ಮಡಿವಾಳ ಮಾಚಿದೇವ ನಿಗಮ ಮಂಡಳಿ ಮಾಜಿ ಅಧ್ಯಕ್ಷ ರಾಜು ತಲ್ಲೂರು ಹೇಳಿಕೆಗೆ ಸೊರಬ ತಾಲ್ಲೂಕು ಮಡಿವಾಳ ಸಮಾಜ ವ್ಯಾಪಕ ಖಂಡನೆ
(SHIVAMOGA): ಸೊರಬ:ಸ್ವಾರ್ಥ ರಾಜಕಾರಣ ಹಾಗೂ ವೈಯಕ್ತಿಕ ಹಿತ ಸಾಧನೆಗಾಗಿ ಮಡಿವಾಳ ಮಾಚಿದೇವ ನಿಗಮ ಮಂಡಳಿ ಮಾಜಿ ಅಧ್ಯಕ್ಷ ರಾಜು ತಲ್ಲೂರು ಅವರು ಮಡಿವಾಳ ಸಮಾಜ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವoತೆ ಪತ್ರಿಕಾ ಹೇಳಿಕೆ ನೀಡಿ ಸಮಾಜವನ್ನು ಬಲಿಕೊಡುವ ಕೀಳುಮಟ್ಟದ ರಾಜಕೀಯವನ್ನು ಸೊರಬ ತಾಲ್ಲೂಕು ಮಡಿವಾಳ ಸಮಾಜ ತೀವ್ರವಾಗಿ ಖಂಡಿಸಿದೆ.
ತಾಲೂಕಿನ ಆನವಟ್ಟಿಯಲ್ಲಿ ಶನಿವಾರ ತಾಲ್ಲೂಕು ಮಡಿವಾಳ ಸಮಾಜದ ಮುಖಂಡರು ರಾಜು ತಲ್ಲೂರು ಹೇಳಿಕೆ ಖಂಡಿಸಿ ಹಮ್ಮಿಕೊಂಡಿದ್ದ ಸಭೆಯಲ್ಲಿ ತೀವ್ರವಾಗಿ ಖಂಡನೆ ವ್ಯಕ್ತಪಡಿಸಿ ಮಾತನಾಡಿದರು. ಆನವಟ್ಟಿಯ ಶಿವಶರಣ ಮಡಿವಾಳ ಮಾಚಿದೇವ ಸಂಘದ ಅಧ್ಯಕ್ಷ ಪಿ.ಹನುಮಂತಪ್ಪ ಹೊಸಳ್ಳಿ ಮಾತನಾಡಿ, ಸಮಾಜದವರ ಬೆಂಬಲವಿಲ್ಲದೆ ಕೇವಲ ಹಣ ಬಲದ ಮೇಲೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಪಡೆದುಕೊಂಡು 17 ಕೋಟಿ ಅನುದಾನ ಪಡೆದೆ ಎಂದು ಹೇಳುವ ನೀವು ಶಿವಮೊಗ್ಗ ಜಿಲ್ಲೆಯ ಮಡಿವಾಳರಿಗೆ ಏನು ಕೊಡುಗೆ ನೀಡಿದ್ದೀರಿ. ತಾಲ್ಲೂಕು ಮಡಿವಾಳ ಸಮಾಜದ ಅಧ್ಯಕ್ಷ, ಪಧಾದಿಕಾರಿಗಳು ಸೇರಿದಂತೆ ಸಮಾಜದ 14 ಜನರನ್ನು ಕೋರ್ಟ್ಗೆ ಎಳೆದಿದ್ದೆ ನಿಮ್ಮ ಸಾಧನೆ ಎಂದು ಕುಟುಕಿದರು. ಎಸ್.ಬಂಗಾರಪ್ಪ ಅವರು ಜಿಲ್ಲಾ ಸಂಘಕ್ಕೆ ನಿವೇಶನ ಹಾಗೂ ತಾಲ್ಲೂಕು ಮಡಿವಾಳರಿಗೆ ಸಮುದಾಯ ಭವನ ಮಂಜೂರು ಮಾಡಿದ್ದರು. ಅವರ ಪುತ್ರ ಸಚಿವ ಮಧು ಬಂಗಾರಪ್ಪ ಅವರು ಆನವಟ್ಟಿ ಸಮುದಾಯ ಭವನಕ್ಕೆ 50 ಲಕ್ಷ ಅನುದಾನ ನೀಡಿದ್ದಾರೆ. ಸಮಾಜದ ಕೆಲವರನ್ನು ತಾಲ್ಲೂಕು ಪಂಚಾಯಿತಿ ಸದಸ್ಯರನ್ನಾಗಿ ಆಯ್ಕೆಯಾಗಲು ಅವಕಾಶ ನೀಡಿದ್ದಾರೆ.
ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಮಾಚಿದೇವರ ಜಯಂತಿ ಪ್ರಾರಂಭಿಸಿದರು ಮತ್ತು ನಿಗಮ ಮಂಡಳಿಯನ್ನು ಸ್ಥಾಪನೆ ಮಾಡಿ ಮಡಿವಾಳ ಸಮಾಜಕ್ಕೆ ಅಪಾರ ಕೊಡುಗೆ ನೀಡಿರುವುದು ಕಾಂಗ್ರೆಸ್ ಪಕ್ಷ ಹೀಗಿದ್ದಾಗ ರಾಜು ತಲ್ಲೂರು ಅವರು ಏಕಮುಖವಾಗಿ ಒಂದು ಪಕ್ಷದ ಪರ ಸಮಾಜ ಇದೆ ಎನ್ನುವಂತೆ ಹೇಳಿಕೆ ನೀಡುವುದು ಸರಿಯಲ್ಲ. ಮಡಿವಾಳ ಸಮಾಜವನ್ನು ಯಾರು ಮಾರಿಕೊಂಡಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು. ಮಡಿವಾಳ ಸಮಾಜಕ್ಕೆ ಯಾವ ಪಕ್ಷದವರು ಹೆಚ್ಚು ಕೊಡುಗೆ ನೀಡಿದ್ದಾರೆ ಎಂಬುವುದು, ಸಮಾಜದ ಪ್ರತಿಯೊಬ್ಬರಿಗೂ ಗೊತ್ತು, ಯಾವ ಪಕ್ಷ ಬೆಂಬಲಿಸಬೇಕು ಎಂಬುವುದು ಸಮಾಜದ ಪ್ರತಿಯೊಬ್ಬರ ವೈಯಕ್ತಿಕ ಅಭಿಪ್ರಾಯ ಹೀಗೆ ಪ್ರಚೋದನಾ ಹೇಳಿಕೆ ನೀಡುವುದು ಅಗತ್ಯವಿಲ್ಲ ಎಂದು ಶಿವಶರಣ ಮಾಚಿದೇವ ಸಂಘದ ಕಾರ್ಯದರ್ಶಿ ಅಶ್ವಿನ್ ಕುಮಾರ್ ಹೇಳಿದರು. ಮಡಿವಾಳ ಸಮಾಜದ ಹೆಸರನ್ನು ರಾಜು ತಲ್ಲೂರು ಅವರು ತಮ್ಮ ಸ್ವಾರ್ಥ ಬೆಳವಣಿಗೆಗೆ ಬಳಸಿಕೊಂಡಿದ್ದಾರೆ. ಸೊರಬದಲ್ಲಿ ಮಡಿವಾಳರ ತೀವ್ರ ವಿರೋಧ ವ್ಯಕ್ತವಾಗಿದ್ದು, ಮುಗ್ಧರನ್ನು ತನ್ನ ದಾಳಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾರೆ. ಇನ್ನೊಮ್ಮೆ ತನ್ನ ಅನುಕೂಲಕ್ಕಾಗಿ ಇಂತಹ ಹೇಳಿಕೆ ನೀಡಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ತಾಲ್ಲೂಕು ಸಂಘದ ಉಪಾಧ್ಯಕ್ಷ ಶಿವಾನಂದಪ್ಪ ಮೂಗೂರು, ಕಾರ್ಯದರ್ಶಿ ಹನುಮಂತಪ್ಪ ನೇರಲಗಿ, ನಿರ್ದೇಶಕರಾದ ಪರಶುರಾಮಪ್ಪ ಕೊಡಳ್ಳಿ, ರಾಜಶೇಖರಪ್ಪ ಆನವಟ್ಟಿ, ಮುಖಂಡರಾದ ರಘುಪತಿ, ಮಂಜಪ್ಪ ಮಾಸ್ತರ್ ಕುಬಟೂರು, ಬಸವರಾಜಪ್ಪ ಮಾಸ್ತರ್ ಆನವಟ್ಟಿ
ಉಪಸ್ಥಿತರಿದ್ದರು.
ವರದಿ: ಸಂದೀಪ ಯು.ಎಲ್., ಸೊರಬ