲಹೆ-ಸೂಚನೆಗಳನ್ನು ನಮ್ರತೆಯಿಂದಲೇ ಸ್ವೀಕರಿಸಿದಳು.
ಒಂದಿಷ್ಟು ದಿನಗಳ ನಂತರ ಕೆಲಸದ ಜೊತೆಜೊತೆಗೆ ಮತ್ತೊಂದಿಷ್ಟು ಹೆಚ್ಚಿನ ಓದನ್ನು ಮಾಡತೊಡಗಿದಳು. ಈ ವಿಷಯವನ್ನು ಕೇಳಿಯೇ ಸಂತೋಷವಾಯಿತು. ಕೆಲ ವರ್ಷದ ಹಿಂದೆ ಈಗ ಶಾಲೆಯಲ್ಲಿ ಓದುತ್ತಿರುವ ಈಕೆಯ ಇಬ್ಬರು ಸಹೋದರಿಯರು ಮತ್ತೊಬ್ಬ ಸಹೋದರರ ಶಾಲಾ ಶುಲ್ಕವನ್ನು ಭರಿಸಬೇಕಿತ್ತು. ಒಂದು ಮಧ್ಯಾಹ್ನ ಶಾರ್ವರಿಯ ತಾಯಿ ಲಕ್ಷ್ಮೀ ರವರು ಶಾಲೆಗೆ ಬಂದರು. ‘ಎನು ಹೀಗೆ ಶಾಲೆಗೆ ಕಡೆಗೆ? ಬಹಳ ಬಿಡುವು ಮಾಡಿಕೊಂಡು ಬಂದಿದ್ದೀರಿ?’ ಎಂದಾಗ ‘ಮಕ್ಕಳ ಫೀಜ್ ಕಟ್ಟಬೇಕಲ್ಲವೇ ಸಹೋದರ ಹಾಗಾಗಿ ಬಂದೆ. ಹಾ… ಈ ಹಣವನ್ನು ನಾನಾಗಲಿ ನನ್ನ ಮನೆಯವರಾಗಲಿ ದುಡಿದದ್ದು ಅಲ್ಲ. ಮಗಳ ದುಡಿಮೆ. ತನ್ನ ತಂಗಿ-ತಮ್ಮರ ಓದಿನ ಜವಾಬ್ದಾರಿಯನ್ನು ತಾನು ವಹಿಸಿಕೊಂಡಿದ್ದಾಳೆ. ಟ್ರಾವೆಲ್ಸ್ ಇನ್ನೂ ಸರಿದಾರಿಗೆ ಬಂದಿಲ್ಲ, ಜೊತೆಗೆ ತನಗೂ ಮೆಟ್ರೋ ಆಸ್ಪತ್ರೆಯಲ್ಲಿ ಯೋಗವನ್ನು ಕಲಿಸಲು ಅವಕಾಶ ಸಿಕ್ಕಿದೆ. ಹೇಗೋ ಮಗಳು ಜವಾಬ್ದಾರಿಯನ್ನು ತೆಗೆದುಕೊಂಡಿರುವುದು ಕೊಂಚ ನೆಮ್ಮದಿ ತಂದಿದೆ’ ಎಂದರು.
ಶಾರ್ವರಿ ಶಾಲೆಯಲ್ಲಿ ಓದುತ್ತಿದ್ದಾಗ ಇದ್ದ ರೀತಿಗೂ ಈಗಿರುವ ರೀತಿಗೂ ಅದೆಷ್ಟು ಬದಲಾವಣೆಯಾಗಿದೆ. ಪ್ರೌಢಿಮೆ ಮೂಡಿದೆ ಎನಿಸದಿರದು. ತಾನು ಶಿಕ್ಷಣವನ್ನು ಗಳಿಸುವುದರ ಜೊತೆಗೆ ಈಗಲೂ ಇತರ ಕೋರ್ಸ್ ತೆಗೆದುಕೊಂಡು ಮತ್ತೊಂದಿಷ್ಟು ಓದಿನ ಕಡೆಗೆ ಗಮನಹರಿಸಿದ್ದಾಳೆ ಎಂಬುದು ಸಂತೋಷ ಎನಿಸಿದೆ. ಇದರ ಜೊತೆಗೆ ಮನೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುವುದರಲ್ಲಿ ತಾನೂ ಪಾಲು ತೆಗೆದುಕೊಳ್ಳುತ್ತಿದ್ದಾಳೆ ಎಂಬುದು ಈಕೆಯ ಬಗೆಗೆ ಅಭಿಮಾನ ಹೆಚ್ಚಿಸಿದೆ. ಈ ವಿಷಯ ತಿಳಿದಾಗಿನಿಂದ ಅವಳಿಗೆ ಒಮ್ಮೆ ಅಭಿನಂದನೆಗಳನ್ನು ತಿಳಿಸಬೇಕು ಎಂದು ಕಾಯುತ್ತಲೇ ಇದ್ದೆ. ಒಮ್ಮೆ ಆಕೆ ಊರಿಗೆ ಬಂದಿದ್ದಾಳೆ ಎಂಬುದ ತಿಳಿದಾಗ ಕೇಳಿದೆ. ‘ಖುಷಿ ಆಯ್ತು ನಿನ್ನ ಈ ಕೆಲಸ. ತಮ್ಮ-ತಂಗಿಯರ ಮೇಲಿನ ಕಾಳಜಿ’ ಎಂದಾಗ, ‘ಹೆಂಗೆ ನಾವು?’ ಅಂತ ಒಂದಿಷ್ಟು ಡೈಲಾಗ್ ಹೇಳಿದಳು. ‘ನೀನು ಇನ್ನೂ ಬದಲಾಗಿಲ್ಲ ಕಣೆ ತಾಯಿ. ಹಾಗೇ ಇದೀಯ’ ಎಂದರೆ ‘ನಾನು ಬದಲಾಗೋ ಛಾನ್ಸೇ ಇಲ್ಲ ಬಿಡಿ’. ‘ಹಾ ನಮ್ಮ ಕಛೇರಿಯಲ್ಲಿ ಕನ್ನಡ ರಾಜ್ಯೋತ್ಸವ ಹೇಗೆ ಆಚರಿಸದರು ಗೊತ್ತಾ?’ ಎಂದು ಇಂಗ್ಲೀಷ್ ನಲ್ಲಿ ಶುಭಾಶಯ ತಿಳಿಸಿದ ಫೋಟೋ ತೋರಿಸಿದಳು. ‘ಇದೇನಮ್ಮ ಹೀಗೆ?’ ಎಂದರೆ ‘ನೀವು ಖುಷಿ ಪಡಿ ನಮ್ಮ ಕಛೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿರೋದಕ್ಕೆ. ಕೆಲವು ಕಡೆಗಳಲ್ಲಿ ಅದು ಹಾಗಿಲ್ಲ. ಈ ವರ್ಷ ಆಚರಣೆ ಆಗಿದೆ. ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ಶುಭಾಶಯ ತಿಳಿಸೋ ಸಮಯ ಬಂದರೂ ಬರಬಹುದು. ಆ ನಿಟ್ಟಿನಲ್ಲಿ ನಾನು ಪ್ರಯತ್ನ ಮಾಡಿಯೇ ಮಾಡ್ತಿನಿ’ ಎಂದಳು.
ಓದಿನಲ್ಲಿ ಕೊಂಚ ಹಿಂದಿದ್ದ ವಿದ್ಯಾರ್ಥಿನಿ. ಈಗ ಓದನ್ನು ತೆಗೆದುಕೊಂಡಿರುವ ರೀತಿ, ಜೊತೆಗೆ ಓದಿಸಲು ತೆಗೆದುಕೊಳ್ಳುತ್ತಿರುವ ಕಾಳಜಿ ಗಮನಿಸಿದಾಗ ‘ಸಂಸ್ಕಾರ’ ಒಂದಿದ್ದರೆ ಎಲ್ಲವೂ ಹಿಂಬಾಲಿಸಿಕೊಂಡು ಬರುತ್ತವೆ ಎನ್ನುವಂತೆ ಈಕೆಯ ನಡೆ-ನುಡಿಗಳಲ್ಲಿ ತಿಳಿಯಬಹುದಾಗಿದೆ. ವಿದ್ಯಾರ್ಥಿನಿಯೊಬ್ಬಳು ಮನೆಯ ಜವಾಬ್ದಾರಿ ತೆಗೆದುಕೊಂಡಿದ್ದಾಳೆ ಎಂಬುದನ್ನು ಕೇಳುವುದೇ ಸಂತೋಷ. ಜೊತೆಗೆ ಆಕೆ ಸಾಗುತ್ತಿರುವ ದಾರಿ ಸರಿಯಾಗಿದೆ ಎನ್ನುವಾಗ ಒಬ್ಬ ಶಿಕ್ಷಕನಾಗಿ ಅದಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ ಎನಿಸುತ್ತದೆ. ನನಗಿಂತಲೂ ಸಂಬಳ ಹೆಚ್ಚು ಎಂದಿದ್ದ ಹುಡುಗಿ ಗುಣದಲ್ಲೂ ನನಗಿಂತಲೂ ಮುಂದಿದ್ದಾಳೇನೋ ಎನಿಸುತ್ತದೆ. ಅಕ್ಕ-ತಂಗಿ, ಅಣ್ಣ-ತಮ್ಮಂದಿರ ನಡುವೆ ಮನೆಯಲ್ಲಿ ಜಗಳ ಇದ್ದೇ ಇರುತ್ತದೆ. ಅದರ ನಡುವೆ ಜಗಳಕ್ಕಿಂತ ಪ್ರೀತಿ ದೊಡ್ಡದು ಎಂದು ಈ ರೀತಿಯ ಕಾಳಜಿ ವಹಿಸುವ ಮನಸ್ಥಿತಿಯ ಮಕ್ಕಳ ಸಂಖ್ಯೆ ಹೆಚ್ಚಾದರೆ ಪಾಠ ಕಲಿಸಿದವರಿಗೆ ಮನದ ಮೂಲೆಯಲ್ಲಿ ಮೂಡುವ ಸಂತೃಪ್ತಿಯನ್ನು ವರ್ಣಿಸುವುದೇ ಕಷ್ಟ ಎನಿಸುತ್ತದೆ…